ಕಾಪುವಿನ ಹಿರಿಯ ವೈದ್ಯ ಡಾ. ಕೆ. ಪ್ರಭಾಕರ ಶೆಟ್ಟಿಯವರಿಗೆ ರಾಜ್ಯ ಮಟ್ಟದ ಡಾ. ಬಿ.ಸಿ. ರಾಯ್ ಸ್ಮರಣಾರ್ಥ ಶ್ರೇಷ್ಟ ವೈದ್ಯ ಪ್ರಶಸ್ತಿ
ಕಾಪುವಿನ ಹಿರಿಯ ವೈದ್ಯ, ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಗಳ ಗೌರವಾಧ್ಯಕ್ಷ ಡಾ. ಕೆ. ಪ್ರಭಾಕರ ಶೆಟ್ಟಿ ಅವರು ಕರ್ನಾಟಕ ರಾಜ್ಯ ಭಾರತೀಯ ವೈದ್ಯಕೀಯ ಸಂಘ ಬೆಂಗಳೂರು ಇವರು ವೈದ್ಯರ ದಿನಾಚರಣೆಯ ಅಂಗವಾಗಿ ಡಾ. ಬಿ. ಸಿ. ರಾಯ್ ಸ್ಮರಣಾರ್ಥ ಕೊಡಮಾಡುವ ರಾಜ್ಯ ಮಟ್ಟದ ಶ್ರೇಷ್ಟ ವೈದ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ ಐದೂವರೆ ದಶಕಗಳಿಂದ ಕಾಪು ಪರಿಸರದಲ್ಲಿ ವೈದ್ಯಕೀಯ ಸೇವೆ ನಡೆಸಿಕೊಂಡು ಬರುತ್ತಿರುವ ಡಾ. ಪ್ರಭಾಕರ ಶೆಟ್ಟಿ ಅವರು ವೈದ್ಯಕೀಯ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ನಡೆಸಿಕೊಂಡು ಬರುತ್ತಿರುವ ಜೀವಮಾನದ ಶ್ರೇಷ್ಟ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಾಪು ಪ್ರಶಾಂತ್ ಹಾಸ್ಪಿಟಲ್ ನ ಸ್ಥಾಪಕರಾಗಿರುವ ಅವರು ಕಾಪು ಸುತ್ತಮುತ್ತಲಿನಲ್ಲಿ ಅತ್ಯಂತ ಹಿರಿಯ ವೈದ್ಯರಾಗಿ ಗ್ರಾಮೀಣ ಜನರ ಪಾಲಿನ ಸಂಜೀವಿನಿಯಾಗಿದ್ದಾರೆ. ಉಳಿಯಾರಗೋಳಿ ದಂಡತೀರ್ಥ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಶೈಕ್ಷಣಿಕ ಸೇವೆಯನ್ನು ಒದಗಿಸಿದ್ದಾರೆ.
ವೈದ್ಯಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಹತ್ತಾರು ವಿಶೇಷ ಪ್ರಶಸ್ತಿ - ಗೌರವಗಳಿಗೆ ಪಾತ್ರರಾಗಿದ್ದಾರೆ.