ಪ್ರೊಫೆಸರ್ ಮೇಟಿ ಮುದಿಯಪ್ಪ ವಿಧಿವಶ
Posted On:
18-03-2022 05:23PM
ಉಡುಪಿ : ಉತ್ತಮ ಸಾಹಿತಿ , ರಂಗನಟ, ಶಿಕ್ಷಕ , ಭಾಷಣಕಾರ, ಪರಿಸರ ಪ್ರೇಮಿ, ಸಂಘಟಕ ,ಚಲನ ಚಿತ್ರ ನಟ ಪೊ. ಮೇಟಿ ಮುದಿಯಪ್ಪ ಅಲ್ಪ ಕಾಲದ ಅಸೌಖ್ಯದಿಂದ ವಿಧಿವಶರಾಗಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕ ಕಳೆದ ೩೫ ವರುಷಗಳಿಂದ ಶಿಷ್ಯರ ಮೆಚ್ಚಿನ ಗುರುಗಳಾಗಿ ಸೇವೆ ಸಲ್ಲಿಸಿದ್ದು
ಈಗಲೂ ಹೋದಕಡೆಗಳೆಲ್ಲ ಶಿಷ್ಯವೃಂದ ಇವರನ್ನು ಗೌರವಿಸುವುದು ಇವರ ಜನಪ್ರಿಯತೆಗೆ ಸಾಕ್ಷಿ.
ತಮ್ಮ ಸರಳ ಗುಣ ದಿಂದ ಎಲ್ಲರೊಂದಿಗೆ ಬೆರೆಯುವ ಮೇಟಿ ಯವರು ಕಿರಿಯರೆಂಬ ಬೇಧ ಭಾವವಿಲ್ಲದೆ ಪ್ರತಿಭೆಗೆ ಮನ್ನಣೆ ಹಾಗು ಪ್ರೋತ್ಸಾಹ ಕೊಡುವ ಸ್ನೇಹ ಜೀವಿ. ಸದಾ ಹಸನ್ಮುಖಿ ತಮ್ಮ ವಿಶಿಷ್ಟ ಪೋಷಾಕಿನಿಂದ ನೆನಪಿನಲ್ಲಿ ಉಳಿಯುತ್ತಾರೆ.
ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು ಮಾನವೀಯ ಮೌಲ್ಯಗಳಿಗೆ ಪ್ರಾಧಾನ್ಯತೆ ಕೊಟ್ಟಿದ್ದು ಬಹಳಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯ ಲೋಕಕ್ಕೆ ತಮ್ಮದೆ ಆದ ಕೊಡುಗೆ ನೀಡಿದ ಮೇಟಿಯವರ ಹಲವಾರು ಕೃತಿಗಳು ಲೋಕಾರ್ಪಣೆ ಗೊಂಡಿದೆ . ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕೂಡ ಇವರು ಗಮನಾರ್ಹ ಕಾರ್ಯಕ್ರಮಗಳನ್ನು ಮಾಡಿದ್ದಾರೆ . ಉಧ್ಘೋಷ , ಕಡಲಾಳದ ಮುತ್ತು ನನ್ನೊಳಗಿನ ಕವಿತೆ ,ಮಾನವೀಯತೆಯ ಸುತ್ತ ಮುತ್ತ , ಕಡ್ಯಾವ ನೆನಪು ಇವರ ಕೃತಿಗಳಲ್ಲಿ ಕೆಲವು.
ಹೈದರಾಬಾದ್ ಕರ್ನಾಟಕದಿಂದ ಬಂದು ರಂಗದ ಬಗ್ಗೆ ಇರುವ ಪ್ರಾವಿಣ್ಯತೆಯಿಂದ ಉಡುಪಿಯ ಪ್ರತಿಷ್ಠಿತ ರಂಗಭೂಮಿ (ರಿ ) ನಡೆಸುವ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ತೀರ್ಪುಗಾರರಲ್ಲಿ ಓರ್ವರಾಗಿ ಭಾಗವಹಿಸಿದ ನಂತರ ರಂಗಭೂಮಿ (ರಿ.) ಉಡುಪಿಯ ಖಾಯಂ ಸದಸ್ಯರಾದದ್ದು ವಿಶೇಷ.
1985 ರಿಂದ ರಂಗಭೂಮಿ (ರಿ.) ಉಡುಪಿಯ ಒಡನಾಡಿಯಾಗಿದ್ದು ಅಂದಿನಿಂದ ಇಂದಿನವರೆಗೂ ರಂಗಚಟುವಟಿಕೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಸ್ವತಃ ನಟನಾಗಿದ್ದ ಮೇಟಿಯವರು ರಂಗಭೂಮಿ(ರಿ.) ಉಡುಪಿಯ ನಾಟಕಗಳಾದ ನಾಗಮಂಡಲ,ಗಾಂಧಿ ನಗರ ,ಚಮ್ಮಾರನ ಚಾಲಾಕಿ ಹೆಂಡತಿ,ಹೇಮಂತ ,ಸೂರ್ಯ ಶಿಕಾರಿ, ಪರಿಹಾರ ಹೀಗೆ ಹಲವಾರು ನಾಟಕಗಳಲ್ಲಿ ನಟಿಸಿದ್ದಾರೆ ಹಾಗೂ ರಾಜ್ಯದ ಹೊರರಾಜ್ಯದಲ್ಲಿ ನಡೆದ ಪ್ರದರ್ಶನಗಳಲ್ಲಿ ರಂಗಭೂಮಿ (ರಿ.) ಉಡುಪಿಯನ್ನು ಪ್ರತಿನಿಧಿಸಿದ್ದಾರೆ .ಮೂರು ದಶಕಕ್ಕೂ ಹೆಚ್ಚು ಉಡುಪಿಯ ರಂಗಭೂಮಿಯ ಜೊತೆ ಜೊತೆಯಾಗಿ ನಡೆದಿದ್ದು ಹಲವಾರು ಸಲ ರಂಗಭೂಮಿ ಕಾರ್ಯಕ್ರಮಕ್ಕೆ ಸಂಚಾಲಕರಾಗಿ ಕಾರ್ಯಕ್ರಮವನ್ನು ಚೆಂದಗಾಣಿಸಿ ಕೊಟ್ಟಿದ್ದಾರೆ.
ಸಾಮಾನ್ಯ ಸದಸ್ಯರಾಗಿ , ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ, ಜೊತೆ ಕಾರ್ಯದರ್ಶಿಗಳಾಗಿ ತನಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ರಂಗಭೂಮಿ ಸಾಗಿ ಬಂದ ದಾರಿಯಲ್ಲಿ ತಮ್ಮ ಹೆಜ್ಜೆ ಗುರುತನ್ನೂ ಮೂಡಿಸಿರುತ್ತಾರೆ.