ಕರುಳು ಕಿತ್ತು ಬರುವ ದೃಶ್ಯ.ಇಂದೋ ನಾಳೆಯೋ ಬೀಳುವ ಹಂತದಲ್ಲಿರುವ ಮನೆ ,ಮನೆಯ ಕೆಲವು ಭಾಗಗಳು ಈಗಾಗಲೇ ಕುಸಿದು ಬಿದ್ದಿವೆ, ಮನೆಯ ಒಳಗೆಲ್ಲಾ ನೀರು ಸೋರುತ್ತಿದೆ ,ಆದರೂ ವಿಧಿಯಿಲ್ಲದೆ ಆ ಎರಡು ಹಿರಿ ಜೀವಗಳು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಆ ಮುರುಕಲು ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಇವರೇ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ಕೇಮಾರಿನ ಹೊಂಡೇಲು ನಿವಾಸಿಗಳಾದ ದೂಜ ಪೂಜಾರಿ, ಸುಶೀಲ ಪೂಜಾರ್ತಿ.
ಈ ದಂಪತಿಗಳ ಕರುಣಾಜನಕ ಸ್ಥಿತಿ ನೋಡಿದವರೇ ಬಲ್ಲರು.
ಇಬ್ಬರ ಆರೋಗ್ಯವೂ ಸರಿಯಾಗಿಲ್ಲ ತಾವೇ ದುಡಿದು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿರುವ ಈ ಹಿರಿ ಜೀವಗಳು ಮನೆಯನ್ನು ದುರಸ್ತಿ ಮಾಡುವ ಸ್ಥಿತಿಯಲ್ಲಿಲ್ಲ ಆದರೆ ಎಲ್ಲಿ ಈ ಬಾರಿಯ ಗಾಳಿ ಮಳೆಗೆ ಮನೆಯೊಳಗಡೆ ಮಲಗಿದಲ್ಲಿ ಮನೆ ಬಿದ್ದು ನಮಗೇನಾಗುವುದೋ ಎಂಬ ಭೀತಿಯಿಂದ ದೇವರ ಮೇಲೆ ಭಾರ ಹಾಕಿ ಜೀವನ ಸಾಗಿಸುವ ಅನಿವಾರ್ಯತೆ.
ನಿಸ್ವಾರ್ಥ ಸೇವಾ ಮಾಣಿಕ್ಯ ಸ್ಫೂರ್ತಿ ವಿಶೇಷ ಶಾಲೆಯ ಸಂಸ್ಥಾಪಕರಾದ ಪ್ರಕಾಶ್ ಜೆ.ಶೆಟ್ಟಿಗಾರ್ ಮತ್ತು ಯುವ ಉತ್ಸಾಹಿ ಬಳಗ ಕೇಮಾರು ಇವರು ಈ ವೃದ್ಧ ಜೀವಗಳಿಗೊಂದು ಸೂರು ನಿರ್ಮಿಸಿಕೊಡುವ ಮಹಾ ಕೈಂಕರ್ಯ ಕ್ಕೆ ಇಳಿದಿದ್ದಾರೆ.
ಈ ಪುಣ್ಯ ಕಾರ್ಯದಲ್ಲಿ
'ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ' ಪೇಜ್ ವತಿಯಿಂದ ನಡೆದ ಮೂಕ ಪ್ರಾಣಿಗಳಿಗೆ ಆಹಾರ, ನೀರು ಇಡುವ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಕ್ಕೆ ವಿಜೇತರಾದ ಸಪ್ನ ಪೂಜಾರಿ ಉಡುಪಿ ಇವರು ಬಹುಮಾನ ಗಳಿಸಿದ 5,000 ರೂಗಳನ್ನು
ನೀಡಿ ಅಶಕ್ತ ವೃದ್ಧರ ಪಾಲಿಗೊಂದು ಸೂರು ನಿರ್ಮಿಸಿ ಕೊಡುವ ಮಹಾ ಕೈಂಕರ್ಯ ಕ್ಕೆ ಜೊತೆಯಾಗಿದ್ದಾರೆ. ಇವರಿಗೆ ನಮ್ರತೆಯ ನಮನಗಳು.