ಕಾಪು : ಜನತಾದಳದ ವಿಜೇತ ಅಭ್ಯರ್ಥಿ ಉಮೇಶ್ ಕರ್ಕೇರರಿಗೆ ಅಭಿನಂದನಾ ಸಮಾರಂಭ
Posted On:
13-01-2022 10:37PM
ಕಾಪು : ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಜನತಾದಳ (ಜಾತ್ಯತೀತ)ಪಕ್ಷದ ವಿಜೇತ ಅಭ್ಯರ್ಥಿ ಉಮೇಶ್ ಕರ್ಕೇರರವರಿಗೆ ಅಭಿನಂದನಾ ಸಮಾರಂಭ ಹಾಗೂ ಪಕ್ಷದ ಅಭ್ಯರ್ಥಿಯಾಗಿ ಇತರೆ ವಾಡ್೯ಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ನಾಗರಿಕರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭವು ಜನವರಿ 12ರಂದು ಕೊಂಬಗುಡ್ಡೆ ವಾರ್ಡಿನಲ್ಲಿ ನಡೆಯಿತು.
ಸಮಾರಂಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ವಾಸುದೇವರಾವ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ರಾಜ್ಯ ನಾಯಕರಾದ ಉದಯ ಹೆಗ್ಡೆ ಮತ್ತು ರಾಜ್ಯ ಯುವ ಜನತಾದಳದ ಉಪಾಧ್ಯಕ್ಷರಾದ ಸೈಯದ್ ಶಾಹಿದ್ ರವರು ಮಾತನಾಡಿದರು.
ವಿಜೇತ ಅಭ್ಯರ್ಥಿ ಉಮೇಶ್ ಕರ್ಕೇರರವರು ಸನ್ಮಾನವನ್ನು ಸ್ವೀಕರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ, ತನ್ನ ವಾರ್ಡಿನಲ್ಲಿ
ಕೆಲಸ ಕಾರ್ಯಗಳನ್ನು ಮಾಡುವ ಬಗ್ಗೆ ಭರವಸೆ ನೀಡಿದರು. ತನ್ನನ್ನು ಚುನಾಯಿಸಿದ ಮತದಾರರೆಲ್ಲರಿಗೂ, ಕಾರ್ಯಕರ್ತರಿಗೂ, ಸರ್ವರಿಗೂ ಧನ್ಯವಾದಗಳನ್ನು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಯವರು ಮಾತನಾಡಿ ಜನತಾದಳ ಪಕ್ಷದ ಈವರೆಗಿನ ಸಾಧನೆ, ಮುಂದಿನ ಯೋಜನೆ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ದೇವೇಗೌಡರು ಈ ರಾಜ್ಯಕ್ಕೆ ಕೊಟ್ಟಂತಹ ಕಾರ್ಯಕ್ರಮಗಳು, ಪ್ರಾದೇಶಿಕ ಪಕ್ಷಗಳು ನಮಗೆ ಯಾವ ರೀತಿ ಅಗತ್ಯವಿದೆ ಎಂಬುದರ ಬಗ್ಗೆ ಮತ್ತು ಕುಮಾರಸ್ವಾಮಿಯವರ ಜನಪರ ಕಾರ್ಯಕ್ರಮಗಳು ಮತ್ತು ಕುಮಾರಸ್ವಾಮಿಯವರು 2023ಕ್ಕೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತನ್ನು ಹೇಳುತ್ತಾ, ಇನ್ನು ಮುಂದೆ ಕೊಂಬಗುಡ್ಡೆ ವಾರ್ಡಿನ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಉಮೇಶ್ ಕರ್ಕೇರರವರ ಒಟ್ಟಿಗೆ ತಾನು ಕೂಡ ಇದ್ದು ತಮ್ಮೆಲ್ಲರ ಕೆಲಸಮಾಡುತ್ತೇನೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಸಹಕರಿಸಿದ ಕಾರ್ಯಕರ್ತರಿಗೆ, ಮತದಾರ ಬಾಂಧವರಿಗೆ, ಊರಿನವರಿಗೆ ಧನ್ಯವಾದಗಳನ್ನು ಸಲ್ಲಿಸಿ ಯಾವತ್ತೂ ನಿಮ್ಮೆಲ್ಲರ ಸಹಕಾರ ನಮ್ಮ ಪಕ್ಷಕ್ಕೆ ಇರಲಿ ನಾವು ನಿಮ್ಮೊಂದಿಗಿದ್ದೇವೆ ಮುಂದಿನ ದಿನಗಳಲ್ಲಿ ಕಾಪು ಪುರಸಭೆಯ 23 ವಾರ್ಡ್ ಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಸ್ಪರ್ಧಾ ಕಣಕ್ಕೆ ಇಳಿಸಿ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು. ಅಷ್ಟೇ ಅಲ್ಲದೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿ ಪಕ್ಷವನ್ನು ಅಧಿಕಾರ ತರುವಲ್ಲಿ ನಾವು ಪ್ರಯತ್ನ ಮಾಡುತ್ತೇವೆ ನಮಗೆ ವಿಶ್ವಾಸ ಇದೆ ಎಂದರು. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಬದಿಗಿರಿಸಿ ಪ್ರಾದೇಶಿಕ ಪಕ್ಷಕ್ಕೆ ಮತದಾರರು ಮನ್ನಣೆ ಕೊಡುತ್ತಾರೆ. ನಮಗೆ ಒಮ್ಮೆ ಅವಕಾಶ ಮಾಡಿಕೊಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಊರಿನ ಪ್ರಮುಖ ಹಿರಿಯರು, ಪಕ್ಷದ ರಾಜ್ಯ, ಜಿಲ್ಲಾ ನಾಯಕರುಗಳು ಉಡುಪಿ ಜಿಲ್ಲೆಯ ವೀಕ್ಷಕರಾದ ಸುಧಾಕರ ಶೆಟ್ಟಿ, ಕಾಪು ಬ್ಲಾಕ್ ಕಾರ್ಯಾಧ್ಯಕ್ಷರಾದ ರಾಜು ಆರ್ ಪುತ್ರನ್, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜಯರಾಮ ಆಚಾರ್ಯ ವಂದಿಸಿದರು.