ಕಟಪಾಡಿ : ಅವಳಿ ವೀರರಾದ ಕೋಟಿಚೆನ್ನಯರು ನೆಲೆಯೂರಿದ ಐತಿಹ್ಯದ ಕಟಪಾಡಿ ಏಣಗುಡ್ಡೆ ಗರಡಿಯ ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆಯು ಸುಮಾರು 4.5 ಕೋಟಿ ವೆಚ್ಚದಲ್ಲಿ ನಿರ್ಮಿತವಾಗಿದ್ದು ಮೇ 7ರಿಂದ ಮೊದಲ್ಗೊಂಡು ಮೇ 23ರವರೆಗೆ ವಿವಿಧ ಧಾರ್ಮಿಕ ಕ್ರಿಯೆಗಳು ನಡೆಯಲಿವೆ ಎಂದು ಜೀಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ಚಂದ್ರ ಅಮೀನ್ ಹೇಳಿದರು.
ಅವರು ಕಟಪಾಡಿ ಏಣಗುಡ್ಡೆ ಶ್ರೀ ಬ್ರಹ್ಮ ಬೈದೆರುಗಳ ಗರಡಿ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ ಹಾಗೂ ಕಾಲಾವಧಿ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಶಿಲಾ ದಾರು ಶಿಲ್ಪಗಳಿಂದ ಅಲಂಕರಿಸಲ್ಪಟ್ಟ ವೈಭವದಿಂದ ಕಂಗೊಳಿಸುವ ಶ್ರೀ ಬ್ರಹ್ಮ ಬೈದೆರುಗಳ ಮತ್ತು ಪರಿವಾರ ಶಕ್ತಿಗಳ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ಆಗಮೋಕ್ತ ವೈದಿಕ ವಿಧಿಗಳು ವೇದಮೂರ್ತಿ ಮನೋಜ್ ತಂತ್ರಿ ಶಿವಗಿರಿ ಮತ್ತು ವೇದಮೂರ್ತಿ ಮಹೇಶ್ ಶಾಂತಿ ಹೆಜಮಾಡಿ ಇವರ ನೇತೃತ್ವದಲ್ಲಿ ಗರಡಿಯ ಪೂಜಾ ಪೂಜಾರಿ ಇಂಪು ಪೂಜಾರಿ, ಜ್ಯೋತಿಷ್ಯ ಪ್ರವೀಣ ಮೋಹನ್ ಮಾಯಿಪ್ಪಾಡಿ, ವಾಸ್ತುತಜ್ಞ ಪ್ರಮೋದ್ ಕುಮಾರ್ ಕಾರ್ಕಳ ಉಪಸ್ಥಿತಿಯಲ್ಲಿ ತಂತ್ರಿವರೇಣ್ಯರು ಹಾಗೂ ವೇದಜ್ಞ ಋತ್ವಿಜರ ಸಹಕಾರದೊಂದಿಗೆ ನೆರವೇರಲಿದೆ.
ಮೇ 6ರಂದು ನಾಗಪ್ರತಿಷ್ಠೆ, 7ರಂದು ಪ್ರಾಯಶ್ಚಿತ್ತಾದಿ ವೈದಿಕ ಪೂಜಾವಿಧಿಗಳು, 8ರಂದು ಮೂಡಬೆಟ್ಟು ಚೌಟರ ಕಟ್ಟೆಯಿಂದ ಗರಡಿಗೆ ಹಸಿರು ಹೊರೆ ಕಾಣಿಕೆಯ ಭವ್ಯ ಮೆರವಣಿಗೆ, ಮೇ 9ರಂದು ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಜರಗಲಿದ್ದು ಮೇ 14ರವರೆಗೆ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಮೇ 19ರಂದು ಗರಡಿ ಪ್ರವೇಶದೊಂದಿಗೆ ವಾರ್ಷಿಕ ಜಾತ್ರಾ ಉತ್ಸವ ಆರಂಭ, 20ರಂದು ಧ್ವಜಾರೋಹಣ, ಅಗೆಲು ಸೇವೆ, 21 ರಂದು ಬೈದೇರುಗಳ ನೇಮೋತ್ಸವ, ರಾತ್ರಿ ಮಹಾ ಅನ್ನಸಂತರ್ಪಣೆ, 22 ಮಾಯಂದಾಲ್ ನೇಮ, ಪರಿವಾರ ಶಕ್ತಿಗಳ ನೇಮ, 23ರಂದು ಧ್ವಜಾವರೋಹಣ ಜರಗಲಿದೆ. ಮೇ 24 ರಂದು ಗರಡಿ ಬಾಕಿಮಾರು ಗದ್ದೆಯಲ್ಲಿ ಪಡು ಏಣಗುಡ್ಡೆ ಧೂಮಾವತಿ ದೈವದ ಸಿರಿ ಸಿಂಗಾರದ ನೇಮದೊಂದಿಗೆ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್ ಎನ್. ಪೂಜಾರಿ, ಗೌರವಾಧ್ಯಕ್ಷರಾದ ಗಂಗಾಧರ ಸುವರ್ಣ, ಪ್ರೇಮ್ ಕುಮಾರ್, ಕೋಶಾಧಿ ಕಾರಿ ಡಿ.ಜಿ. ಬಂಗೇರ, ಉಪಕೋಶಾಧಿಕಾರಿ ಚಂದ್ರಹಾಸ ಕೋಟ್ಯಾನ್, ಗರಡಿಯ ಪೂಜಾ ಪೂಜಾರಿ ಇಂಪು ಪೂಜಾರಿ, ಮುಂಬಯಿ ಸಮಿತಿಯ ಕಾರ್ಯದರ್ಶಿ ಸತೀಶ್ ಅಮೀನ್, ಗೌರವ ಸಲಹೆಗಾರರಾದ ಬಗ್ಗ ಪೂಜಾರಿ ಯಾನೆ ಉಮೇಶ್ ಕೋಟ್ಯಾನ್, ಕೋಟೆ ಗ್ರಾಪಂ ಅಧ್ಯಕ್ಷ ಕಿಶೋರ್ ಅಂಬಾಡಿ, ಕಾರ್ಯದರ್ಶಿಗಳಾದ ರಿತೇಶ್ ಕೋಟ್ಯಾನ್, ಕಾಮರಾಜ್ ಸುವರ್ಣ, ಸ್ಥಳವಂದಿಗರಾದ ಸುಂದರ ಪೂಜಾರಿ, ರಂಗ ಪೂಜಾರಿ, ಶೀನ ಪೂಜಾರಿ, ದಾಮೋದರ ಪೂಜಾರಿ, ಮೋಹನ್ ಪೂಜಾರಿ, ರಮೇಶ್ ಜತ್ತನ್, ಭೋಜ ಪೂಜಾರಿ, ಕೃಷ್ಣಪ್ಪ ಪೂಜಾರಿ, ಗರಡಿ ಜವನೆರ್ ಸಂಚಾಲಕ ಸುಧೀರ್ ರಾಜ್ ಪೂಜಾರಿ, ದೇವಾಡಿಗರ ಸಂಘದ ಅಧ್ಯಕ್ಷ ಮನೋಹರ್ ದೇವಾಡಿಗ, ಮೊಗವೀರ ಸಭಾ ಅಧ್ಯಕ್ಷ ಚಂದ್ರಶೇಖರ್ ಕಾಂಚನ್, ಪ್ರಮುಖರಾದ ಜಗನ್ನಾಥ್ ಕೋಟೆ, ಉದಯ ಶೆಟ್ಟಿ, ಆಶಾ ಅಂಚನ್, ಮಹೇಶ್ ಪೂಜಾರಿ ಉಪಸ್ಥಿತರಿದ್ದರು.