ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜನಪ್ರತಿನಿಧಿಗಳ ಮೌನ - ತುಳುನಾಡಿನ ದೈವಾರಾಧನೆಯ ಆಚರಣೆ, ನಂಬಿಕೆಯನ್ನು ಮುಗಿಸುವ ಹುನ್ನಾರವೇ ?

Posted On: 07-01-2022 10:41PM

ಉಡುಪಿ : ಸರಕಾರದ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಆದೇಶದಿಂದ ದೈವಾರಾಧಕರಿಗೆ ಸಮಸ್ಯೆಯಾಗಿದ್ದು ಇದನ್ನು ಕೂಡಲೇ ಪರಿಹರಿಸುವಂತೆ ಸರಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಅಖಿಲ ಭಾರತ ದೈವಾರಾಧಕರ ಒಕ್ಕೂಟ ಉಡುಪಿ - ಮಂಗಳೂರು ಇವರ ವತಿಯಿಂದ ಪಾಂಗಾಳ ಗುಡ್ಡೆಗರಡಿಯಲ್ಲಿ ಸಮಾಲೋಚನಾ ಸಭೆ ಜರಗಿತು.

ಈ ಸಂದರ್ಭ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಂಗಾಳ ಗುಡ್ಡೆ ಗರಡಿಮನೆ ಸುಧಾಕರ ಡಿ. ಅಮೀನ್ ದೈವಾರಾಧನೆ ಕ್ಷೇತ್ರವನ್ನು ಅವಲಂಭಿಸಿರುವ ಎಲ್ಲಾ ವರ್ಗದವರೂ ಕೊರೊನಾ‌ ಕಾರಣದಿಂದಾಗಿ ಎರಡು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದು, ಈ‌ ಪರಿಸ್ಥಿತಿ ಇದೀಗ ಮೂರ‌ನೇ ವರ್ಷಕ್ಕೆ ಕಾಲಿಟ್ಟಿದೆ. ದೈವಾರಾಧನೆಯ ಎಲ್ಲಾ ಆಚರಣೆಗಳೂ ಹಿಂದಿನಂತೆಯೇ ನಡೆಯುವಂತಾಗಲು ಅವಕಾಶ ಮಾಡಿ ಕೊಡುವಂತೆ ಜಿಲ್ಲೆಯ ಎಲ್ಲಾ‌ ಜನಪ್ರತಿನಿಧಿಗಳ ಬೆಂಬಲ ಪಡೆದು, ಅಧಿಕಾರಿ ವರ್ಗ ಮತ್ತು ಸರಕಾರಕ್ಕೆ ನಮ್ಮ ಬೇಡಿಕೆಗಳ ಬಗ್ಗೆ ಮನವಿ ನೀಡಬೇಕಿದೆ ಎಂದರು.

ಅಖಿಲ ಭಾರತ ದೈವಾರಾಧಕರ ಒಕ್ಕೂಟದ ಉಪಾಧ್ಯಕ್ಷ ಯೋಗಿಶ್ ಪೂಜಾರಿ, ಕುಕ್ಕೆಹಳ್ಳಿ ಕೊರಗಜ್ಜ ದೇವಸ್ಥಾನದ ಮುಖ್ಯಸ್ಥ ಕೃಷ್ಣ ಕುಲಾಲ್, ಕಾರ್ಕಳ ದೈವಾರಾಧಕರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ಮಾಳ, ಬೈರಂಪಳ್ಳಿ ಭೂತರಾಜ ದೇವಸ್ಥಾನದ ಮುಖ್ಯಸ್ಥ ಪ್ರವೀಣ್ ಶೆಟ್ಟಿ, ಹಿರಿಯಡಕ ಕಲ್ಕುಡ ದೈವಸ್ಥಾನದ ಮುಖ್ಯಸ್ಥ ಸುಧಾಕರ ಶೆಟ್ಟಿ ತಂಗಣ, ಹೆಬ್ರಿ ಘಟಕದ ಅಧ್ಯಕ್ಷ ಸುಕುಮಾರ್ ಪೂಜಾರಿ, ಕಾರ್ಕಳ ದೈವಾರಾಧಕರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ಮಾಳ, ದೊಡ್ಡಣ್ಣಗಯಡ್ಡೆ ಪಂಚ ಜುಮಾದಿ ದೇವಸ್ಥಾನದ ಗುರಿಕಾರ ನಿತಿನ್ ಪೂಜಾರಿ, ಪಾಣಾರ ಸಂಘದ ಜಿಲ್ಲಾಧ್ಯಕ್ಷ ಪಾಂಡು ಪಾಣಾರ, ಪಂಬದ ಸಮುದಾಯದ ಮುಖಂಡ ಮಾಧವ ಪಂಬದ, ನಲಿಕೆ ಸಮುದಾಯದ ಮುಖಂಡ ನಾರಾಯಣ ಪಾಣಾರ, ದೇವಾಡಿಗ ಸಮುದಾಯದ ಮುಖಂಡ ಉದಯ ಶೇರಿಗಾರ್ ಅಲೆವೂರು, ಪರವ ಸನುದಾಯದ ಮುಖಂಡ ನರಸಿಂಹ ಪರವ ಮೊದಲಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿ, ಕಾರ್ಕಳ, ಹೆಬ್ರಿ, ಕಾಪು, ಬ್ರಹ್ಮಾವರ ತಾಲೂಕಿನ ವಿವಿಧೆಡೆಗಳ ದೈವಾರಾಧಕ ಸಂಘಟನೆಯ ಪದಾಧಿಕಾರಿಗಳು, ದೈವಾರಾಧಕರು, ಸಮುದಾಯಗಳ ಮುಖಂಡರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು. ತುಳುನಾಡ ದೈವಾರಾಧಕರ ಸಂಘದ ಜಿಲ್ಲಾಧ್ಯಕ್ಷ ವಿನೋದ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.