ಉಡುಪಿ ಜೂನ್ 26 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯುವ ಕುರಿತಂತೆ ಕೂಡಲೇ ಎಸ್ಪಿ ಮತ್ತು ಕುಂದಾಪುರ ಎಸಿ ಅವರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಕಟ್ಟುನಿಟ್ಟಿನ ತಪಾಸಣಾ ಕಾರ್ಯ ಕೈಗೊಳ್ಳುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸೂಚಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಮರಳು ಸಮಸ್ಯೆ ಮತ್ತು ಕೋವಿಡ್-19 ಪ್ರಸ್ತುತ ಪರಿಸ್ಥಿತಿ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಮರಳು ಸಾಗಾಟ ತಡೆಯುವ ಕುರಿತಂತೆ ಎಸ್ಪಿ ಮತ್ತು ಎಸಿ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿ, ಮರಳುಗಾರಿಕೆ ನಡೆಯುವ ಪ್ರದೇಶಗಳ ಮೇಲೆ ದೀಢೀರ್ ದಾಳಿ ನಡೆಸುವುದರ ಮೂಲಕ ಹಾಗೂ ನಿರಂತರವಾಗಿ ಪರಿಶೀಲನೆ ನಡೆಸುವುದರ ಮೂಲಕ ಜಿಲ್ಲೆಯಲ್ಲಿ ಯಾವುದೇ ಅಕ್ರಮ ಮರಳು ಸಾಗಾಟ ನಡೆಯದಂತೆ ಎಚ್ಚರವಹಿಸುವಂತೆ ಸೂಚಿಸಿದ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಂಡಗಳನ್ನು ರಚಿಸುವಂತೆ ಹಾಗೂ ತಂಡದಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ನಿಯೋಜಿಸುವಂತೆ ಮಹೇಶ್ವರ ರಾವ್ ಸೂಚನೆ ನೀಡಿದರು.
ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳು ಸಾಗಾಟಕ್ಕೆ ಸಂಬಂದಿಸಿದ ಯಾವುದೇ ವಾಹನ ಕಂಡುಬಂದಲ್ಲಿ ಕೂಡಲೇ ಮುಟ್ಟುಗೋಲು ಹಾಕಿಕೊಂಡು ಸಂಬಂದಪಟ್ಟವರ ವಿರುದ್ದ ಎಫ್.ಐ.ಆರ್. ದಾಖಲಿಸುವಂತೆ ಹಾಗೂ ಮರಳುಗಾರಿಕೆ ನಡೆಸಲು ಅನುಮತಿ ಪಡೆದು ನಿಯಮ ಉಲ್ಲಂಘಿಸಿರುವ ವಾಹನಗಳ ವಿರುದ್ದ ಸಹ ಕೂಡಲೇ ಕ್ರಮ ಕೈಗೊಳ್ಳುವಂತೆ ಮಹೇಶ್ವರ ರಾವ್ ಸೂಚಿಸಿದರು.
ಅಕ್ರಮ ಮರಳುಗಾರಿಕೆ ತಡೆಯುವ ಜವಾಬ್ದಾರಿ ಹೊಂದಿರುವ ಸಂಬಂದಪಟ್ಟ ತಹಸೀಲ್ದಾರ್ ಗಳು, ಪಿಡಿಓ ಗಳು, ಗಣಿ ಇಲಾಖೆ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳು ಮರಳುಗಾರಿಕೆ ನಡೆಯುವ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಕ್ರಮ ನಡೆಯದಂತೆ ಎಚ್ಚರವಹಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಚೇತರಿಕೆ ಪ್ರಮಾಣ 63% ಇದೆ ಆದರೆ ಜಿಲ್ಲೆಯಲ್ಲಿ ಇದರ ಪ್ರಮಾಣ 92% ಇದೆ, ಸೋಂಕಿತರ ಮರಣ ಪ್ರಮಾಣ ರಾಜ್ಯದಲ್ಲಿ 1.6% ಇದ್ದರೆ ಜಿಲ್ಲೆಯಲ್ಲಿ 0.2 ಇದೆ, ಜಿಲ್ಲೆಯಲ್ಲಿ ಕೋವಿಡ್ 19 ವಿರುದ್ದ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಕರೋನಾ ಸೋಂಕಿತರ ಸಂಪರ್ಕದವರ ಟ್ರೇಸಿಂಗ್ ಕಾರ್ಯ ಸಹ ಉತ್ತಮವಾಗಿ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಕಾರ್ಯವನ್ನು ಅಭಿನಂದಿಸಿದ ಮಹೇಶ್ವರ ರಾವ್, ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 3 ಮಂದಿಯ ವಿರುದ್ದ ಎಫ್.ಐ.ಆರ್ ದಾಖಲಿಸಿದ್ದು, ಕ್ವಾರಂಟೈನ್ ನಲ್ಲಿರುವವರ ಮನೆಗೆ ಪ್ರತಿದಿನ ಭೇಟಿ ನೀಡಿ, ಕ್ವಾರಂಟೈನ್ ಆಪ್ ನಲ್ಲಿ ದಾಖಲಿಸುವ ಕಾರ್ಯದಲ್ಲಿ ಜಿಲ್ಲೆಯಲ್ಲಿ 92% ಸಾಧನೆ ಮಾಡಿದ್ದು, ರಾಜ್ಯದಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ, ಕೋವಿಡ್ -19 ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿಗಳ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ 19 ಚಿಕಿತ್ಸೆಗಾಗಿ 2400 ಹಾಸಿಗೆ ಸೌಲಭ್ಯವಿದ್ದು, 9 ಫಿವರ್ ಕ್ಲಿನಿಕ್ ತೆರೆಯಲಾಗಿದೆ, ಐ.ಎಲ್.ಐ ಮತ್ತು ಸಾರಿ ಪ್ರಕರಣಗಳ ಕುರಿತಂತೆ ಪ್ರತಿದಿನ ವರದಿ ಪಡೆಯಲಾಗುತ್ತಿದೆ, 13840 ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು ಪ್ರಸ್ತುತ 116 ಸಕ್ರಿಯ ಪ್ರಕರಣಗಳು ಮಾತ್ರ ಇವೆ ಎಂದು ಕೋವಿಡ್-19 ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮಾಹಿತಿ ನೀಡಿದರು.
ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಕುಂದಾಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಹಾಗೂ ಎಲ್ಲಾ ತಾಲೂಕುಗಳ ತಹಸೀಲ್ದಾರರು ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.