ಬೆಳ್ಮಣ್ಣು: ಎರಡು ಗ್ರಂಥಗಳ ಲೋಕಾರ್ಪಣೆ
Posted On:
25-01-2022 02:01PM
ಬೆಳ್ಮಣ್ಣು: ಲಯನ್ಸ್ ಕ್ಲಬ್ ಬೆಳ್ಮಣ್ಣು ಆಶ್ರಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಲಯನ್ಸ್ ಭವನದಲ್ಲಿ, ಮುದ್ದಣ ಜಯಂತಿ ಮತ್ತು ಎರಡು ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಲ|ಎನ್.ಸುಹಾಸ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಅಧ್ಯಕ್ಷರಾದ ಡಾ. ಜಿ. ಎನ್. ಉಪಾಧ್ಯ ಅವರ 'ವಾಙ್ಮಯ ವಿವೇಕ' ಮತ್ತು ಡಾ. ಬಿ. ಜನಾರ್ದನ ಭಟ್ ಅವರ 'ಸಾಹಿತ್ಯ ವಿಮರ್ಶೆ: ಒಂದು ಪ್ರವೇಶಿಕೆ' ಗ್ರಂಥಗಳು ಲೋಕಾರ್ಪಣೆಗೊಂಡವು.
ವಿದ್ವಾಂಸ ಕೆ. ಎಲ್. ಕುಂಡಂತಾಯ ಮತ್ತು ಲಯನ್ಸ್ ಕ್ಲಬ್ ಕಾರ್ಯದರ್ಶಿ, ಸಾಹಿತಿ ಲ| ಬಿ. ಸೀತಾರಾಮ ಭಟ್ ಅವರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್. ಅವರು ಮುಖ್ಯ ಅತಿಥಿಯಾಗಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಎನ್. ಶ್ಯಾಮಸುಂದರ ಶೆಟ್ಟಿಯವರು ಸ್ವಾಗತಿಸಿದರು. ಲಯನ್ಸ್ ಖಜಾಂಚಿ ಲ| ವಿ. ಕೆ. ರಾವ್ ಅವರು ವಂದನಾರ್ಪಣೆ ಸಲ್ಲಿಸಿದರು.
ನಂದಳಿಕೆಯ ಕವಿಮುದ್ದಣ ಮಿತ್ರಮಂಡಳಿಯ ಅಧ್ಯಕ್ಷರೂ ಆಗಿರುವ ಎನ್. ಸುಹಾಸ್ ಹೆಗ್ಡೆಯವರು ಮುದ್ದಣನ ನೆನಪಿನಲ್ಲಿ ಸಾಹಿತಿಗಳನ್ನು ಮತ್ತು ಸಾಹಿತ್ಯ ಕೃತಿಗಳನ್ನು ಗೌರವಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಕೆ. ಎಲ್. ಕುಂಡಂತಾಯ ಅವರು ಕೃತಿಗಳ ಮಹತ್ವವನ್ನು ತೆರೆದಿಟ್ಟರು. ಸುದರ್ಶನ ವೈ.ಎಸ್. ಅವರು ಶುಭಹಾರೈಸಿದರು. ಲೇಖಕ ಡಾ. ಬಿ. ಜನಾರ್ದನ ಭಟ್ ಅವರು ಈ ಕೃತಿಗಳ ರಚನೆಯ ಹಿನ್ನೆಲೆಯನ್ನು ವಿವರಿಸಿದರು.