ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸಂಗೀತಲೋಕದ ಸ್ವರ ಸಾಮ್ರಾಟ್ ಬಿರುದಾಂಕಿತ ಶುಭಕರ ಬೆಳಪು

Posted On: 07-06-2020 09:28AM

"ಬೆಳಪುವಿನಲ್ಲಿ ಉದಯಿಸಿದ ಬೆಳಕು" "ಸಂಗೀತಲೋಕದಲ್ಲಿ ಮೂಡಿತು ಹೊಳಪು" "ಸಾಕ್ಷಿ ಬೆಳೆಸಿದ ಶುಭಕರ ಬೆಳಪು" ರಂಗಭೂಮಿ ಕಲಾವಿದನಿಗೆ ತನ್ನ ಪಾತ್ರವೊಂದಕ್ಕೆ ಜೀವ ನೀಡುವಲ್ಲಿ ಒದಗಿ ಬರುವ ಪರಿಕರಗಳಲ್ಲಿ ಸಂಗೀತವು ಒಂದು. ಎಂಟ್ರಿಯಿಂದ ಹಿಡಿದು ಡೈಲಾಗ್ ವರೆಗೆ, ಪಂಚಿಂಗ್ ನಿಂದ ಎಂಡಿಂಗ್ ತನಕ, ಒಟ್ಟಾರೆ ಇಡೀ ನಾಟಕ ಪ್ರೇಕ್ಷಕನಿಗೆ ಬೋರ್ ಆಗದಂತೆ, ಕಲಾವಿದರಿಗೆ ಹುಮ್ಮಸ್ಸು ಬರುವಂತೆ, ಕಾಪಾಡಿಕೊಂಡು ಬರುವುದು ಒಬ್ಬ ಸಂಗೀತಗಾರನ ಕೈಯಲ್ಲಿದೆ. ನಾಟಕ ಆರಂಭದಿಂದ ಕೊನೆಯ ತನಕದ ದೃಶ್ಯದವರೆಗೂ ಸಂಗೀತಗಾರನ ಪಾತ್ರ ಅತೀ ಮುಖ್ಯವಾಗಿ ಇರಲೇಬೇಕು. ನಾಟಕವನ್ನು ಯಶಸ್ಸುಗೊಳಿಸುವ ಅನೇಕ ಉತ್ತಮ ಸಂಗೀತಗಾರರಿದ್ದಾರೆ. ಅಂತಹ ಸಾಧಕರಲ್ಲಿ 'ಸ್ವರ ಸಾಮ್ರಾಟ್' ಶುಭಕರ್ ಬೆಳಪು ಕೂಡ ಒಬ್ಬರು. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಶ್ರೀ ಭೋಜ ಪೂಜಾರಿ ಹಾಗೂ ಶ್ರೀಮತಿ ಜಾನಕಿ ಪೂಜಾರ್ತಿಯವರ ಮೂರು ಮಂದಿ ಮಕ್ಕಳಲ್ಲಿ ಕಿರಿಯವರಾದ ಶುಭಕರ್ , ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಪದವಿ ವ್ಯಾಸಂಗ ಮಾಡಿರುತ್ತಾರೆ. ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲಾಗದೆ ಮೀನುಗಾರಿಕೆ ಹಾಗೂ ಟ್ರಾವೆಲ್ ಏಜೆನ್ಸಿ ಉದ್ಯೋಗ ಆರಿಸಿಕೊಂಡರು. "ಭಜನೆಯಿಂದ ಸಂಗೀತ. ಹಾರ್ಮೋನಿಯಂನಿಂದ ಕೀ ಬೋರ್ಡ್" ತನ್ನೊಳಗೆ ಅಡಗಿರುವ ಸಂಗೀತದ ಕಲೆಗೆ ಭಜನೆಯೇ ದಾರಿಯಾಯಿತು. "ಶ್ರೀ ರಾಮ ಭಜನಾ ಮಂದಿರ ಎರ್ಮಾಳ್ ಬಡಾ" ಇಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಶುಭಕರ್ ಅಲ್ಲಿ ನುಡಿಸುತ್ತಿದ್ದ ಹಾರ್ಮೋನಿಯಂಗೆ ಆಕರ್ಷಿತರಾದರು. ಎಲ್ಲೂರು ಸೀಮೆಗೆ ಒಳಪಟ್ಟ "ಶ್ರೀ ಧರ್ಮ ಜಾರಂದಾಯ ಭಜನಾ ಮಂದಿರ ಬೆಳಪು" ಇಲ್ಲಿ ಭಜನೆ ನಡೆಯುವಾಗ ಸ್ವತಃ ತಾನೇ ಹಾರ್ಮೋನೀಯಂ ನುಡಿಸಲು ಆರಂಭಿಸಿದರು. ಕ್ರಮೇಣ ಸಂಗೀತದ ಬಗ್ಗೆ ಅಭ್ಯಾಸ ನಡೆಸುತ್ತಾ ಒಂದು ದಿನ ಊರಿನಲ್ಲಿ ನಡೆದ ನಾಟಕಕ್ಕೆ ಸಂಗೀತ ನೀಡುವ ಭಾಗ್ಯ ಸಿಕ್ಕಿತು. "ಗುರುವಿಗೆ ನಮನ. ಸಂಗೀತಕ್ಕೆ ಗಮನ." ಶುಭಕರ್ ಬೆಳಪುರವರಲ್ಲಿ ಕಾಣುವ ಬಲು ದೊಡ್ಡ ಗುಣ ಗುರು ಭಕ್ತಿ. "ಶರತ್ ಉಚ್ಚಿಲರವರನ್ನು ತನ್ನ ಸಂಗೀತದ ಗುರುವಾಗಿ" ಪ್ರಾರ್ಥಿಸಿಕೊಳ್ಳುವ ಬೆಳಪು, ಅವರ ನಿರ್ದೇಶನದ ಮುಖಾಂತರ ಪ್ರಥಮ ಬಾರಿಗೆ "ಶ್ರೀ ನವೋದಯ ಕಲಾವಿದೇರ್ ಕುಡ್ಲ" ತಂಡದಲ್ಲಿ ಸಂಗೀತಗಾರನಾಗಿ ಸೇರ್ಪಡೆಗೊಂಡರು. ಸುನೀಲ್ ನೆಲ್ಲಿಗುಡ್ಡೆ, ರಮಾನಂದ ನಾಯಕ್ ರವರ ಸಲಹೆ, ಸಹಕಾರ, ಮಾರ್ಗದರ್ಶನದ ಮೂಲಕ ಸಂಗೀತದಲ್ಲಿ ಮತ್ತಷ್ಟು ಗಟ್ಟಿಯಾದರು. ಅನಿವಾರ್ಯ ಸಮಸ್ಯೆ ಬಿಟ್ಟು ಇಂದಿಗೂ ಸಂಗೀತ ನುಡಿಸುವ ಮೊದಲು ದೂರವಾಣಿ ಅಥವಾ ವಾಟ್ಸಪ್ ಮೂಲಕ ಗುರುವನ್ನು ಸಂಪರ್ಕಿಸಿ ಅವರ ಆಶೀರ್ವಾದ ಪಡೆದೇ ಸಂಗೀತ ಪ್ರಾರಂಭಿಸುತ್ತಾರೆ. "ಎಲ್ಲೂರು ವಿಶ್ವನಾಥನಿಂದ.. ಧರ್ಮಸ್ಥಳ ಮಂಜುನಾಥನಲ್ಲಿಗೆ" ಆರಾಧ್ಯ ದೇವರು ಎಲ್ಲೂರು ಸೀಮೆಯ ಶ್ರೀ ವಿಶ್ವನಾಥ ತನ್ನೆಲ್ಲ ಕೆಲಸ ಕಾರ್ಯಕ್ಕೆ ಅವನೇ ಒಡೆಯ ಎಂದು ಪ್ರಾರ್ಥಿಸಿಕೊಳ್ಳುವ ಬೆಳಪು ಮದುವೆ ಸಂದರ್ಭದಲ್ಲಿ ಆರ್ಥಿಕವಾಗಿ ತುಂಬಾನೇ ಸಮಸ್ಯೆಗೊಳಗಾದರು ಆಗ ಇದೇ ವಿಶ್ವನಾಥ ದಾರಿ ತೋರಿಸಿದ್ದು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿ. ಪರಮ ಪೂಜ್ಯ ಖಾವಂದರು ನಡೆಸುವ ಸಾಮೂಹಿಕ ವಿವಾಹದಲ್ಲಿ ಬದುಕಿನ ಭಾಗ್ಯ ದೇವತೆ ಪ್ರತಿಮಾರವರನ್ನು ಕೈ ಹಿಡಿದು ದಾಂಪತ್ಯ ಜೀವನನಕ್ಕೆ ಕಾಲಿಟ್ಟರು. "ಸ್ವರ ಸಾಮ್ರಾಟ.. ಸಾಕ್ಷಿ ತಂಡದ ಯಜಮಾನ." ಧರ್ಮಸ್ಥಳದಲ್ಲಿ ದಾಂಪತ್ಯ ಜೀವನನಕ್ಕೆ ಕಾಲಿಟ್ಟ ಸಂದರ್ಭ, ಜೀವನದಲ್ಲಿ ಸಾಧಿಸಬೇಕು ಎಂಬ ಮಾಡಿದ ಸಂಕಲ್ಪ ಬದುಕಿನ ದಿಕ್ಕನ್ನೇ ಬದಲಾವಣೆ ಮಾಡಿತ್ತು. ಇವರ ಸಂಗೀತದ ಇಂಪನ್ನು ಅರಿತ ತುಳು "ಸಂಸಾರ ಕಲಾವಿದೇರ್ ಪಣಿಯೂರು" ವಿಶ್ವ ರಂಗ ಭೂಮಿ ದಿನಾಚರಣೆಯಂದು ಸ್ವರ ಸಾಮ್ರಾಟ ಬಿರುದು ನೀಡಿ ಗೌರವಿಸಿದರು. ತನ್ನದೇ ಆದ "ಸಾಕ್ಷಿ ಕಲಾವಿದರು ಬೆಳಪು" ತಂಡವನ್ನು ಹುಟ್ಟು ಹಾಕಿ ಹಲವಾರು ಕಡೆಯಲ್ಲಿ ನಾಟಕ, ಕಾಮಿಡಿ ಕಾರ್ಯಕ್ರಮ ನೀಡಿದರು. ತಂಡ ಆರಂಭಗೊಂಡ ಎರಡೇ ವರ್ಷದಲ್ಲಿ ರವೀಂದ್ರ ಕೋಟ್ಯಾನ್, ಸತೀಶ್ ಪೂಜಾರಿಯವರ ಸಹಕಾರದಲ್ಲಿ ದುಬೈಯಲ್ಲಿ ಕಾರ್ಯಕ್ರಮ ನೀಡುವ ಸೌಭಾಗ್ಯ ಸಿಕ್ಕಿತು. ಮೂರು ಬಾರಿ ಗಲ್ಫ್ ರಾಷ್ಟ್ರಕ್ಕೆ ಹೋಗಿ ಕಾರ್ಯಕ್ರಮ ನೀಡಿರುವುದು ಇವರ ಪ್ರತಿಭೆ, ಶ್ರಮಕ್ಕೆ ಸಿಕ್ಕಿದ ಗೌರವವೇ ಆಗಿದೆ. "ಸಮಯವೇ ಭಕ್ತಿ.. ಪರಿಶ್ರಮವೇ ಶಕ್ತಿ" ಬೆಳಪುರವರು ಶ್ರಮಜೀವಿ ಯಾವುದೇ ಕಾರ್ಯಕ್ರಮ ಒಪ್ಪಿಕೊಂಡ ಮೇಲೆ ಅದು ಪೂರ್ಣಗೊಳ್ಳುವ ತನಕ ಅಭ್ಯಾಸ ನಡೆಸುತ್ತಾರೆ. ಇನ್ನೊಂದು ಅವರ ಗುಣ ಸಮಯದ ಪಾಲನೆ. ನಾಟಕ ಅಥವಾ ಇತರ ಕಾರ್ಯಕ್ರಮವೇ ಇರಲಿ ಸಮಯಕ್ಕೆ ಸರಿಯಾಗಿ ತನ್ನ ಇರುವಿಕೆಯನ್ನು ಗುರುತಿಸಿಕೊಳ್ಳುತ್ತಾರೆ. ಇದೇ ಅವರ ಯಶಸ್ಸಿನ ಗುಟ್ಟು. ಬೇರೆ ಬೇರೆ ತಂಡಗಳಲ್ಲಿ ಹಲವಾರು ನಾಟಕಗಳಿಗೆ ಸಂಗೀತ ನೀಡಿರುತ್ತಾರೆ. ಕನ್ನಡ ನಾಟಕ ತಂಡಕ್ಕೂ ಸಂಗೀತ ನೀಡಿದ ಬೆಳಪುರವರು ಸಿ.ಪಿ.ಎಲ್, ಬಲೇ ತೆಲಿಪಾಲೇ ಕಾರ್ಯಕ್ರಮದಲ್ಲಿಯೂ ಸಂಗೀತ ನೀಡಿರುತ್ತಾರೆ. ಬೆಂಗಳೂರಿನಲ್ಲಿ ನಡೆದ ಅಂತರಾಜ್ಯ ಬಹುಭಾಷಾ ನಾಟಕ ಸ್ಪರ್ಧೆಯಲ್ಲಿ ತಬುರನ ಕಥೆ ನಾಟಕಕ್ಕೆ ಎರಡನೇ ಪ್ರಶಸ್ತಿ. ಅಂತರ್ ಜಿಲ್ಲಾ ನಾಟಕ ಸ್ಪರ್ಧೆಯಲ್ಲಿ ಉತ್ತಮ ಸಂಗೀತಗಾರ ಪ್ರಶಸ್ತಿ ಲಭಿಸಿದೆ. "ದುಬೈ ಗಮ್ಮತ್ ಕಲಾವಿದರು ಮಂಗಳೂರು" ಪುರಭವನದಲ್ಲಿ ಅಭಿನಯಿಸಿದ "ಬಯ್ಯ ಮಲ್ಲಿಗೆ" ನಾಟಕಕ್ಕೆ ಪ್ರಥಮ ದಿನದ ಕಾರ್ಯಕ್ರಮದಲ್ಲಿ ಸಂಗೀತ ನೀಡಿರುತ್ತಾರೆ. ಪ್ರಸ್ತುತ "ತೆಲಿಕೆದ ಕಲಾವಿದೇರ್ ಕೊಯಿಲ ಬಂಟ್ವಾಳ" ತಂಡದಲ್ಲಿ ಸಂಗೀತಗಾರರಾಗಿದ್ದಾರೆ. "ನಾಟಕ ಸಂಗೀತ ಕಲಾವಿದರ ಒಕ್ಕೂಟದ" ನಿರ್ದೇಶಕರಾಗಿರುವ ಬೆಳಪುರವರು ದೇವರ ಅನುಗ್ರಹ, ಗುರುಭಕ್ತಿ, ಪರಿಶ್ರಮ, ಸರಳ ವ್ಯಕ್ತಿತ್ವ ಹಾಗೂ ತ್ಯಾಗ ಮನೋಭಾವನೆಯ ಮೂಲಕ ಉತ್ತಮ ಕಲಾವಿದನಾಗಲು ಸಾಧ್ಯ ಎಂದು ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಮಡದಿ ಪ್ರತಿಮಾ ಮಕ್ಕಳಾದ ಸಾಕ್ಷಿ, ಸಾಹಿಲ್ ಜೊತೆ ಸುಖ ಜೀವನ ನಡೆಸುತ್ತಿರುವ ಶುಭಕರ್ ಬೆಳಪುರವರ ಕಲಾ ಜೀವನ ಇನ್ನಷ್ಟು ಎತ್ತರಕ್ಕೆ ಸಾಗಲಿ ಪ್ರಶಸ್ತಿ, ಪುರಸ್ಕಾರ, ಗೌರವ, ಸನ್ಮಾನ ಸಿಗಲಿ ಎಂದು ತಾಯಿ ಶಾರದೆಯಲ್ಲಿ ಪ್ರಾರ್ಥಿಸೋಣ. ✍️ ಕೆ ಕೆ ಬೆದ್ರ (ರಂಗಭೂಮಿ ಕಲಾವಿದ)