ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಶಿಬಿರ

Posted On: 30-04-2022 07:53PM

ಪಡುಬಿದ್ರಿ, ಏ.30 : ಯುವಜನಾಂಗವು ಕಲಿಕೆಯ ಸಮಯದಲ್ಲಿ ಮುಂದಿನ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅನಿವಾರ್ಯತೆಯಿದೆ. ಕಲಿಕೆಯ ಹಂತದಲ್ಲಿಯೇ ತರಬೇತಿಗಳು ಅವಶ್ಯ. ಉದ್ಯಮಶೀಲತಾ ತರಬೇತಿ ಶಿಬಿರಗಳು ಈ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಉದಯ ಅಮೀನ್ ಹೇಳಿದರು. ಅವರು ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಜರಗಿದ ಯುವವಾಹಿನಿ ಪಡುಬಿದ್ರಿ ಘಟಕ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ, ಜೀವನೋಪಾಯ ಇಲಾಖೆ ಸಿಡೋಕ್ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜರಗಿದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ತರಬೇತುದಾರರಾಗಿ ಸಿಡೋಕ್ ಮಂಗಳೂರಿನ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್, ಉದ್ಯಮಶೀಲತಾ ತರಬೇತುದಾರರಾದ ಮೋಹನಾಂಗಯ್ಯ ಸ್ವಾಮಿ, ಆರ್ಥಿಕ ಸಾಕ್ಷರತಾ ಕೇಂದ್ರ ಅಮೂಲ್ಯ ಮಂಗಳೂರು ಇಲ್ಲಿಯ ಹಿರಿಯ ಸಮಾಲೋಚಕರಾದ ಅಶೋಕ್ ಶೆಟ್ಟಿ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ, ಜೀವನೋಪಾಯ ಇಲಾಖೆಯ ಜಂಟಿ ನಿರ್ದೇಶಕರಾದ ಅರವಿಂದ ಡಿ ಬಾಲೇರಿ ವಹಿಸಿದ್ದರು. ಸುಮಾರು 30ಕ್ಕೂ ಅಧಿಕ ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.

ಸಿಡೋಕ್ ಮಂಗಳೂರಿನ ಜಿಲ್ಲಾ ಸಂಯೋಜಕರಾದ ಪ್ರವಿಶ್ಯ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕರಾದ ರೇಖಾ ಗೋಪಾಲ್, ಸಮಾಜಸೇವಕರಾದ ಉಮಾನಾಥ್ ಕೋಟ್ಯಾನ್, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯೆ ಶಶಿಕಲ, ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷೆ ಯಶೋದ, ಪಡುಬಿದ್ರಿ ಘಟಕದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಸುಜಾತ ಪ್ರಸಾದ್, ಘಟಕದ ಕಾರ್ಯದರ್ಶಿ ವಿಧಿತ್, ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಡುಬಿದ್ರಿ ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷರಾದ ಸುಜಿತ್ ಕುಮಾರ್ ನಿರೂಪಿಸಿದರು. ಪಡುಬಿದ್ರಿ ಯುವವಾಹಿನಿ ಘಟಕದ ಅಧ್ಯಕ್ಷರಾದ ಯಶೋದ ಸ್ವಾಗತಿಸಿ, ಪಡುಬಿದ್ರಿ ಘಟಕದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಸುಜಾತ ಪ್ರಸಾದ್ ವಂದಿಸಿದರು.