ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ವ್ಯವಸ್ಥೆಗೆ ಆದ್ಯತೆ: ಜಂಟಿ ಮುಖ್ಯ ಚುನಾವಣಾಧಿಕಾರಿ ಡಿ.ಶಂಭುಶೆಟ್ಟಿ

Posted On: 06-02-2022 09:49AM

ಉಡುಪಿ : ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ವ್ಯವಸ್ಥೆಯ ಬಳಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಚುನಾವಣಾ ಪ್ರಕ್ರಿಯೆಯ ವಿವಿಧ ಹಂತದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಬಗ್ಗೆ ಹೆಚ್ಚಿನ ತಾಂತ್ರಿಕ ಕೌಶಲ್ಯವನ್ನು ಪಡೆದುಕೊಳ್ಳುವಂತೆ ರಾಜ್ಯದ ಜಂಟಿ ಮುಖ್ಯ ಚುನಾವಣಾಧಿಕಾರಿ ಡಿ.ಶಂಭು ಶೆಟ್ಟಿ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ, ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ನೋಂದಣಿ ಅಭಿಯಾನದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳಾದ ಮತದಾರರ ನೊಂದಣಿ, ತಿದ್ದುಪಡಿಗಳನ್ನು ಆನ್ಲೈನ್ ಮೂಲಕ ಮಾಡಲು ಅವಕಾಶ ನೀಡಿದ್ದು, ಮತಗಟ್ಟೆ ಅಧಿಕಾರಿಗಳಿಗೆ ವಿವಿಧ ಆಪ್ಗಳನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ ತರಬೇತಿಗಳನ್ನೂ ಸಹ ಆನ್ಲೈನ್ ಮೂಲಕವೇ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ, ಚುನಾವಣೆಯ ವಿವಿಧ ಹಂತದಲ್ಲಿ ಅತ್ಯಂತ ಸುಲಭ ಮತ್ತು ನಿಖರ ಹಾಗೂ ತ್ವರಿತ ಕಾರ್ಯನಿರ್ವಹಣೆಗಾಗಿ ಚುನಾವಣಾ ಆಯೋಗವು ಮತ್ತಷ್ಟು ವಿದ್ಯುನ್ಮಾನ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿದ್ದು, ಎಲ್ಲಾ ಆಧಿಕಾರಿಗಳು ಮತ್ತು ಸಿಬ್ಬಂದಿಗಳು ಇವುಗಳನ್ನು ಬಳಸುವ ಬಗ್ಗೆ ತಾಂತ್ರಿಕವಾಗಿ ತಿಳಿದುಕೊಳ್ಳಬೇಕು. ಈ ಬಗ್ಗೆ ಚುನಾವಣಾ ಆಯೋಗದಿಂದ ತರಬೇತಿಯನ್ನೂ ಸಹ ನೀಡಲಾಗುವುದು ಎಂದರು. ಉಡುಪಿ ಜಿಲ್ಲೆಯಲ್ಲಿ ಮತದಾರರ ವಿಶೇಷ ನೋಂದಣಿ ಆಭಿಯಾನವನ್ನು ಅತ್ಯುತ್ತಮ ರೀತಿಯಲ್ಲಿ ನಡೆಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಆಯೋಗದಿಂದ ಕೋರುವ ಯಾವುದೇ ವರದಿಯನ್ನು ಅತ್ಯಂತ ನಿಖರವಾಗಿ ಮತ್ತು ಶೀಘ್ರದಲ್ಲಿ ಉಡುಪಿ ಜಿಲ್ಲೆಯಿಂದ ನೀಡುತ್ತಿದ್ದು, ಇದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಮತದಾರರ ವಿಶೇಷ ನೋಂದಣಿ ಅಭಿಯಾನದ ನಂತರ ಜಿಲ್ಲೆಯಲ್ಲಿ 487676 ಪುರುಷರು, 525155 ಮಹಿಳೆಯರು, ಇತರೆ 11 ಸೇರಿ ಒಟ್ಟು 1012842 ಮಂದಿ ಮತದಾರರಿದ್ದು, ಇದರಲ್ಲಿ 18-19 ವಯೋಮಾನದ 8392 ಯುವ ಮತದಾರರಿದ್ದಾರೆ. ಯುವ ಮತದಾರರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸುವ ಅಗತ್ಯವಿದ್ದು, 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರವಹಿಸುವಂತೆ ತಿಳಿಸಿದ ಅವರು, ಒಬ್ಬನೇ ವ್ಯಕ್ತಿ ಎರಡು ಕಡೆಯಲ್ಲಿ ನೋಂದಣಿ ಆಗದಂತೆ ಮತ್ತು ಎರಡು ಎಪಿಕ್ ಕಾರ್ಡ್ಗಳನ್ನು ಪಡೆಯದಂತೆ ನೋಡಿಕೊಳ್ಳಿ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈ ಬಿಡುವ ಮುಂಚೆ ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿ ಎಂದರು. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇಡೀ ರಾಷ್ಟ್ರದಲ್ಲಿ ಕರ್ನಾಟಕದಲ್ಲಿ ಮಾತ್ರ ಚುನಾವಣೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ಈಗಿನಿಂದಲೇ ಪರಿಶೀಲನೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಮತದಾನ ಕೇಂದ್ರಗಳನ್ನು ಪರಿಶೀಲಿಸಲು ಕೇಂದ್ರ ಚುನಾವಣಾ ಆಯೋಗದ ತಂಡ ಭೇಟಿ ನೀಡಲಿದೆ ಎಂದ ಅವರು, ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲಗಳಾಗದಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮಾನಿಟರಿಂಗ್ ಸೆಲ್ನ ಹಿರಿಯ ಸಮಾಲೋಚಕ ಬಿ.ಎಸ್.ಹಿರೇಮಠ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲೆಯ ಎಲ್ಲಾ ತಹಸೀಲ್ದಾರ್ಗಳು ಹಾಗೂ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.