ಧಾರ್ಮಿಕ ಭಾವನೆಗೆ ಧಕ್ಕೆ ತಂದ ಇನ್ ಸ್ಟಾಗ್ರಾಂ ಟ್ರೋಲ್ ಕಿಂಗ್ 193 ಪೇಜ್ ಅಡ್ಮಿನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
Posted On:
27-02-2022 03:54PM
ಮಂಗಳೂರು : ಇನ್ ಸ್ಟಾಗ್ರಾಂ ಖಾತೆಯಲ್ಲಿ ವ್ಯಕ್ತಿಯೋರ್ವ ಪ್ರಾರ್ಥನಾಲಯ ಗೋಪುರದ ಮೇಲೆ ಅನ್ಯಧರ್ಮದ ಬಾವುಟ ಹಾರಾಟ ನಡೆಸುವಂತೆ ಎಡಿಟ್ ಮಾಡಿದ ಮೂರು ವಿಡಿಯೋಗಳನ್ನು ಅಪ್ ಲೋಡ್ ಮಾಡಿರುವುದನ್ನು ಕಂಡು ಈ ಪೇಜ್ ನ ವಿರುದ್ಧ ಮಂಗಳೂರಿನ ನಿವಾಸಿಯೋರ್ವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ತಿಳಿಸಿದಂತೆ ಫೆಬ್ರವರಿ 24ರಂದು ಬೆಳಿಗ್ಗೆ ಸುಮಾರು 8ಗಂಟೆಗೆ ತನ್ನ ಸ್ನೇಹಿತರೊಂದಿಗೆ ಇನ್ ಸ್ಟಾ ಗ್ರಾಂ ಖಾತೆಯನ್ನು ಪರಿಶೀಲಿಸುತ್ತಿರುವಾಗ troll_king_193 ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಯಾರೋ ವ್ಯಕ್ತಿಯು ಪ್ರಾರ್ಥನಾಲಯ ಗೋಪುರದ ಮೇಲೆ ಅನ್ಯಧರ್ಮದ ಬಾವುಟ ಹಾರಾಟ ನಡೆಸುವಂತೆ ಎಡಿಟ್ ಮಾಡಿದ ಮೂರು ವಿಡಿಯೋಗಳನ್ನು ಅಪ್ ಲೋಡ್ ಮಾಡಿ ಮಾಡುತ್ತಿರುವುದು ಕಂಡು ಬಂದು ತಮ್ಮ ಮನಸ್ಸಿಗೆ ನೋವುಂಟಾಗಿರುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಮಂಗಳೂರಿನಂತಹ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಕೋಮು ಗಲಭೆ ನಡೆದು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಆದುದರಿಂದ troll_king_193 ಎಂಬ ಇನ್ ಸ್ಟಾಗ್ರಾಂ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಮಂಗಳೂರು ನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅ.ಕ್ರ. 29/2022 ಕಲಂ 66(ಸಿ)66(ಡಿ), ಐಟಿ ಕಾಯ್ದೆ ಮತ್ತು ಕಲಂ 153(ಎ), 505(2) ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣಕ್ಕೆ ಸಂಬಂಧಿಸಿ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಬಾಲಕನೊಬ್ಬನನ್ನು ವಿಚಾರಿಸಿಕೊಂಡು ಸಿಇಎನ್ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.