ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಅಭಿಯಾನ ಕಾರ್ಯಕ್ರಮ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 05-03-2022 02:27PM

ಉಡುಪಿ : ಬಾಲ್ಯ ವಿವಾಹ ನಿಷೇದ ಅಂಗವಾಗಿ ವ್ಯಾಪಕ ಅರಿವು ಮೂಡಿಸಲು ಜಿಲ್ಲೆಯಲ್ಲಿ ಮಾರ್ಚ್ 6 ರಿಂದ 10 ರ ವರೆಗೆ ಎಲ್.ಇ.ಡಿ. ವಾಹನಗಳ ಮೂಲಕ ವಿಶೇಷ ಅಭಿಯಾನ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. ಅವರು ಇಂದು, ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಲ್ಯ ವಿವಾಹದ ನಿಷೇದ ಕುರಿತಂತೆ ಜಿಲ್ಲೆಯ 9 ಹೋಬಳಿಗಳಲ್ಲಿ ಪ್ರತಿ ಹೋಬಳಿಯಲ್ಲಿ 5 ಕಾರ್ಯಕ್ರಮಗಳಂತೆ ಒಟ್ಟು 25 ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಎಲ್.ಇ.ಡಿ ವಾಹನಗಳ ಮೂಲಕ ಕಿರು ಚಿತ್ರ ಪ್ರದರ್ಶನ, ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ, ಸಹಿ ಸಂಗ್ರಹ ಅಭಿಯಾನ, ಮನವ ಸರಪಳಿ ರಚನೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ, ಬಾಲ್ಯ ವಿವಾಹದಿಂದ ಪಾರಾದ ವಿದ್ಯಾರ್ಥಿನಿಯರಿಂದ ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದರು.

ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಜಾಗದಲ್ಲಿ ಕಾರ್ಯಕ್ರಮ ಆಯೋಜಿಸಿ, ಕಾರ್ಯಕ್ರಮ ಏರ್ಪಡಿಸುವ ಕುರಿತಂತೆ ಎಲ್ಲಾ ಸ್ಥಳೀಯ ಜನಪ್ರತಿಧಿಗಳಿಗೆ ಮಾಹಿತಿ ನೀಡುವಂತೆ ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಸ್ವಯಂ ಸೇವಾ ಸಂಘಟನೆಗಳ ಸದಸ್ಯರು, ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ, ಬಾಲ್ಯ ವಿವಾಹ ತಡೆಗೆ ನಿಯೋಜಿಸಿರುವ ವಿವಿಧ ಅಧಿಕಾರಿಗಳು, ಭಾಗವಹಿಸಬೇಕು ಎಂದು ತಿಳಿಸಿದರು.

ಮಾರ್ಚ್ 6 ರಂದು ಬೆಳಗ್ಗೆ 9.30 ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ, ಪೌರಾಯುಕ್ತ ಉದಯ ಶೆಟ್ಟಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಡಿಹೆಚ್ಓ ಡಾ.ನಾಗಭೂಷಣ ಉಡುಪ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಮತ್ತಿತರರು ಉಪಸ್ಥಿತರಿದ್ದರು.