ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕೃಷಿ - ಮಳೆ ಸಂಯೋಜನೆ ಬಗ್ಗೆ ಒಂದಿಷ್ಟು - ಕೆ ಎಲ್ ಕುಂಡಂತಾಯ

Posted On: 11-06-2020 04:11PM

ಮಳೆ : ಏನು ಮಳೆ, ಹೇಗೆ ಮಳೆ .... ಸುರಿಯುವ ಮಳೆ - ಅದರ ಶ್ರಾಯ , ಮಳೆ ಬೀಳುವ ಕ್ರಮ - ಪ್ರಮಾಣ , ಮಳೆಯ ಲಕ್ಷಣ - ನಿರೀಕ್ಷೆಗಳನ್ನು ಶತಮಾನ ಶತಮಾನಗಳಿಂದ ಗಮನಿಸುತ್ತಾ ಬಂದ ನಮ್ಮ ಪೂರ್ವಸೂರಿಗಳು ಮಳೆಯನ್ನು ಆಶ್ರಯಿಸಿ ನಡೆಸುವ ಕೃಷಿ ಸಂವಿಧಾನವನ್ನು ಸಿದ್ಧಪಡಿಸಿಕೊಂಡ .ಅದರಂತೆ ಯುಗಾದಿಯಿಂದ ಮೊದಲ್ಗೊಂಡು‌ ಬೇಸಾಯದ ಕಾಯಕಕ್ಕೆ ತೊಡಗಿ ಪತ್ತನಾಜೆಯ ಬಳಿಕ ತೀವ್ರವಾಗಿ ಬೇಸಾಯಕ್ಕೆ ಪ್ರವೃತ್ತನಾಗುವುದು ಸಂಪ್ರದಾಯ . ಹದಿನೈದು ದಿನಕ್ಕೊಮ್ಮೆ ಮಳೆಯ ಹೆಸರು ಬದಲಾಗುತ್ತಾ ಸಾಗುತ್ತದೆ . ನಾವು ಎಷ್ಟು ಗಾಢವಾಗಿ ಸೌರಮಾನಿಗಳಾದರೂ ಮಳೆಯನ್ನು ಮಹಾನಕ್ಷತ್ರಗಳ ಮೂಲಕವೇ ಗುರುತಿಸುವುದು ರೂಢಿ . ನಮಗೆ ಯುಗಾದಿಯ ಬಳಿಕ ಕೃತ್ತಿಕಾ ನಕ್ಷತ್ರದಲ್ಲಿ ಸೂರ್ಯನು ಚಲಿಸುವ ಸಮಯ‌ವೇ ಮಳೆಯ ನಕ್ಷತ್ರಕಾಲ ( ಈ ವರ್ಷ ಮೇ11 ರಿಂದ ಆರಂಭವಾಗಿ ಮೇ 24). ಯಶಸ್ವೀ - ಅನುಭವೀ ಕೃಷಿಕ ಕೃತ್ತಿಕಾ ಮಳೆಯ ಹದಿನೈದು ದಿನಗಳಷ್ಟು ಕಾಲ ಮಳೆ ಬರಬಾರದು ,ಕೃತ್ತಿಕಾದ ಸೂರ್ಯನ ಪ್ರಖರತೆಗೆ ಗದ್ದೆ ಬಿರಿಯಬೇಕು .ಬಳಿಕದ ರೋಹಿಣಿ ನಕ್ಷತ್ರ ಕಾಲದಲ್ಲಿ ಭಾಗೀರಥೀ ಜನ್ಮದಿನ ಬರುತ್ತದೆ . ಗಂಗಾವರಣವಾದ ದಿನ .ಒಂದು ಅರ್ಥದಲ್ಲಿ ಸೂರ್ಯ ವಂಶದ ಅರಸ ಭಗೀರಥ ಗಂಗೆಯನ್ನು ಧರೆಗಿಳಿಸಲು ಪಟ್ಟ ಪ್ರಯತ್ನ 'ಭಗೀರಥ ಪ್ರಯತ್ನ'ವೆಂದೇ ಪ್ರಸಿದ್ಧ . ಅಂದರೆ ಕೃಷಿ - ಬೇಸಾಯವೂ ಅಷ್ಟೆ ಸಾಧನೆ - ಪ್ರಯತ್ನಬೇಕಾದುದು ತಾನೆ ? ಮುಂದೆ ಮೃಗಶಿರಾ ನಕ್ಷತ್ರ. ಈಗ ಸುರಿಯುತ್ತಿದೆ ಅಥವಾ ಸುರಿಯಲು ಸಿದ್ಧತೆಮಾಡುತ್ತಿದೆ . ಈ ಹದಿನೈದು ದಿನದಲ್ಲಿ ನಾಟಿಕಾರ್ಯ ನಡೆದರೆ 'ಮೃಗಶಿರೆಟ್ಟ್ ನಡಿನಾಂಡ ಮೃಗ ತಿಂದ್ ದ್ ಮುಗಿಯಂದ್ ಎಂಬುದು ಅನುಭವದ ರೈತನ ಮಾತು .ಮೃಗಶಿರಾ ನಕ್ಷತ್ರದ ಮಳೆಗೆ ನಾಟಿಮಾಡಿದರೆ ಮೃಗಗಳು ತಿಂದು ಮುಗಿಯದಷ್ಟು ಬೆಳೆಯಾದೀತಂತೆ .ಜೂ.21 ರ ವರೆಗೆ ಈ ಮಳೆಯ ಶ್ರಾಯ . ಬಳಿಕ ಆರ್ದಾ ಮಳೆಯ ಕಾಲ . ಆರ್ದಾ ಮಳೆ ಬಂದರೆ ಮುಂದಿನ ಆರು ಮಳೆಗಳು ಬೇಕಾದಷ್ಟು ಸುರಿಯುತ್ತವೆ ಎಂಬುದು ರೈತನ ನಿರೀಕ್ಷೆ .ಈ ಮಳೆ ಸುರಿಯುವ ಕ್ರಮವನ್ನು ನಮ್ಮ ಹಿರಿಯರು " ಅಡರ್ ಡ್ ದರ್ತಿಲೆಕ್ಕ " ಎಂದು ಅಂದರೆ ಅಷ್ಟು 'ತೀವ್ರವಾಗಿ' ಎಂದು‌ ಉದ್ಗರಿಸಿದ್ದಾರೆ . ಈ ಮಳೆಯ ಸಂದರ್ಭದಲ್ಲಿ ಏನು ನೆಟ್ಟರೂ ಅದು 'ಜೀವ ಹಿಡಿಯುತ್ತದೆ' ಎಂಬುದು ನಂಬಿಕೆ .ಆರ್ದಾ ಮಳೆಗೆ ಯಕ್ಷಗಾನ ಕವಿಗಳು ಹೇಳುತ್ತಾರೆ 'ಹದಗಾಲ ಬೆಳೆಮಾಳ್ಕೆಗೆ' ಎಂದು. ತಡೆ ಇಲ್ಲದೆ ಬೀಳುವ ಮಳೆ 'ಪುನರ್ವಸು'. "ಪುನ ಪಿದಾಯಿದೀವರೆ ಬುಡಂದ್" ಎಂಬುದು ಈ ಮಳೆಗೆ ಇರುವ ಕೀರ್ತಿ ,ಬಹುಶಃ ಒಂದು ಕಾಲದಲ್ಲಿ ಆ ಕ್ರಮದಲ್ಲಿ 'ಹನಿ ನಿಲ್ಲದೆ ಸುರಿಯುತ್ತಿದ್ದಿರಬೇಕು' .ಈಗ ಕಾಲ ಬದಲಾಗಿದೆ , ಹವಾಮಾನ ವಿಪರೀತವಾಗಿ ವ್ಯತ್ಯಸ್ಥಗೊಂಡಿದೆ .ಇದು ನಿಜವಾಗಿ ಕೃಷಿಗೆ ಬಹಳ ಅವಸರದ ಕಾಲ ."ಬಗ್ಗ್ ತ್ ಬೆನೊಡು , ಕುಳ್ಳುತು ತಿನೊಡು" ( ಬಗ್ಗಿ ದುಡಿಯಬೇಕು , ಕುಳಿತು ತಿನ್ನಬೇಕು) ಅಂದರೆ ಇದು ರೈತ ದುಡಿಯುವ ವೇಳೆ . 'ಪುಸ್ಸನೆ' ಬಂದು ಹೋಗುವ ಮಳೆ 'ಪುಷ್ಯಾ'.ಬಹುತೇಕ ಕೃಷಿ ಮುಗಿಯುತ್ತಾ ಬರುವ ಕಾಲ ( ಮುಗಿದಿರುವುದು . ಆದರೆ ಈಗ ಧೈರ್ಯದಲ್ಲಿ ಹೇಳುವಂತಿಲ್ಲ ) . ಆಟಿ ( ಕರ್ಕಾಟಕ) ತಿಂಗಳು . ಕೃಷಿ ಕಾಯಕ ಮುಗಿಯುತ್ತಾ ಬಂದಿದೆ ,ಇನ್ನು ಬೆಳೆಯ ರಕ್ಷಣೆ ಮತ್ತು ನಿರೀಕ್ಷೆ ಮಾತ್ರ . 'ಪುಸ್ಯದ ಬರ್ಸೊಗು ಪುಚ್ಚೆದ ಪುಣಲಾ ಪಿದಾಯಿ ಬರಂದ್' ( ಪುಷ್ಯಾ ಮಳೆಗೆ ಬೆಕ್ಕಿನ ಹೆಣವೂ ಹೊರಗೆ ಬಾರದು). ಹೇಗೆಲ್ಲ ಮಳೆಯನ್ನು ವಿಶ್ಲೇಷಿಸಿದ್ದಾರೆ ನಮ್ಮ‌ ಹಿರಿಯರು‌. ಆಶ್ಲೇಷಾ ಮಳೆ : ಆಶ್ಲೇಷಾ ಮಳೆಗಿಂತ ಬಿಸಿಲೇ ಲೇಸು . 'ಕೈ ಎಡ್ಡೆ ಆಂಡ ಕೆಯಿ ಎಡ್ಡೆ ಆವು' ಎಂಬ ಚಿಂತನೆಯಕಾಲ . ರೈತ ಹೇಳುವುದಿದೆ "ಪುಷ್ಯಾ ಕಂಡೆ ಮುಟ್ಟ ಕರತ್ಂಡ ಆಶ್ಲೇಷಾ ದೊಂಡೆ ಮುಟ್ಟ ಕನಪುಂಡು". ಪುಷ್ಯಾ ಮಳೆಯಿಂದ ಒಂದುವೇಳೆ ಬೆಳೆಗೆ ಹಾನಿಯಾಗಿದ್ದರೆ ಆಶ್ಲೇಷಾ ಮಳೆಯಿಂದ ಈ ಹಾನಿ ಪರಿಹಾರವಾಗುತ್ತದೆಯಂತೆ. ಪ್ರಕೃತಿ - ಮಳೆ ಅವಲಂಬಿತವಾದುದು ಕೃಷಿ . ಮಣ್ಣಿನಲ್ಲಿ ದುಡಿಯುವುದಷ್ಟೆ ರೈತನ ಕಾಯಕ . ಮಣ್ಣಿನ ಸತ್ವವನ್ನು ಮತ್ತು ನಿಸರ್ಗವನ್ನು ನಂಬಿದ್ದು ಅಷ್ಟು ವಿಶ್ವಾಸದಿಂದ. ಅದಕ್ಕೆ ರೈತ ಹೇಳುತ್ತಾನೆ "ಮಣ್ಣ್ ಡ್ ಪೊರ್ಂಬಿನಾಯೆ ನುಪ್ಪು ತಿನುವೆ , ನರಮಾನಿಡ ಪೊರ್ಂಬಿನಾಯೆ ಮಣ್ಣ್ ತಿನುವೆ". 'ಮಣ್ಣಿನಲ್ಲಿ ಛಲಸಾಧಿಸಿದರೆ ಅನ್ನ ತಿನ್ನುತ್ತಿ ,ಮನುಷ್ಯನಲ್ಲಿ ಛಲ ಸಾಧಿಸಿದರೆ ಮಣ್ಣು ತಿನ್ನುತ್ತಿ' ಎಂದು.‌ ಈಗಂತೂ ಕೃಷಿ ಸಂಪೂರ್ಣ ಅವಗಣಿಸಲ್ಪಟ್ಟಿದೆ . ಕೃಷಿ ಲಾಭದಾಯಕವಲ್ಲ ಎಂಬ ನಿರ್ಧಾರಕ್ಕೆ ನಾವು ಬಂದಾಗಿದೆ . ‌ "ಕೃಷಿಯಿಂದ ದುರ್ಭಿಕ್ಷೆ ಇಲ್ಲ" ಎಂಬ ಮಾತು ಅಪ್ರಸ್ತುತವಾಗಿದೆ . [ಇನ್ನುಆಟಿ ಅಮಾವಾಸ್ಯೆಗೆ ಸರಿಯಾಗಿ ಮುಂದುವರಿಸಿ ಬರೆಯುವ . ಅಮಾವಾಸ್ಯೆ ಮತ್ತು ಉಳಿದ ಮಳೆಗಳ ಬಗ್ಗೆ ವಿವರ ನೀಡುವ. ನಾಗರ ಪಂಚಮಿಗೆ ಪ್ರತ್ಯೇಕ ಬರೆಯುವ. ವಾಯು ಭಾರ ಕುಸಿತ , ನಿಸರ್ಗದ ವಿಶಿಷ್ಟ ನಡೆಗಳಿಂದಾಗಿ ಹೀಗೆಯೇ ಎಂದು ಈಗ ಹೇಳಲಾಗದು.] ಬರಹ : ಕೆ. ಎಲ್ . ಕುಂಡಂತಾಯ