ಯು.ಟಿ ಖಾದರ್ ಮತ್ತು ಎಸ್.ಐ.ಓ ಕರ್ನಾಟಕದ ನಿಯೋಗದಿಂದ ಉನ್ನತ ಶಿಕ್ಷಣ ಸಚಿವರ ಭೇಟಿ
Posted On:
17-02-2022 10:02PM
ಮಂಗಳೂರು : ವಿಧಾನಸಭೆಯ ವಿಪಕ್ಷ ಉಪನಾಯಕ ಯು. ಟಿ. ಖಾದರ್ ಮತ್ತು ಎಸ್.ಐ.ಓ ಕರ್ನಾಟಕದ ನಿಯೋಗದಿಂದ ಉನ್ನತ ಶಿಕ್ಷಣ ಇಲಾಖೆಯ ಸಚಿವರಾದ ಅಶ್ವಥ್ ನಾರಾಯಣ ಅವರನ್ನು ವಿಧಾನಸಭೆಯ ಕಚೇರಿಯಲ್ಲಿ ಭೇಟಿ ಮಾಡಿ ಪದವಿ ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸುತ್ತಿರುವುದರ ಕುರಿತು ಚರ್ಚಿಸಲಾಯಿತು.
ರಾಜ್ಯದಲ್ಲಿ ನಡೆಯುತ್ತಿರುವ ಸಮವಸ್ತ್ರದ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟಿನ ಮಧ್ಯಂತರ ಆದೇಶವು ತಳಮಟ್ಟದಲ್ಲಿ ವಿವಿಧ ಗೊಂದಲಗಳಿಗೆ ಕಾರಣವಾಗಿದ್ದು, ರಾಜ್ಯದ ಕೆಲವು ಪದವಿ ಕಾಲೇಜುಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುತ್ತಿರುವ ಬಗ್ಗೆ ವರದಿಯಾಗಿದ್ದು ಅದರ ಬಗ್ಗೆ ಉನ್ನತ ಶಿಕ್ಷಣದ ಇಲಾಖೆಯಿಂದ ಸ್ಪಷ್ಟವಾದ ಮಾರ್ಗದರ್ಶನವನ್ನು ಕಾಲೇಜುಗಳಿಗೆ ನೀಡುವಂತೆ ಆಗ್ರಹಿಸಲಾಯಿತು.
ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಘನತೆಯ ವ್ಯಕ್ತಿತ್ವವನ್ನು ಇದು ಉಲ್ಲಂಘಿಸುತ್ತದೆ ಹಾಗೂ ಈ ಪ್ರಕ್ರಿಯೆಯೂ ಸಾಮಾಜಿಕವಾಗಿ ಸಭ್ಯತೆಯನ್ನು ಮೀರುವ ನಡೆಯಾಗಿದ್ದು ಇದು ಖಂಡನೀಯವಾಗಿದೆ.
ಈ ಸಂದರ್ಭದಲ್ಲಿ ಸಚಿವ ಅಶ್ವಥ್ ನಾರಾಯಣ ರವರು ನಿರ್ದಿಷ್ಟ ಸಮವಸ್ತ್ರ ನಿಗದಿಪಡಿಸಿರುವ ಕಾಲೇಜುಗಳನ್ನು ಹೊರತು ಪಡಿಸಿ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಿಜಾಬ್ ಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಮೂಡಿಸಬಾರದೆಂದು ಸ್ಪಷ್ಟವಾಗಿ ತಿಳಿಸಿದ್ದು ಕೆಲವು ಕಾಲೇಜುಗಳಲ್ಲಿ ಅಲ್ಲಿನ ಆಡಳಿತ ಮಂಡಳಿಯು ಸಮವಸ್ತ್ರ ನಿಗದಿಪಡಿಸಿದ್ದಲ್ಲಿ ಕೋರ್ಟ್ ಆದೇಶವನ್ನು ಪರಿಗಣಿಸಿ ಸೌಹಾರ್ದಯುತವಾಗಿ ಅನುಷ್ಠಾನ ಮಾಡಬೇಕು ಎಂದರು, ಶಾಲಾ ಅಥವಾ ಕಾಲೇಜಿನ ಗೇಟಿನ ಬಳಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ತಡೆಯುವಂತಿಲ್ಲ, ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರವೇಶಿಸಬಹುದಾಗಿದೆ, ಅಲ್ಲದೇ ಈ ಆದೇಶವು ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದರು.
ಇದೇ ವೇಳೆ ಯು.ಟಿ ಖಾದರ್ ನೇತೃತ್ವದ ಶಾಸಕರ ನಿಯೋಗವು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರನ್ನು ಭೇಟಿ ಮಾಡಿ ಸಮವಸ್ತ್ರದ ವಿವಾದದ ಬಗ್ಗೆ ಮಾತುಕತೆ ನಡೆಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.