ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುಂಜಾರುಗಿರಿ ಪಾಜಕದ ಸಮೀಪ ಇರುವ ಹನುಮ,ಭೀಮ ಮತ್ತು ಮಧ್ವರ ಶಿಲೆ...

Posted On: 22-06-2020 02:38PM

ಮೇಲೆ 'ಹನುಮ' ಮಧ್ಯೆ 'ಭೀಮ' ಕೆಳಗೆ 'ಮಧ್ವ'. ಈ ಯಾದಿಯಲ್ಲಿ ಮಧ್ವಾಚಾರ್ಯರ ಅವತಾರ ಮೂರನೇಯದ್ದು . ಹನುಮಂತ , ಭೀಮ , ಮಧ್ವರು ಎಂಬುದು ಉಡುಪಿ ಮತ್ತು ಮಧ್ವಾನುಯಾಯಿಗಳ ಅನುಸಂಧಾನ . ತುಳು ಮಣ್ಣಿನಲ್ಲಿ ಅಂಕುರಿಸಿದ " ದ್ವೈತ " ‌‌ತುಳು ಸಂಸ್ಕೃತಿಯ ಬುನಾದಿ , ನಂಬಿಕೆ - ನಡವಳಿಕೆಗಳ ಶ್ರದ್ಧೆ , ವೈಚಾರಿಕ ವೈಶಾಲ್ಯತೆಯ ಸಮೃದ್ಧ ನೆಲದಲ್ಲಿ ಅಂಕುರಿಸಿತು "ತತ್ತ್ವವಾದ" , ಅದೇ ಮುಂದೆ "ದ್ವೈತ" ಸಿದ್ಧಾಂತವಾಗಿ ಪ್ರಸಿದ್ಧವಾಯಿತು . ಮೂರನೇ ಆಚಾರ್ಯರಾಗಿ ಭಾರತೀಯ ಅಧ್ಯಾತ್ಮಕ್ಕೆ ತುಳುನಾಡಿನ ಕೊಡುಗೆಯಾದರು ಆಚಾರ್ಯ ಮಧ್ವರು .ಪೂರ್ಣಪ್ರಜ್ಞ , ಆನಂದ ತೀರ್ಥರೆಂದೂ ಮಾನ್ಯರು . ವೈವಿಧ್ಯಮಯ ಆಚಾರ - ವಿಚಾರಗಳು , ಶ್ರದ್ಧೆ - ನಂಬಿಕೆಗಳು , ನಾಗ - ಬೂತ ಆರಾಧನಾ ವಿಧಾನಗಳು ಸರಳ - ಮುಗ್ಧ ವಿಧಿಯಾಚರಣೆಗಳು , ಕೃಷಿ - ಮೀನುಗಾರಿಕೆ - ಮೂರ್ತೆ ಆಧರಿತ ಬದುಕುಗಳು ಪಡಿಮೂಡಿದ್ದ ತುಳುವ ಮಣ್ಣಿನಲ್ಲಿ ಆಚಾರ್ಯರು ಜನಿಸಿದರು.ಈ ಸಾಂಸ್ಕೃತಿಕ ಹಿನ್ನೆಲೆಯಿಂದಲೇ ಪ್ರೇರಿತರಾಗಿ ಪರಮಾರ್ಥ ಪರಿವ್ರಾಜಕರೆನಿಸಿದರು . ತೌಳವದ ಎಲ್ಲ ಧಾರ್ಮಿಕ - ಸಾಂಸ್ಕೃತಿಕ ವೈವಿಧ್ಯಗಳನ್ನು ಉಡುಪಿಯ ಶ್ರೀ ಕೃಷ್ಣ ಮಠದ ಪೂಜಾ ವಿಧಾನಗಳಲ್ಲಿ ಅಳವಡಿಸಿಕೊಂಡು ಆಚರಣೆ - ಉತ್ಸವ ಪರ್ವಗಳಲ್ಲಿ ಮತ್ತೆ ವಿಜೃಂಭಿಸುವಂತೆ ಮಾಡಿದ ಆಚಾರ್ಯರು ವೈದಿಕದ ಪರಮೋಚ್ಚ ಸ್ವೀಕಾರದಲ್ಲೂ ತುಳು ಮಣ್ಣಿನ ತನ್ನ ಮೂಲವನ್ನು ಮರೆಯದೆ ಒಂದು ಬಹು ಆಯಾಮದ ಧಾರ್ಮಿಕ ಕ್ಷೇತ್ರ ವಾಗಿ ಸಾಂಸ್ಕೃತಿಕ ಕೇಂದ್ರವಾಗಿ ಉಡುಪಿಯನ್ನು ಸಿದ್ಧಗೊಳಿಸಿದರು .ಬಹುಶಃ ಇದೇ , ಧಾರ್ಮಿಕ ಬಹುತ್ವ ಕಾರಣವಾಗಿ , ಉಡುಪಿ ದೇಶದ ಭೂಪಟದಲ್ಲಿ , ವಿಶ್ವದಲ್ಲಿ ಗುರುತಿಸಲ್ಪಟ್ಟಿತು . ತುಳುವರ ಹೆಚ್ಚುಗಾರಿಕೆ , ಬದುಕಿನ ವಿಧಾನದಲ್ಲಿ , ಭಾಷೆಯ ಮಾಧುರ್ಯದಲ್ಲಿ , ಮಣ್ಣಿನ ಅತಿಶಯತೆಯಲ್ಲಿದೆ . ಈ ಎಲ್ಲವನ್ನೂ ನಾವಿಂದು ಉಡುಪಿಯಲ್ಲಿ , ಶ್ರೀ ಕೃಷ್ಣ ಮಠದ ಮಹೋತ್ಸವಗಳಲ್ಲಿ ,ರಥ ಬೀದಿಯಲ್ಲಿ ಕಾಣಬಹುದು . ಸುಂದರ ಮಂದಿರಗಳ ನಗರ ಉಡುಪಿ ಆಚಾರ್ಯ ಮಧ್ವರು ವೇದಾಂತ ಸಾಮ್ರಾಜ್ಯವನ್ನು ಆಳಿದ ಮಂಗಳ ಭೂಮಿ , ಶ್ರೀ ಕೃಷ್ಣ ಪ್ರತಿಷ್ಠೆಯಿಂದ ಪರಿಪೂರ್ಣ ಕ್ಷೇತ್ರವಾಯಿತು . ಅಷ್ಟ ಯತಿಗಳನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಸರದಿಯಲ್ಲಿ ಶ್ರೀ ಕೃಷ್ಣನ ಪೂಜೆಗೆ ನೆಲೆಗೊಳಿಸಿದ ಪೂರ್ಣಪ್ರಜ್ಞರು ಎರಡು ತಿಂಗಳ ಅವಧಿಯ ಪರ್ಯಾಯ ಪೂಜಾ ವಿಧಾನ ಆರಂಭಿಸಿದರು . ಈ ಕಾಲಾವಧಿಯನ್ನುಸೋದೆ ಮಠದ ಶ್ರೀ ಮದ್ವಾದಿರಾಜರು ಎರಡು ವರ್ಷಕ್ಕೆ ವಿಸ್ತರಿಸಿ ಪರ್ಯಾಯಕ್ಕೆ ಹೊಸ ಆಯಾಮ ನೀಡಿದರು , ಸಮಷ್ಟಿಯ ಸಹಭಾಗಿತ್ವಕ್ಕೆ ಅವಕಾಶವಾಯಿತು . ನಿತ್ಯೋತ್ಸವದ ನಾಡಿನಲ್ಲಿ ಮತ್ತೊಂದು ಉತ್ಸವ ಸೇರಿ ಕೊಂಡು ಪರ್ಯಾಯೋತ್ಸವವಾಯಿತು, ನಾಡ ಹಬ್ಬವಾಗಿ ಮಾನ್ಯವಾಯಿತು . ತತ್ತ್ವವಾದ ಭಾರತೀಯ ತತ್ತ್ವಜ್ಞಾನದ ಪರಂಪರೆಗೆ ಹೊಸ ತಿರುವು ನೀಡಿ ದೇಶದಾದ್ಯಂತದ ವಿದ್ವಾಂಸರನ್ನು ನಿಬ್ಬೆರಗುಗೊಳಿಸಿ ಹೊಸ ಚರ್ಚೆಗೆ ನಾಂದಿ ಹಾಡಿದ ಶ್ರೀ ಮಧ್ವಾಚಾರ್ಯರ ವಿಚಾರಧಾರೆ "ತತ್ತ್ವವಾದ". ವೇದಗಳಿಗೆ ಜೀವಾತ್ಮ - ಪರಮಾತ್ಮಪರವಾದ ವ್ಯಾಖ್ಯಾನ ನೀಡಿದವರಲ್ಲಿ ಮೊದಲಿಗರಾಗಿ , ವೇದ ಪ್ರತಿಪಾದ್ಯವಾದ ಅನೇಕ ಸತ್ಯಗಳ ಪರಿಶೋಧಕರಾಗಿ ಆಚಾರ್ಯ ಮಧ್ವರು ತಾವು ನಡೆಸಿದ ಅಧ್ಯಯನದ ಮೂಲಕ ಕಂಡು ಕೊಂಡ 'ತತ್ತ್ವವಾದ' ಅಂದರೆ 'ದ್ವೈತ' ಸಿದ್ಧಾಂತವನ್ನು ಘೋಷಿಸಿದ್ದು'ಒಡಿಪು' ಅಥವಾ ' ಉಡುಪಿ'ಯಲ್ಲಿ . ಮೂರನೇ ಆಚಾರ್ಯನಾಗಿ ಸನಾತನ ಧರ್ಮಕ್ಕೆ ಸರಳ ಸುಂದರ ಸರ್ವಮಾನ್ಯ , ಸರ್ವಸಮ್ಮತ ವಿವರಣೆ ನೀಡಿದ ಪೂರ್ಣಪ್ರಜ್ಞರು ಲೋಕದೃಷ್ಟಿಯಿಂದ ಕಾಲದ ಅನಿವಾರ್ಯತೆಗೆ ಸ್ಪಂದಿಸಿದವರು .ಹಳೆಯ , ತಿರುಳಿಲ್ಲದ , ಗೊಂದಲಕ್ಕೆ ಕಾರಣವಾಗಬಹುದಾದ ಅನೇಕ ನಂಬಿಕೆಗಳನ್ನು ಸ್ಪಷ್ಟವಾಗಿ ಖಂಡಿಸಿ ,ಅಧ್ಯಾತ್ಮವನ್ನು ಮೂಢನಂಬಿಕೆಗಳ ಜೊತೆಗೆ ಸಮೀಕರಿಸಬಾರದೆಂದು ಪ್ರಚುರಪಡಿಸಿದರು . ಸಮಾಜದ ಯಾವ ವರ್ಗದ ಮೇಲೂ ತಿರಸ್ಕಾರ ಭಾವವಿಲ್ಲ , ಸಮಸ್ತರಿಗೂ ನಿಷ್ಕಳಂಕ ,ನಿಸ್ವಾರ್ಥ ಭಗವತ್ ಸೇವೆಯಿಂದ ಮೋಕ್ಷ ಖಚಿತ . ಮಹಾಪಾಪಿಗಳೂ ಪಶ್ಚಾತ್ತಾಪ ಪಟ್ಟಲ್ಲಿ , ಸನ್ಮಾರ್ಗದಲ್ಲಿ ನಡೆದಲ್ಲಿ ಆತ್ಮೋನ್ನತಿ ಸಾಧ್ಯ ಎಂಬ ಸಂದೇಶವನ್ನು ನೀಡಿದವರು ಮಧ್ವರು . ಸದ್ಗುಣಭರಿತವಾದ ಗುಣ ಹಿರಿತನ ವ್ಯಕ್ತಿಗೆ ಮಾನ್ಯತೆಯನ್ನು ನೀಡುತ್ತದೆ ಗುಣಗಳೇ ಇಲ್ಲದ ಬ್ರಾಹ್ಮಣನೂ ನಿಂದ್ಯನೆ ಎಂಬುದು ಮಧ್ವಾಚಾರ್ಯರ ನಿಲುವು ಆಗಿತ್ತು . ಪ್ರಾಣಿ ಸೇವೆಯೂ ಭಗವಂತನನಿಗೆ ಪ್ರಿಯವಾದುದು ಎಂದು ವಿಶ್ಲೇಷಿಸುತ್ತಿದ್ದ ಆಚಾರ್ಯರು ನಾರಾಯಣನೊಬ್ಬನೆ ಸರ್ವೋತ್ತಮ , ಸ್ವತಂತ್ರನಾದ ಪರದೈವ , ಏಕೋ ದೇವಃ ಎನ್ನುವುದೇ ವೈದಿಕ ವಾಙ್ಮಯದ ಸಾರ ಎಂದು ಪ್ರತಿಪಾದಿಸಿದರು . ಉಡುಪಿಯಲ್ಲಿ ಶ್ರೀ ಕೃಷ್ಣ ಪ್ರತಿಷ್ಠೆಯ ಮೂಲಕ ಭಕ್ತಿ ಸಾಮ್ರಾಜ್ಯಕ್ಕೆ ಭದ್ರ ಬುನಾದಿ ಹಾಕಿದ ಆಚಾರ್ಯರು ಬೆಳೆದದ್ದು ನೆಲದಗಲಕ್ಕೆ , ಮುಗಿಲೆತ್ತರಕ್ಕೆ . ಸುಲಭ ಗ್ರಾಹ್ಯವಾದ ತತ್ವಜ್ಞಾನದ ನಿರೂಪಣೆ , ಸರ್ವ ಸಮಭಾವದ ಉದಾತ್ತ ಧೋರಣೆ , ಜನಪದಕ್ಕೆ ಹತ್ತಿರವಾದ ವಿಚಾರಧಾರೆಗಳಿಂದ ಜನಮಾನಸ ಗೆದ್ದರು . ಪ್ರವೇಶಕ್ಕೆ ಸುಲಭ ಸಾಧ್ಯವಾದ , ವಿಸ್ತೃತ ಹರವುಳ್ಳ , ಸುಂದರ ವೇದಾಂತವು ಆಚಾರ್ಯರ 'ತತ್ತ್ವವಾದ'ವಾಗಿದ್ದರೂ ಸ್ಥಾಪಿತ ಚಿಂತನೆಗಳವರಿಂದ , ವಿದ್ವಾಂಸರಿಂದ ಬಹಳಷ್ಟು ಆಕ್ಷೇಪಗಳಿಗೆ , ಚರ್ಚೆಗೆ ವಸ್ತುವಾಯಿತು . ಆದುದರಿಂದ ವಾದಗಳೇ ಪ್ರಧಾನವಾಯಿತು . ನಿಜ ಅರ್ಥದಲ್ಲಿ ತತ್ತ್ವವಾದ ಮಂಡಿಸಲ್ಪಟ್ಟಿತು .ಹೊಸ ಚಿಂತನೆಯೊಂದನ್ನು ಸ್ಥಾಪಿಸಲು , ಪ್ರಚುರ ಪಡಿಸಲು , ಜನಪ್ರೀತಿ ಸಂಪಾದಿಸಲು ಮಂಡನೆ - ಖಂಡನೆಗಳು ಅನಿವಾರ್ಯ . ಇದು ಮಧ್ವರಿಗೂ ಸಹಜವಾಗಿ ಎದುರಾದ ಸಮಸ್ಯೆ . ಆದರೆ ಎಲ್ಲಾ ವಾದಗಳಿಗೆ ಸಮರ್ಥವಾಗಿ, ಸಮಾಧಾನಕರವಾಗಿ ಉತ್ತರಿಸಿ ದ್ವೈತ ವನ್ನು ಜನಪ್ರಿಯಗೊಳಿಸಿದರು . ಚಾರಿತ್ರಿಕ , ಧಾರ್ಮಿಕ ಸ್ಥಿತ್ಯಂತರ ತನ್ನ ಆಧ್ಯಾತ್ಮಿಕ ಗುರು ಅಚ್ಯುತ ಪ್ರಜ್ಞರಿಗೆ ಅಚ್ಚರಿಯನ್ನುಂಟು ಮಾಡುತ್ತಾ ಬೆಳೆದ ಪೂರ್ಣಪ್ರಜ್ಞರು ಆನಂದ ತೀರ್ಥರಾಗಿ ಮಧ್ವಾಚಾರ್ಯರೆಂದೇ ಪ್ರಸಿದ್ಧರಾದರು .ಸನ್ಯಾಸ ಸ್ವೀಕರಿಸಿ , ಪೂರ್ಣಪ್ರಜ್ಞರಾಗಿ ನಲುವತ್ತೆ ದಿನಗಳಲ್ಲಿ ವಾದವನ್ನು ಎದುರಿಸಿದರು , ಉಡುಪಿಗೆ ಬಂದಿದ್ದ ಆ ವಿದ್ವಾಂಸರನ್ನು ತರ್ಕದಲ್ಲಿ ಸೋಲಿಸಿದರು .ಬಾಲಕ ಯತಿಯ ಅದ್ಭುತ ಪ್ರತಿಭೆಗೆ ಗುರುಗಳಾದ ಅಚ್ಯುತ ಪ್ರಜ್ಞರು ತಲೆದೂಗಿದರು . ಮುಂದೊಂದು ದಿನ ಬುದ್ಧಿಸಾಗರನೆಂಬಾತ ತನ್ನ ಶಿಷ್ಯ ವಾದಿಸಿಂಹನೊಂದಿಗೆ ಅಚ್ಯುತಪ್ರಜ್ಞರ ಮಠಕ್ಕೆ ಆಗಮಿಸಿದ್ದ , ಈ ವಿದ್ವಾಂಸನನ್ನು ಪೂರ್ಣಪ್ರಜ್ಞರು ನಿರುತ್ತರಗೊಳಿಸಿದರು . ಸಂತುಷ್ಟರಾದ ಗುರು ಅಚ್ಯುತ ಪ್ರಜ್ಞರು ವೇದಾಂತ ಸಾಮ್ರಾಜ್ಯಕ್ಕೆ ಪಟ್ಟಾಭಿಷೇಕಗೈದು " ಆನಂದತೀರ್ಥ" ರೆಂದು ಹೆಸರಿಸಿದ್ದು ಸಾರ್ಥಕವಾಯಿತೆಂದು ಸಮಾಧಾನಪಟ್ಟರು . ಮುಂದೆ ಎರಡುಬಾರಿ ಭಾರತದಾದ್ಯಂತ ಸಂಚರಿಸಿ ಹಲವು ವಿದ್ವಾಂಸರನ್ನು , ಚಿಂತಕರನ್ನು ವಾದದಲ್ಲಿ ಮಣಿಸಿದಾಗ ಕೆಲವರು ಶಿಷ್ಯರಾದರು . ಮಧ್ವರು ಅಂತ್ಯದ ದಶಕದವರೆಗೂ ವಾದಗಳನ್ನೆ ಎದುರಿಸಬೇಕಾಯಿತು . ' ತತ್ತ್ವವಾದ ' ವನ್ನು ಸ್ಥಾಪಿಸಿದರು . ಉಡುಪಿಯು ನಿಗಮಾಗಮಗಳು ನಿಗಿನಿಗಿಸುವ ನಿಕೇತನವಾಯಿತು. ನಿಸ್ಪೃಹ ಮನಸ್ಥಿತಿಯಿಂದ ನಿಸ್ಸೀಮ ಚಿಂತಕನೆನಿಸಿ ನೀಲಮೇಘಶ್ಯಾಮನಾದ ಕೃಷ್ಣನನ್ನು ಆರಾಧಿಸುತ್ತಾ ಒಂದು ಸುವ್ಯವಸ್ಥೆಯ ಕ್ಷೇತ್ರವನನ್ನು ಕಟ್ಟಿದರು .ನಿತ್ಯ ಉತ್ಸವದಂತಹ ವೈಭವದ ಭವ್ಯತೆಯನ್ನು ಕಲ್ಪಿಸಿ ದಿವ್ಯವಾದ ಕೃಷ್ಣ ಸಾನ್ನಿಧ್ಯ ಭಕ್ತಜನ ಕೋಟಿಯು ಶ್ರದ್ಧಾ ಕೇಂದ್ರವಾಯಿತು . ಅನ್ನ ಬ್ರಹ್ಮನ ಆರಾಧನೆ ಮುಂತಾದ ಅನೇಕ ಆ ಕಾಲಕ್ಕೆ ನೂತನವಾದ ವ್ಯವಸ್ಥೆಗಳನ್ನು ನೆಲೆಗೊಳಿಸಿ ಮಧ್ವರು ಜನಪದಕ್ಕೆ ಸಮೀಪವಾದರು . ಆದರೂ ಈ ತತ್ತ್ವವಾದಿ ವಾದದೊಳು ಉದ್ಭವಿಸಿದವರು . ಕಾಲ : 13ನೇ ಶತಮಾನ . ಚಾರಿತ್ರಿಕವಾಗಿ ಬದಲಾವಣೆಯ ಕಾಲ . ಧಾರ್ಮಿಕ - ಸಾಂಸ್ಕೃತಿಕ ಸ್ಥಿತ್ಯಂತರಗಳ ಸಂದರ್ಭ . ಅನ್ಯಸಂಸ್ಕೃತಿಗಳು ಧಾರ್ಮಿಕತೆಯನ್ನು ಅಲುಗಾಡಿಸುತ್ತಿದ್ದ ವೇಳೆ . ಆಚಾರ್ಯರು ಕಾಲದ , ಸಂದರ್ಭದ , ಮನೋಧರ್ಮಗಳ ಅನಿವಾರ್ಯತೆಯನ್ನು ಮನಗಂಡು ಕಾರ್ಯ ಸಾಧಿಸಿದರು .ಈ ಮಹಾತ್ಮ ತುಳುವ ತಾಯಿಯ ಮಗ ಎನ್ನುವುದು ನೆನಪಿಸಿಕೊಳ್ಳಲೇಬೇಕು . (ಬರಹ : ಕೆ . ಎಲ್ . ಕುಂಡಂತಾಯ) (ಮದ್ವಾಚಾರ್ಯರ ಕಾಲಿನ ಕೆಳಗಡೆ ಇರುವುದು ಮಣಿಮಂತ ರಾಕ್ಷಸ, ಈ ಫೋಟೋ ಮದ್ವಾಚಾರ್ಯರು ಮಣಿಮಂತ ರಾಕ್ಷಸನನ್ನು ಸಂಹರಿಸಿದ ಸ್ಥಳದಲ್ಲಿರುವ ಏಕಶಿಲೆಯದ್ದಾಗಿದೆ) ಅದರ ಕಥೆಯನ್ನು ಮುಂದಿನ ಭಾಗದಲ್ಲಿ ಬರೆಯಲಾಗುವುದು