ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ದಲಿತ ವೃದ್ಧೆಯ ಅನಧಿಕೃತ ಮನೆ ಕೆಡವಿದ ಕಂದಾಯ ಇಲಾಖೆ ; ನ್ಯಾಯಕ್ಕೆ ಒತ್ತಾಯಿಸಿದ ಮಾಜಿ ಸಚಿವ ಸೊರಕೆ ಮತ್ತು ಪಿಡಿಒ ನಡುವೆ ಮಾತಿನ ಚಕಮಕಿ

Posted On: 05-04-2022 03:27PM

ಶಿರ್ವ : ಕಾಪು ತಾಲೂಕು ಶಿರ್ವ ಗ್ರಾಮದ ಸರ್ಕಾರಿ ಜಮೀನಿನಲ್ಲಿ ದಲಿತ ಜನಾಂಗಕ್ಕೆ ಸೇರಿದ ಪದ್ಮಬಾಯಿ ಎಂಬವರು ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ತಗಡಿನ ಗುಡಿಸಲು ಮನೆ ನಿರ್ಮಾಣ ಮಾಡಿಕೊಂಡಿದ್ದರು. ಈ ಪೈಕಿ ಕಂದಾಯ ಇಲಾಖೆ ದಿನಾಂಕ ಏಪ್ರಿಲ್ 4ರಂದು ಜೆಸಿಬಿ ಮುಖಾಂತರ ಅಕ್ರಮ ಮನೆಯನ್ನು ಕೆಡವಿ ಹಾಕಿದ್ದರು.

ಈ ವಿಚಾರವನ್ನು ಖಂಡಿಸಿ ಇಂದು ಶಿರ್ವ ಗ್ರಾಮ ಪಂಚಾಯತ್ ಮುಂಭಾಗ ಮಾಜಿ ಸಚಿವ, ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯ ನೇತೃತ್ವದಲ್ಲಿ ಬಡ ಕುಟುಂಬಕ್ಕೆ ನ್ಯಾಯ ದೊರಕಬೇಕೆಂಬ ದೃಷ್ಟಿಯಿಂದ ಪ್ರತಿಭಟನೆ ನಡೆಸಿ ಪಿಡಿಓ ಮುಖಾಂತರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಜಮಾಗೊಂಡಿದ್ದರು. ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದರು. ಈ ಸಮಯದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸೊರಕೆಯ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂಧರ್ಭದಲ್ಲಿ ಗುಂಪಾಗಿ ಸೇರಿದ್ದ ಪ್ರತಿಭಟನಕಾರರ ನೂಕಾಟ ತಲ್ಲಾಟದಲ್ಲಿ ಮಾಜಿ ಸಚಿವ ಸೊರಕೆಯ ಶರ್ಟ್ ಹರಿದ ಘಟನೆ ನಡೆದಿದೆ.

ಮನವಿ ಸಲ್ಲಿಸಲು ಪಂಚಾಯತ್ ಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸೊರಕೆ ಪಿಡಿಓಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ ಸಂದರ್ಭ ಉಡಾಫೆ ಉತ್ತರ ನೀಡಿದ್ದರಿಂದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಗರಂ ಆದರು. ಘಟನಾ ಸ್ಥಳಕ್ಕೆ ಕಾಪು ತಾಲೂಕಿನ ತಹಶಿಲ್ದಾರ್ ಶ್ರೀನಿವಾಸ ಕುಲಕರ್ಣಿ ಭೇಟಿ ನೀಡಿ ಸಮಸ್ಯೆಗೆ ಶೀಘ್ರ ನ್ಯಾಯ ಒದಗಿಸುವ ಬಗ್ಗೆ ಭರವಸೆ ನೀಡಿದರು.