ಕಾಪು , ಜೂ.10 : ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಮುಂಭಾಗದಲ್ಲಿ ಗೋಪುರದ ಇಕ್ಕೆಲಗಳಲ್ಲಿ ಇದ್ದ ಎರಡು "ತುಳು ಲಿಪಿಯಲ್ಲಿ ಬರೆದ ತುಳುಭಾಷೆಯ" ಶಾಸನಗಳನ್ನು ಇತಿಹಾಸ ಸಂಶೋಧಕ ಬಂಟಕಲ್ಲಿನ ಸುಭಾಸ್ ನಾಯಕ್ ಅವರು ಓದುವ ಪ್ರಯತ್ನ ಮಾಡಿದ್ದಾರೆ .
ಎರಡು ಶಾಸನಗಳಲ್ಲಿ ಒಂದು ಸಂಪೂರ್ಣ ತ್ರುಟಿತಗೊಂಡಿದೆ , ಕಾಮಗಾರಿ ವೇಳೆ ಸಿಮೆಂಟ್ ಬಿದ್ದು ಲಭ್ಯ ಅಕ್ಷರಗಳೂ ಅಸ್ಪಷ್ಟವಾಗಿದ್ದು ,ಓದಲಾಗದ ಸ್ಥಿತಿಯಲ್ಲಿದೆ . ಆದರೆ ಕಾಣುವ ಅಕ್ಷರಗಳನ್ನು ಗಮನಿಸಿದಾಗ ಅದು ತುಳು ಲಿಪಿಯ ಶಾಸನವೆಂದು ನಾಯಕ್ ಹೇಳುತ್ತಾರೆ .
ಇನ್ನೊಂದು ಶಾಸನವು (ದೇವಳದ
ಈಶಾನ್ಯದಲ್ಲಿರುವ) ಬಹುತೇಕ ಅಳಿಸಿಹೋಗಿದ್ದರೂ ಕೆಲವು ಅಕ್ಷರಗಳು ತ್ರುಟಿತಗೊಂಡಿದ್ದರೂ ಓದಲು ಸಾಧ್ಯವಾಗುತ್ತದೆ . ಈ ಕಲ್ಬರಹದ ಮೇಲೆ ಶಿವಲಿಂಗ ಮತ್ತು ಸೂರ್ಯ - ಚಂದ್ರರ ಉಬ್ಬುಶಿಲ್ಪವಿದೆ . ಸ್ವಸ್ತಿಶ್ರೀಃ ಎಂದು ಪ್ರಾರಂಭವಾಗುವ ಬರೆಹವು 'ಮೀನಸ್ಯ' ಅಂದರೆ ಮೀನಮಾಸದಲ್ಲಿ .
ಮುಂದೆ 'ವಲ್ಲ ಮಹಾದೇವರ ಕಾಲನ್ಟ್ ' ಎಂದು ಓದಬಹುದಾಗುತ್ತದೆ .ವಲ್ಲ ಮಹಾದೇವರ ಕಾಲನ್ಟ್ ಎಂದರೆ ವಲ್ಲ ಮಹಾದೇವರ ಕಾಲದಲ್ಲಿ.
ಬಳಿಕ ಕೆಳಗಿನ ಸಾಲಿನಲ್ಲಿ ಇರುವ ಅಕ್ಷರಗಳು ಅಸ್ಪಷ್ಟವಾಗಿವೆ. ಪಳಂ ತುಳುವಾಗಿರುವುದರಿಂದ ಶಬ್ದ ಸಂಯೋಜನೆ ಕಷ್ಟಸಾಧ್ಯ . ಅನಂತರದ ಒಂದು ಸಾಲಿನಲ್ಲಿ
'ತುನರ ಪುರತ್ ನಯೆ' ಮುಂದುವರಿದರೆ 'ಮುದೆಲಾಯ' ಮುಂತಾದ ಶಬ್ದಗಳು ಸಿಗುತ್ತವೆ .ಇನ್ನುಳಿದಂತೆ ಅಕ್ಷರಗಳು ಒಂದೋ ಸಿಮೆಂಟ್ ಬಿದ್ದು ಅಥವಾ ಸವೆದು ಹೋಗಿದೆ .
ಆದರೆ ಇದು ತುಳು ಭಾಷೆಯ ತುಳುಲಿಪಿಯಲ್ಲಿರುವ ಶಾಸನವಾದುದರಿಂದ ಮುಂದಿನ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ನಾಯಕ್ .
ಈ ಶಾಸನದಲ್ಲಿ ಉಲ್ಲೇಖವಾಗಿರುವ 'ವಲ್ಲ ಮಹಾದೇವ' ನು ಆಳುಪರ ಅರಸ ವಲ್ಲಭ ದೇವನೇ ಆಗಿದ್ದರೆ ಈ ಶಾಸನದ ಕಾಲ ಕ್ರಿ.ಶ. 1230 - 1250.ಅಂದರೆ 13 ನೇ ಶತಮಾನ ಎಂದು ಸುಭಾಸ್ ನಾಯಕ್ ಹೇಳಿದ್ದಾರೆ . ಇವರು ತುಳು ಶಾಸನ ಓದುವ ಬೆರಳೆಣಿಕೆಷ್ಟು ವಿದ್ವಾಂಸರಲ್ಲಿ ಒಬ್ಬರು .ಕ್ಷೇತ್ರಕಾರ್ಯದಲ್ಲಿ ಗುರುಪ್ರಸಾದ ನಾಯಕ್ ಸಹಕರಿಸಿದ್ದರು .ದೇವಸ್ಥಾನದ ಮೆನೇಜರ್ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು .
ಕುಂಜೂರಿಗೆ ಬಹಳಷ್ಟು ಧಾರ್ಮಿಕ , ಐತಿಹಾಸಿಕ , ಸಾಂಸ್ಕೃತಿಕ ಹಿನ್ನೆಲೆ ಇದೆ.ಈ ಶಾಸನದ ಅಧ್ಯಯನಕ್ಕೆ ಬೇಕಾದ ಲಭ್ಯ ಮಾಹಿತಿಗಳನ್ನು ಸ್ಥಳೀಯರು ಒದಗಿಸಲು ಅಣಿಯಾಗಿದ್ದಾರೆ .
ಬರಹ : ಕೆ ಎಲ್ ಕುಂಡಂತಾಯ