ಆಟಿ , ಆಷಾಢವಲ್ಲ , ಆಷಾಢ, ಆಟಿಯಲ್ಲ. 'ಆಟಿ' ತುಳುವರಾದ ನಮ್ಮ ಸೌರ ಪದ್ಧತಿಯ ನಾಲ್ಕನೇ ತಿಂಗಳು.ಈ ವರ್ಷ ಜುಲೈ 17 ನೇ ತಾರೀಕಿನಿಂದ ಆರಂಭವಾಗುತ್ತದೆ . ಆಟಿ ಎಂದರೆ ಕರ್ಕಾಟಕ ಮಾಸ.
ಆಷಾಢ ಚಾಂದ್ರ ಪದ್ಧತಿಯ ನಾಲ್ಕನೇ ತಿಂಗಳು .ಈ ವರ್ಷ ಜೂನ್ 22 ನೇ ತಾರೀಕಿನಿಂದ ಆರಂಭವಾಗಿದೆ .
ರೂಢಿಯಲ್ಲಿ ಇರುವಂತೆ ಸೌರ ವರ್ಷದ ತಿಂಗಳುಗಳ ಯಾದಿ ಇಂತಿದೆ : ಪಗ್ಗು (ಮೇಷ) , ಬೇಶ (ವೃಷಭ) , ಕಾರ್ತೆಲ್ (ಮಿಥುನ) , ಆಟಿ (ಕರ್ಕಾಟಕ ) , ಸೋಣ(ಸಿಂಹ) , ಕನ್ಯಾ (ನಿರ್ನಾಲ್) , ಬೊಂತೆಲ್( ತುಲಾ) , ಜಾರ್ದೆ( ವೃಶ್ಚಿಕ) , ಪೆರಾರ್ದೆ(ಧನು) , ಪೊನ್ನಿ- ಪಯಿಂತೆಲ್(ಮಕರ) ,ಮಾಗಿ - ಮಾಯಿ( ಕುಂಭ) ,ಸುಗ್ಗಿ( ಮೀನ) .
ಸೌರಮಾನಿಗಳ ಕ್ರಮದಂತೆ
"ಸೌರಯುಗಾದಿ" ಎಂದರೆ ವಿಷು , ಬಿಸು ,ಇಗಾದಿ ಸನ್ನಿಹಿತವಾಗುವ ಸೌರ ವರ್ಷದ ಆರಂಭದ ದಿನ . "ಪಗ್ಗು ತಿಂಗೊಲ್ದ ತಿಂಗೊಡೆ" ಸೌರಯುಗಾದಿ .ಮೇಷ ಮಾಸದ ಮೊದಲದಿನ .
ಚಾಂದ್ರ ವರ್ಷ ಆರಂಭವಾಗುವುದು ಚಾಂದ್ರ ಪದ್ಧತಿಯ ಮೊದಲ ತಿಂಗಳಾದ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ . ಪಾಲ್ಗುನ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ಚಾಂದ್ರ ವರ್ಷದ ಕೊನೆಯ ದಿನ . ಚೈತ್ರ , ವೈಶಾಖ , ಜ್ಯೇಷ್ಠ , ಆಷಾಡ , ಶ್ರಾವಣ , ಭಾದ್ರಪದ , ಆಶ್ವಯುಜ , ಕಾರ್ತಿಕ , ಮಾರ್ಗಶಿರ , ಪೌಷ , ಮಾಘ , ಪಾಲ್ಗುನ .ಇವು ಚಂದ್ರ ತಿಂಗಳುಗಳು . ಈ ತಿಂಗಳುಗಳ ಯಾದಿಯಂತೆ ದಿನಗಳು ಉರುಳುತ್ತಾ ವರ್ಷ ಕ್ರಮಿಸುತ್ತದೆ .ಹಳೆ ವರ್ಷ ನೇಪಥ್ಯಕ್ಕೆ ಸರಿಯುತ್ತಾ ಹೊಸವರ್ಷ ಬರುತ್ತದೆ .
ತುಳುವರಲ್ಲಿ ಚಾಂದ್ರಮಾನಿಗಳೂ ಇದ್ದಾರೆ . ಕೆಲಂಡರ್ ಅನುಸರಿಸುವವರೂ ಇದ್ದಾರೆ . ಇವರೊಂದಿಗೆ ಬದುಕುವ ನಮಗೆ ಇಂತಹ ಗೊಂದಲಗಳು ಸಹಜ .ನಾವು ಚಾಂದ್ರಯುಗಾದಿಯನ್ನೂ ಆಚರಿಸೋಣ , ಕೆಲಂಡರ್ ಹೊಸವರ್ಷವನ್ನೂ ಆಚರಿಸೋಣ . ಆದರೆ ನಮ್ಮದೇ ಆದ ವಿಷು , ಬಿಸು , ಇಗಾದಿಯನ್ನು " ಕಣಿ " ನೋಡುತ್ತಾ , ಹಿರಿಯರಿಗೆ ನಮಸ್ಕರಿಸುತ್ತಾ , ಪಾಯಸದ ಊಟಮಾಡುತ್ತಾ ಆಚರಿಸೋಣ .
ಆಷಾಢ - ಚಾಂದ್ರ ಪದ್ಧತಿಯಲ್ಲಿ ಅಂತಹ ದೊಡ್ಡ ನಿಷಿದ್ಧಗಳಿಲ್ಲ , ನಿಷಿದ್ಧಗಳಿವೆ . ಸಣ್ಣಪುಟ್ಟ ಆಚರಣೆಗಳಿರುತ್ತವೆ .
ಆದರೆ ಆಟಿ - ಸೌರ ಪದ್ಧತಿಯ ತಿಂಗಳಲ್ಲಿ "ಆಟಿ ಕುಲ್ಲುನು"ಎಂದು ತವರು ಮನೆಗೆ ಹೋಗುವ ಕ್ರಮವಿದೆ . ಆಟಿ ತಿಂಗಳಲ್ಲಿ ಕುಳಿತು ತಿನ್ನಬೇಕು , ಕೆಲಸವಿಲ್ಲ ಅದಕ್ಕಾಗಿ ತವರು ಮನೆಗೆ ಕಳುಹಿಸುವುದು ಎಂದೂ ಒಂದು ಒಡಂಬಡಿಕೆ ಇದೆ .
ಆಟಿ ಅಮಾವಾಸ್ಯೆಯಂದು "ಆಟಿ ಮದ್ದು" ಕುಡಿಯುವ ಕ್ರಮವಿದೆ . ಧಾರಾಕಾರ ಸುರಿಯುವ ಮಳೆಯಿಂದ ಆರೋಗ್ಯ ಕೆಡಬಾರದಲ್ಲ ,ಅದಕ್ಕೆ ಮದ್ದು ಕುಡಿಯುವ ಆಚರಣೆ .ನಾವು ಆರೋಗ್ಯವಂತರಾದರೆ ಸಾಲದು ಗದ್ದೆಯಲ್ಲಿ ಬೆಳೆಯುತ್ತಿರುವ ನಮ್ಮಬೆಳೆಯ ರಕ್ಷಣೆಗೂ
ಕಾವೇರಿ ಮರದ ಗೆಲ್ಲುಗಳನ್ನು ಕಡಿದು ಗದ್ದೆಗಳಿಗೆ ಹಾಕುವ ಕ್ರಮವಿತ್ತು.
ನಾಗರಪಂಚಮಿಯು ಆಟಿ ಅಮಾವಾಸ್ಯೆ ಕಳೆದು ಐದನೇ ದಿನವೇ ಬರುತ್ತದೆ .
ತುಳುವಾಲ ಬಲೀಂದ್ರ ಪಾಡ್ದನದಲ್ಲಿ
ಬಲೀಂದ್ರ ಅವನು ಬಿಟ್ಟುಹೋದ ಭೂಮಿಯನ್ನು , ಪ್ರಜೆಗಳನ್ನು ನೋಡಿಬರಲು
ಆಳು ಕಳುಹಿಸುತ್ತಾನೆ ಎಂದಿದೆ . ಇದು ನಿಜವಾಗಿ ಜನ ಬೆಳೆಬೆಳೆಯುತ್ತಿದ್ದಾರಾ ,ಮಳೆ ಹೇಗೆ ಸುರಿಯುತ್ತದೆ ಎಂಬುದನ್ನು ತಿಳಿದು ಬರಲು ಆಳನ್ನು ಕಳುಹಿಸುವುದು ಎಂದು ಒಂದು ವಿವರಣೆ ಇದೆ .ಮುಂದೆ ಸೋಣ ತಿಂಗಳಿಗೆ ಬಲೀಂದ್ರನ ತಾಯಿ ಬರುತ್ತಾಳೆ ಎಂಬುದು ನಂಬಿಕೆ .
ಸೌರಯುಗಾದಿ ಹೊಸ ವರ್ಷದ ಮೊದಲ ದಿನ ಮಾತ್ರವಲ್ಲ "ಕೃಷಿ"ಗೆ ತೊಡಗುವ ದಿನವೂ ಹೌದು . "ನಾಲೆರು ಮಾದಾವೊಡು , ಪುಂಡಿಬಿತ್ತ್ ಪಾಡೋಡು" ಎಂಬುದು ಸೌರಯುಗಾದಿಯ ದಿನ
ಕೃಷಿಕನು ಕೃಷಿಗೆ ತೊಡಗುವುದು ಸಂಪ್ರದಾಯ. ನಮ್ಮ ಬಹುತೇಕ ಹಬ್ಬಗಳು ಕೃಷಿಯನ್ನು ಆಧರಿಸಿಯೇ ಒದಗಿಬರುವಂತಹದ್ದು .
ತುಳು ತಿಂಗಳ ಇಷ್ಟು ಹೋಗುವ ದಿನ ಎಂಬ ನಿರ್ಧಾರದೊಂದಿಗೆ ನಾವು ನಮ್ಮ ಕೋಲ , ನೇಮ ಹಾಗೂ ನಾಗ ತನು ತಂಬಿಲ ,ವಾರ್ಷಿಕ ದಿನಗಳನ್ನು , ಪೂರ್ವಾಪರ ಆಚರಣೆಗಳನ್ನು ನಡೆಸಿದರೆ ಇಂತಹ ಗೊಂದಲ ಇರಲಾರದು . ಇಷ್ಟನೇ ತಾರೀಕು ಎನ್ನುವುದು ನಮ್ಮ ಆಚರಣೆಗಳಿಗೆ ಹೊಂದಿಕೆ ಆಗುವುದೇ ಇಲ್ಲ . ಈ ವಿವರಣೆ ತುಳು ಸಂಸ್ಕೃತಿ ಪ್ರೀತಿಯಿಂದ ಮಾತ್ರ ಬರೆದೆ.
ಬರಹ : ಕೆ ಎಲ್ ಕುಂಡಂತಾಯ (ಹಿರಿಯ ಜಾನಪದ ವಿದ್ವಾಂಸರು)