ಜಿಲ್ಲೆಯ ಪ.ಜಾತಿ, ಪಂಗಡದ ಎಲ್ಲಾ ವಸತಿ ರಹಿತರಿಗೆ ಭೂಮಿ ನೀಡಲು ಕ್ರಮ
Posted On:
14-01-2022 09:12PM
ಉಡುಪಿ : ಉಡುಪಿ ಜಿಲ್ಲೆಯಲ್ಲಿರುವ ವಸತಿ ರಹಿತ ಪ.ಜಾತಿ ಮತ್ತು ಪಂಗಡದ ಅರ್ಹ ಎಲ್ಲಾ ಕುಟುಂಬಗಳಿಗೆ ಭೂಮಿ ನೀಡುವ ಕುರಿತಂತೆ, ಲಭ್ಯವಿರುವ ಭೂಮಿಯ ಪ್ರಮಾಣ ಕುರಿತು 15 ದಿನದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ಹಾಲ್ನಲ್ಲಿ, ಉಡುಪಿ ಜಿಲ್ಲೆಯ ಡಿಸಿ ಮನ್ನಾ ಜಾಗದ ಸಮಸ್ಯೆ ಕುರಿತ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಪ.ಜಾತಿ ಮತ್ತು ಪಂಗಡದ ಕುಟುಂಬ ತಮಗೆ ಸ್ವಂತ ಜಾಗ ಇಲ್ಲ ಎನ್ನುವಂತಾಗಬಾರದು. ಆದ್ದರಿಂದ ಜಿಲ್ಲೆಯಲ್ಲಿ ಲಭ್ಯವಿರುವ ಡಿಸಿ ಮನ್ನಾ ಭೂಮಿ, ಕಂದಾಯ ಭೂಮಿಯ ವಿವರಗಳನ್ನು ಸಂಗ್ರಹಿಸಿ ಅದರಲ್ಲಿ ಪ.ಜಾತಿ ಪಂಗಡದ ಜನತೆಗೆ ನೀಡಬಹುದಾದ ಭೂಮಿಯ ಪ್ರಮಾಣ ಮತ್ತು ಖಾಸಗಿಯವರಿಂದ ಖರೀದಿಸಿ ನೀಡಬಹುದಾದ ಭೂಮಿ ಮತ್ತು ಭೂ ಒಡೆತನ ಯೋಜನೆಯ ಮೂಲಕ ನೀಡಬಹುದಾದ ಭೂಮಿಯ ಬಗ್ಗೆ ಎಲ್ಲಾ ತಾಲೂಕುವಾರು ಸಮಗ್ರ ವಿವರಗಳನ್ನು ನೀಡುವಂತೆ ಸಚಿವರು ಸೂಚಿಸಿದರು.
ಜಿಲ್ಲೆಯಲ್ಲಿ ಭೂಮಿಯ ಅಗತ್ಯತೆ ಇರುವ ಪ.ಜಾತಿ, ಪಂಗಡದದರ ಸಂಖ್ಯೆ, ಈಗಾಗಲೇ ಭೂಮಿ ಕೋರಿ ಅರ್ಜಿ ಸಲ್ಲಿಸಿರುವ ಪ.ಜಾತಿ ಪಂಗಡದವರ ವಿವರ, ಇವರಿಗೆ ನೀಡಲು ಅಗತ್ಯವಿರುವ ಭೂಮಿಯ ಪ್ರಮಾಣ ಕುರಿತಂತೆ ಎಲ್ಲಾ ಗ್ರಾಮ ಮತ್ತು ತಾಲೂಕುವಾರು ವಿವರಗಳನ್ನು ಸಂಗ್ರಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಪ.ಜಾತಿ ಮತ್ತು ಪಂಗಡದವರಿಗೆ ಖಾಸಗಿಯವರಿಂದ ಭೂಮಿ ಖರೀದಿಸಿ ನೀಡುವ ಕುರಿತಂತೆ ಹಣದ ಕೊರತೆ ಇಲ್ಲ. ಇದಕ್ಕಾಗಿ ಅಗತ್ಯವಿರುವ ಸಂಪೂರ್ಣ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಆದ್ದರಿಂದ ಶೀಘ್ರದಲ್ಲಿ ಭೂಮಿಯನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪಂಗಡದ ಯಾವುದೇ ಕುಟುಂಬ ಸ್ವಂತ ಭೂಮಿಯಿಲ್ಲದಂತೆ ಇರಬಾರದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರು, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಸೀಲ್ದಾರ್ ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.