ಕಾಪು : ಹೊಸ ಮಾರಿಗುಡಿಯಲ್ಲಿ ಜೀರ್ಣೋದ್ಧಾರದ ಕುರಿತು ಪೇಟೆಯ ವ್ಯಾಪಾರಸ್ಥರೊಂದಿಗೆ ಸಮಾಲೋಚನಾ ಸಭೆ
Posted On:
15-02-2023 09:32PM
ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನದ ನವದುರ್ಗಾ ಮಂಟಪದಲ್ಲಿ ಆದಿತ್ಯವಾರ ಮಧ್ಯಾಹ್ನ ಸಮಗ್ರ ಜೀರ್ಣೋದ್ಧಾರದ ಕುರಿತು ಕಾಪು ಪೇಟೆಯ ವ್ಯಾಪಾರಸ್ಥರೊಂದಿಗೆ ಸಮಾಲೋಚನಾ ಸಭೆ ನಡೆಯಿತು.
ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಪ್ರಾಸ್ತವಿಕವಾಗಿ ಮಾತನಾಡಿ ದಕ್ಷಿಣ ಭಾರತದಲ್ಲಿಯೇ ವಿಶಿಷ್ಟವಾಗಿ ನಿರ್ಮಾಣವಾಗುತ್ತಿರುವ ದೇಗುಲ ಇದಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆ, ಹೊರಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಗಳಿಂದ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ, ಇದೊಂದು ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಮಿಂಚಲಿದೆ ಇದರಿಂದ ಕಾಪು ಪೇಟೆಯ ವ್ಯಾಪಾರಸ್ಥರ ವ್ಯಾಪಾರದಲ್ಲಿಯೂ ಅಭಿವೃದ್ಧಿಯಾಗಲಿದೆ ಎಂದು ಹೇಳುತ್ತಾ ದೇಗುಲದ ಜೀರ್ಣೋದ್ಧಾರದ ಸಂಪೂರ್ಣ ಮಾಹಿತಿಯನ್ನು ನೀಡಿದರು. ವ್ಯಾಪಾರಸ್ಥರಾದ ನೀವೆಲ್ಲರೂ ಶಿಲಾಸೇವೆ ನೀಡುವ, ನೀಡಿಸುವ ಮೂಲಕ ಕಾರ್ಯೋನ್ಮುಖರಾಗಿ ನಿಮ್ಮನ್ನು ನೀವು ಸಂಪೂರ್ಣವಾಗಿ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡಿಕೆರೆ ಪ್ರಾರ್ಥಿಸಿದರು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ಗಂಗಾಧರ ಸುವರ್ಣ ಮತ್ತು ಮಾಧವ ಆರ್. ಪಾಲನ್ ಜೀರ್ಣೋದ್ಧಾರದ ಬಗ್ಗೆ ಮಾತನಾಡಿದರು.
ಪೇಟೆಯ ವ್ಯಾಪಾರಸ್ಥರಿಂದ ಅನಿಸಿಕೆಯನ್ನು ಸಂಗ್ರಹಿಸಲಾಗಿ ಗ್ರಾಹಕರಿಗೆ ಶಿಲಾಸೇವೆಯ ಬಗ್ಗೆ ತಿಳಿಸಿ ದೇವಳದ ಸಮಗ್ರ ಜೀರ್ಣೋದ್ಧಾರಕ್ಕೆ ಕೈ ಜೋಡಿಸುತ್ತೇವೆ ಎಂದರು. ನಂತರ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ವ್ಯಾಪಾರಸ್ಥರು ಹೊಸ ಮಾರಿಗುಡಿಯ ಜಿರ್ಣೋದ್ಧಾರದಿಂದ ಕಾಪು ಪೇಟೆಯು ಅಭಿವೃದ್ಧಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಚೇರಿ ನಿರ್ವಹಣಾ ಸಮಿತಿಯ ಮುಖ್ಯ ಸಂಚಾಲಕರಾದ ಸುನಿಲ್ ಎಸ್. ಪೂಜಾರಿ, ಪ್ರಚಾರ ಸಮಿತಿಯ ಸಂಚಾಲಕರಾದ ಜಯರಾಮ್ ಆಚಾರ್ಯ, ಹರೀಶ್ ನಾಯಕ್, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಪ್ರಭಾತ್ ಶೆಟ್ಟಿ ಮೂಳೂರು ಮತ್ತು ದೇವಳದ ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.
ಗೌರವ ಸಲಹೆಗಾರರಾದ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.