ಮಹನೀಯರ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತ: ಜಿಲ್ಲಾಧಿಕಾರಿ ಕೂರ್ಮಾರಾವ್ .ಎಂ
Posted On:
21-01-2022 09:37PM
ಉಡುಪಿ : ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಮಹನೀಯ ವ್ಯಕ್ತಿಗಳಾದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಅವರು ನೀಡಿರುವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಹಾಗೂ ತ್ರಿವಿಧ ದಾಸೋಹಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರು ಜಾತಿ ಧರ್ಮ ಬೇಧವಿಲ್ಲದೇ ಮಾಡಿರುವ ತ್ರಿವಿಧ ದಾಸೋಹ ಸೇವೆಯು ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿಲಾದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಹಾಗೂ ದಾಸೋಹ ದಿನ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಮಹನೀಯ ವ್ಯಕ್ತಿಗಳು ನೀಡಿರುವ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಹಾಗೂ ತಮ್ಮ ದೈನಂದಿನ ಕರ್ತವ್ಯಗಳಲ್ಲಿ ಅಳವಡಿಸಿಕೊಂಡು ಅದರಂತೆ ನಡೆಯಬೇಕು. ಇಂತಹ ವ್ಯಕ್ತಿಗಳ ಜೀವನ ಚರಿತ್ರೆಯ ಬಗ್ಗೆ ಅರಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣನಾಥ ಎಕ್ಕಾರು, ಪ್ರಜಾಪ್ರಭುತ್ವದ ಮೂಲ ಉದ್ದೇಶವಾದ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವವನ್ನು ಶರಣರು ಮತ್ತು ಅನೇಕ ಮಹನೀಯರು 800 ವರ್ಷಕ್ಕೂ ಮೊದಲೇ ತಿಳಿಸಿದ್ದರು. ವಿಶ್ವ ಮಾನವ ತತ್ವದ ಪ್ರತಿಪಾದನೆ ಮಾಡಿದ್ದರು ಎಂದರು.
ಅಂಬಿಗರ ಚೌಡಯ್ಯ ಅವರು, ಸಮಾಜದಲ್ಲಿನ ಅಸಮಾನತೆ ಬಗ್ಗೆ ನೇರ, ದಿಟ್ಟವಾಗಿ ನುಡಿದಿದ್ದು, ಅವರ ಸಂದೇಶಗಳಲ್ಲಿ ವಾಸ್ತವಿಕತೆ, ವೈಚಾರಿಕತೆ, ಜ್ಞಾನ ಎಲ್ಲವೂ ಇದೆ. ಅಂತರಂಗ ಶುದ್ಧತೆಯೇ ನಿಜವಾದ ಮಾನವ ಧರ್ಮ ಎಂದಿದ್ದರು.
ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಅವರು, ಸಮಾಜವೇವೆಯ ಸಿದ್ಧಾಂತವನ್ನು ಕಾಯಕವನ್ನಾಗಿ ಮಾಡಿಕೊಂಡು, ಜನಸಾಮಾನ್ಯರಿಗಾಗಿ ನಾಡಿನಾದ್ಯಂತ ಹಲವು ಕೆರೆ, ಬಾವಿಗಳನ್ನು ನಿರ್ಮಿಸಿ, ಶರಣ ಪರಂಪರೆಯಲ್ಲಿ ಮಾನವ ಸೇವೆಯ ಮೂಲಕ ಸಮಾಜಸೇವೆಯನ್ನು ಪರಿಚಯಿಸಿದ್ದರು ಎಂದರು.
ಮಹಾಯೋಗಿ ವೇಮನ ಅವರು ಕವಿ, ಯೋಗಿ, ತತ್ವಜ್ಞಾನಿ, ದಾರ್ಶನಿಕರಾಗಿದ್ದು, ಸುಸಂಸ್ಕೃತ ಬದುಕಿನ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ ಎಂದರು.
ತ್ರಿವಿಧ ದಾಸೋಹಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಕುರಿತು ಮಾತನಾಡಿದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಲಕ್ಷಾಂತರ ಮಂದಿಗೆ ಉಚಿತ ಶಿಕ್ಷಣ, ವಸತಿ, ಆಹಾರ ಒದಗಿಸುವ ಮೂಲಕ ಶಿವಕುಮಾರ ಸ್ವಾಮೀಜಿ ಅವರು ನಾಡಿನ ಕೀರ್ತಿಯನ್ನು ವಿಶ್ವದಾದ್ಯಂತ ಹೆಚ್ಚಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿ, ವಂದಿಸಿದರು. ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.