ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ : ಭರವಸೆಯ ಒಪ್ಪಿಗೆ ನೀಡಿ ಬಜೆಟ್‌ನಲ್ಲಿ ವಂಚನೆ - ಪ್ರವೀಣ್ ಎಂ ಪೂಜಾರಿ

Posted On: 17-02-2023 10:42PM

ಉಡುಪಿ : ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಕುರಿತು ಮುಖ್ಯಮಂತ್ರಿಯವರು ನೀಡಿದ ಭರವಸೆ ಸುಳ್ಳಾಗಿದೆ. ಸಮಾಜದ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಸಚಿವರಾದ ಸುನಿಲ್ ಕುಮಾರ್ ನೇತೃತ್ವದಲ್ಲಿ ಬಿಲ್ಲವ ಸಮುದಾಯದ ಮುಖಂಡರ ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿಗೆ ಜ.5ರಂದು ಮನವಿ ಸಲ್ಲಿಸಿದ್ದ ಸಂದರ್ಭ ನಿಗಮ ಸ್ಥಾಪನೆಗೆ ಸ್ಪಷ್ಟ ಭರವಸೆಯ ಒಪ್ಪಿಗೆ ನೀಡಿ ಸೂಕ್ತ ಅನುದಾನದೊಂದಿಗೆ ಈ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಆದರೂ ಈ ಬಾರಿಯ ಬಜೆಟ್‌ನಲ್ಲಿ ಯಾವುದೆ ಕ್ರಮ ಕೈಗೊಳ್ಳದೆ ಮತ್ತೆ ಬಿಲ್ಲವ, ಈಡಿಗರಿಗೆ ಅನ್ಯಾಯವೆಸಗಿದ್ದಾರೆ.

ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿ ಹಾಗೂ ನಾರಾಯಣ ಗುರು ತತ್ವ ಆದರ್ಶಗಳ ಪ್ರಚಾರ ದೃಷ್ಟಿಯಿಂದ ನಿಗಮ ಸ್ಥಾಪನೆ ಅಗತ್ಯವಾಗಿದ್ದರೂ ಹಿಂದುಳಿದ ಸಮಾಜದ ನಮಗೆ ಅನ್ಯಾಯವಾಗಿದೆ. ಸಮಾಜದ ಮುಖಂಡರ ಸಭೆ ನಡೆಸಿ ನಿಯೋಗ ಕೊಂಡೊಯ್ದ ಮಾನ್ಯ ಸುನಿಲ್ ಕುಮಾರ್‌ರವರು ಹಾಗೂ ಆಶ್ವಾಸನೆಯನ್ನು ಸ್ವಾಗತಿಸಿ ಬೆಂಬಲಿಸಿದ ಜನಪ್ರತಿನಿಧಿಗಳೆಲ್ಲರೂ ಈ ಕುರಿತು ಸ್ಪಷ್ಟನೆ ನೀಡುವಂತೆ ಸಮಸ್ತ ಸಮಾಜಬಾಂಧವರ ಹಿತದಿಂದ ಆಗ್ರಹಿಸುತ್ತೇವೆಂದು ಬಿಲ್ಲವ ಯುವ ವೇದಿಕೆ (ರಿ) ಉಡುಪಿ ಇದರ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.