ನಿರಂತರ್ ಉದ್ಯಾವರ : ಏಳು ದಿನದ ಬಹುಭಾಷ ನಾಟಕೋತ್ಸವಕ್ಕೆ ತೆರೆ
Posted On:
09-02-2023 05:54PM
ಉಡುಪಿ : ನಿರಂತರ್ ಸಂಘಟನೆಯ ನೇತೃತ್ವದಲ್ಲಿ ಐದನೇ ವರ್ಷದ ಪ್ರಯುಕ್ತ ಉದ್ಯಾವರದ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವಠಾರದಲ್ಲಿ ಏಳು ದಿನದ ಬಹುಭಾಷ ನಾಟಕೋತ್ಸವವು ಯಶಸ್ವಿಯಾಗಿ ಮುಕ್ತಾಯ ಕಂಡಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯವಾದಿ ಮತ್ತು ಖ್ಯಾತ ಲೇಖಕಿಯಾಗಿರುವ ವಿತಾಶ ರೋಡ್ರಿಗಸ್ (ಮುದ್ದು ತೀರ್ಥಹಳ್ಳಿ), ಪ್ರಸ್ತುತ ಕಾಲದಲ್ಲಿ ಜನ ನಾಟಕಗಳಿಗಿಂತ ಚಲನಚಿತ್ರದತ್ತ ಹೆಚ್ಚು ಆಕರ್ಷಿತರಾದರೂ, ನಾಟಕಗಳು ಇನ್ನಷ್ಟು ಬೆಳೆಯುತ್ತೇವೆ. ಚಲನಚಿತ್ರಗಳು ಎಷ್ಟು ಬೆಳೆದರು ಅಥವಾ ಜನಪ್ರಿಯತೆಯನ್ನು ಕಂಡರೂ ನಾಟಕದ ಜಾಗಕ್ಕೆ ಬರಲು ಸಾಧ್ಯವೇ ಇಲ್ಲ. ನಾಟಕಕ್ಕೆ ಅದರದೇ ಆದ ವರ್ಚಸ್ಸು ಇದೆ ಎಂದರು.
ಉದ್ಯಾವರ ಚರ್ಚಿನ ಧರ್ಮ ಗುರುಗಳಾದ ವo. ಸ್ಟ್ಯಾನಿ ಬಿ ಲೋಬೊ ಮಾತನಾಡಿ, ಉದ್ಯಾವರದಲ್ಲಿ ಈ ನಾಟಕದ ಮೂಲಕ ಒಂದು ಹಬ್ಬವೇ ನಡೆಯಿತು. ಈ ಸಂಭ್ರಮದಲ್ಲಿ ನಾವೆಲ್ಲರೂ ಭಾಗಿಯಾದೆವು ಮತ್ತು ಈ ಸಂಭ್ರಮದ ಸಂದೇಶವನ್ನು ಸ್ವೀಕಾರ ಮಾಡಿದೆವು. ಉಡುಪಿ ಜಿಲ್ಲೆಯಲ್ಲಿ ಜನರನ್ನು ನಾಟಕದತ್ತ ಸೆಳೆಯವಲ್ಲಿ ನಿರಂತರ್ ಸಂಘಟನೆ ಯಶಸ್ವಿಯಾಗಿದೆ ಎಂದರು.
ವಂ. ಲಿಯೋ ಪ್ರವೀಣ್ ಮಾತನಾಡಿ, ಏಳು ದಿನದ ನಾಟಕೋತ್ಸವದ ಮೂಲಕ ಕಲಾಭಿಮಾನಿಗಳಿಗೆ ನೀತಿ ಉಳ್ಳ ಜ್ಞಾನದ ಬಾಡೂಟ ಉಣ್ಣಿಸಿದ ಯಶಸ್ವಿಯ ದಿನ. ಮನೋರಂಜನೆಯ ಜೊತೆಗೆ ನೀತಿಯುಳ್ಳ ಪಾಠವನ್ನು ನಾಟಕದ ಮೂಲಕ ನಿರಂತರ್ ಸಂಘಟನೆ ಇಲ್ಲಿಯ ಜನತೆಗೆ ನೀಡಿದೆ ಎಂದರು.
ಮುದ್ದು ತೀರ್ಥಹಳ್ಳಿ ನಾಮಾಂಕಿತ, ಉಚ್ಚ ನ್ಯಾಯಾಲಯದ ನ್ಯಾಯವಾದಿ ವಿತಾಶ ರೊಡ್ರಿಗಸ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಕುಲಪತಿ ಅ. ವo. ಡಾ. ರೋಷನ್ ಡಿಸೋಜಾ, ನಾಟಕದ ನಿರ್ದೇಶಕ ವಂ. ಆಲ್ವಿನ್ ಸೆರಾವೊ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲ. ಅನಿಲ್ ಲೋಬೊ, ಪ್ರಮುಖರಾದ ತಿಯಾದೋರ್ ಪಿರೇರಾ, ರೋನಾಲ್ಡ ಡಿಸೋಜಾ ಉಪಸ್ಥಿತರಿದ್ದರು.
ನಿರಂತರ ಅಧ್ಯಕ್ಷ ರೋಷನ್ ಕ್ರಾಸ್ತಾ ಸ್ವಾಗತಿಸಿದರೆ, ಕಾರ್ಯದರ್ಶಿ ಒಲವಿರಾ ಮತಯಸ್ ಧನ್ಯವಾದ ಸಮರ್ಪಿಸಿದರು. ಸ್ಟೀವನ್ ಕುಲಾಸೋ ಮತ್ತು ಮೈಕಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ಏಳು ದಿನದ ನಾಟಕೋತ್ಸವದಲ್ಲಿ ಐದು ಭಾಷೆಯ ನಾಟಕಗಳು ಪ್ರದರ್ಶನಗೊಂಡವು. ಸಭಾ ಕಾರ್ಯಕ್ರಮದಲ್ಲಿ ಆಯಾ ದಿನದ ನಾಟಕದ ಭಾಷೆಯ ಪ್ರಾರ್ಥನ ಗೀತೆಯನ್ನು ಹಾಡಲಾಗಿತ್ತು. ಪ್ರತಿ ದಿನ 500ಕ್ಕೂ ಅಧಿಕ ಕಲಾಭಿಮಾನಿಗಳು ನಾಟಕ ವೀಕ್ಷಣೆಯಲ್ಲಿದ್ದರೆ, ಕೊನೆಯ ದಿನ ಅದರ ಸಂಖ್ಯೆ 1,000 ಕ್ಕೆ ಸಮೀಪವಾಗಿತ್ತು.