ವಿದ್ಯಾರ್ಥಿ ಆತ್ಮಹತ್ಯೆ : ಡೊನೇಷನ್ ಪಡೆದು ಉತ್ತಮ ಶಿಕ್ಷಣ ನೀಡದ ಕಾಲೇಜು ಮುಖ್ಯಸ್ಥ ಮತ್ತು ಪರೀಕ್ಷೆಗೆ ಕುಳಿತುಕೊಳ್ಳಲು ಬಿಡದ ಪ್ರಾಧ್ಯಾಪಕನ ವಿರುದ್ಧ ದೂರು ದಾಖಲು
Posted On:
16-03-2022 11:04PM
ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಹೊಟೆಲ್ ಮ್ಯಾನೇಜ್ಮೆಂಟ್ ಕಾಲೇಜು ಡೊನೇಷನ್ ಪಡೆದು ಉತ್ತಮ ಶಿಕ್ಷಣ ನೀಡದಿರುವ ಮತ್ತು ಅಲ್ಲಿನ ಪ್ರಾಧ್ಯಾಪಕರೋರ್ವರ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೈದ ಪ್ರಕರಣ ಉರ್ವ ಠಾಣೆಯಲ್ಲಿ ದಾಖಲಾಗಿದೆ.
ಬೆಂಗಳೂರು ನಗರದ ಕುಮಾರಸ್ವಾಮಿ ಬಡಾವಣೆಯ ನಿವಾಸಿಯಾದ ಭರತ್ ಭಾಸ್ಕರ್ (20) 2020-21ನೇ ಸಾಲಿನಲ್ಲಿ ಹೆಚ್ಚಿನ ಡೊನೇಷನ್ ನೀಡಿ ಮಂಗಳೂರು ನಗರದ ಹೊಟೆಲ್ ಮ್ಯಾನೇಜ್ಮೆಂಟ್ ಕಾಲೇಜೊಂದಕ್ಕೆ ಸೇರುತ್ತಾನೆ. ಆದರೆ ಅಲ್ಲಿಯ ಪ್ರಾಧ್ಯಾಪಕರು ಸರಿಯಾದ ರೀತಿಯಲ್ಲಿ ಶಿಕ್ಷಣ ನೀಡದೆ, ಅಲ್ಲಿನ ಪ್ರಾಧ್ಯಾಪಕರೋರ್ವರು ಪ್ರಾಜೆಕ್ಟ್ ವಕ್೯ ಸರಿಯಿಲ್ಲ ಎಂಬ ನೆಪದಲ್ಲಿ ಪರೀಕ್ಷೆಗೆ ಕುಳಿತುಕೊಳ್ಳಲಾಗದು ಎಂದು ಮನೆಗೆ ಕಳುಹಿಸಿರುತ್ತಾರೆ.
ಮನನೊಂದ ಆತ ಬೆಂಗಳೂರಿನಲ್ಲಿರುವ ತಾಯಿಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸದ್ದನ್ನು ಕಂಡು ವಾಟ್ಸಾಪ್ ಸಂದೇಶದ ಮೂಲಕ ಈ ಕಾಲೇಜು ಸರಿಯಿಲ್ಲ ಹಾಗೂ ಕಾಲೇಜಿನಲ್ಲಿ ಪ್ರಾಧ್ಯಾಪಕರಿಲ್ಲ ಆದ್ದರಿಂದ ಈ ಲೋಕ ತ್ಯಜಿಸುತ್ತಿದ್ದೇನೆ ಎಂದಿದ್ದಾನೆ.
ನಂತರ ಆತನ ಕಾಲೇಜಿನ ಪ್ರಾಧ್ಯಾಪಕರೋರ್ವರನ್ನು ಆತನ ಹೆತ್ತವರು ಸಂಪರ್ಕಿಸಿದಾಗ ಆತ ತಾನಿರುವ ರೂಮಿನಲ್ಲಿ ಆತ್ಮಹತ್ಯೆಗೈದ ಬಗ್ಗೆ ತಿಳಿದಿರುತ್ತದೆ.
ಈ ಬಗ್ಗೆ ಹೆತ್ತವರು ಡೊನೆಷನ್ ಪಡೆದು ಉತ್ತಮ ಶಿಕ್ಷಣ ನೀಡದ ಕಾಲೇಜಿನ ಮುಖ್ಯಸ್ಥ ಮತ್ತು ಅವಹೇಳನ ಮಾಡುತ್ತಿದ್ದ ಪ್ರಾಧ್ಯಾಪಕನ ಮೇಲೆ ಉರ್ವ ಠಾಣೆಯಲ್ಲಿ ಮಾಚ್೯ 16ರಂದು ದೂರು ದಾಖಲಿಸಿದ್ದಾರೆ.