ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮಹಾಶಿವರಾತ್ರಿ : ಹಬ್ಬವಲ್ಲ, ’ವ್ರತ'

Posted On: 18-02-2023 03:27PM

'ಶಿವರಾತ್ರಿ' ಸಂಭ್ರಮಿಸುವ ಹಬ್ಬ ಅಲ್ಲ; ಉಪವಾಸವಿದ್ದು ಶಿವನನ್ನು ಅಭಿಷೇಕ, ಸಹಸ್ರನಾಮಾದಿಗಳಿಂದ ಸುಪ್ರೀತನನ್ನಾಗಿಸುವುದು, ಧ್ಯಾನಾಸಕ್ತರಾಗಿದ್ದು ರಾತ್ರಿ ಜಾಗರಣೆಯಲ್ಲಿರುವುದು, ಪ್ರದಕ್ಷಿಣೆ-ನಮಸ್ಕಾರ, ಬಿಲ್ವಾರ್ಚನೆ ಯಿಂದ ಮಹಾದೇವನನ್ನು ಆರಾಧಿಸುವ ವ್ರತ ವಿಶೇಷವಾಗಿ ’ಮಹಾ ಶಿವರಾತ್ರಿ’ ಪುರಾಣಕಾರರಿಂದ ವ್ಯಾಖ್ಯಾನಿಸಲ್ಪಟ್ಟಿದೆ. ಶರಣಾರ್ಥಿ ಶರಣರಿಗೆ ಸರ್ವಮಂಗಲವನ್ನು ಅನುಗ್ರಹಿಸುವ ಮಂಗಲಕರನಾದ ಶರ್ವನು ಜನಮಾನಸಕ್ಕೆ ಸಮೀಪದ ದೇವರು. ವೇದಪೂರ್ವ ಕಾಲದಿಂದ ಈತನ ಅಸ್ತಿತ್ವವು ಗುರುತಿಸಲ್ಪಡುತ್ತದೆ. ವೇದಕಾಲದಲ್ಲಿ ಒಂದು ಸ್ವರೂಪವನ್ನು ಪಡೆದು ವೇದೋತ್ತರ ಕಾಲಕ್ಕಾಗುವಾಗ ತ್ರಿಮೂರ್ತಿಗಳಲ್ಲಿ ಒಬ್ಬನಾಗಿ, ಲಯಾಧಿಕಾರಿಯಾಗಿ, ದೇವೋತ್ತಮನಾಗಿ, ಮಹಾಲಿಂಗನಾಗಿ, ಭೂವ್ಯೋಮ ವ್ಯಾಪಿಯಾದ ವಿರಾಟ್ ಪುರುಷನಾಗಿ ಪುರಾಣಗಳು ಕೊಂಡಾಡುವಂತಾಗುವುದನ್ನು ಗಮನಿಸಬಹುದು.

ಸದಾ ಧ್ಯಾನಾಸಕ್ತನಾಗಿರುವ ಶಿವನು ಎಷ್ಟು ವಿರಕ್ತನೋ ಅಷ್ಟೇ ಅನುರಕ್ತನು. ಸರ್ವಸಂಗ ಪರಿತ್ಯಾಗದಂತಹ ನಿವೃತ್ತಿಯು ಎಷ್ಟು ಗಾಢವಾಗಿದೆಯೋ ಅಷ್ಟೇ ತೀವ್ರವಾದ ಪ್ರವೃತ್ತಿಯೂ ಶಂಕರನಲ್ಲಿ ಕಾಣಬಹುದು. ಗೊಂದಲಗಳ ಗೂಡಾಗಿ ಕಾಣುವ, ವಿರೋಧಾಭಾಸಗಳ ಕೇಂದ್ರವೇ ಆಗಿರುವ ಶಿವ-ಶಿವಪರಿವಾರ ಸ್ವತಃ ದೇವದೇವನೇ ಮಾನವ ಕೋಟಿಗೆ ಒಂದು ಆದರ್ಶ ಸಂದೇಶವನ್ನು ನೀಡುವಂತಿದೆ. ಕಾಮನನ್ನು ದಹಿಸಿ ಕಾಮಿನಿಯನ್ನು ವರಿಸುವ ಶಿವ ನಮಗೆ ಹತ್ತಿರದವನೇ ಆಗುತ್ತಾನೆ. ಮನುಕುಲ ಸಹಜವಾಗಿ ಸಾಧಿಸಬೇಕಾದ್ದನ್ನು ಬೋಧಿಸುವಂತಿದೆ ಭಗವಾನ್ ಭರ್ಗನ ಪರಿಕಲ್ಪನೆ, ಅನುಸಂಧಾನ, ಸ್ತುತಿ ಇತ್ಯಾದಿ. ಭಕ್ತಿಗೆ ಒಲಿದಾಗ ಬೇಡಿದ್ದನ್ನು ಅನುಗ್ರಹಿಸುವ ಶಿವನು ಕೆಲವೊಮ್ಮೆ ’ಬೋಳೆ ಶಂಕರ’ನೆಂದೇ ಗುರುತಿಸುವಷ್ಟು ಮುಗ್ಧನಾಗಿ ನಮ್ಮ ಮುಂದೆ ನಿಲ್ಲುತ್ತಾನೆ. ಕೋಪಗೊಂಡಾಗ ಬ್ರಹ್ಮಾಂಡ ಭಾಂಡವನ್ನೇ ಲಯಗೊಳಿಸುವ ಮಹಾಶಕ್ತಿಯಾಗಿ ವಿಜೃಂಭಿಸುತ್ತಾನೆ. ಅರ್ಧನಾರೀಶ್ವರನಾಗಿ ಗೃಹಸ್ಥನ ಬದುಕಿಗೆ ಮೇಲ್ಪಂಕ್ತಿಯಾಗಿರುವ ಪಾರ್ವತಿ ರಮಣನು ಮಾನವರಿಗೆ ಸಮೀಪದ ದೇವರಾಗಿ ಸುಲಭ ಸಾಧ್ಯನಾಗಿ ಕಥಾನಕಗಳಲ್ಲಿ ಚಿತ್ರಿತನಾಗಿರುವುದು ಆತನ ಜನಪ್ರಿಯತೆಗೆ ಕಾರಣವಿರಬೇಕು.

'ಮಹಾಪಾಪಗಳನ್ನು ಮಾಡಿ ಭವದ ಬಂಧನದಲ್ಲಿರುವ ನನ್ನನ್ನು ಲೋಕಕ್ಕೆ ಶಾಂತಿಯನ್ನು ಅನುಗ್ರಹಿಸುವ ದೇವನಾದ ನೀನು ಉದ್ಧರಿಸು’ ಎಂದು ಮಹಾಶಿವರಾತ್ರಿ ಪುಣ್ಯಕಾಲದ ಬೇಡಿಕೆಯಾಗಬೇಕೆಂದು ಶಾಸ್ತ್ರಗಳು ಸೂಚಿಸುತ್ತವೆ. ಸ್ವಯಂಭುವಾಗಿ ಲಿಂಗರೂಪದಲ್ಲಿ ಉದ್ಭವಿಸಿದ ದಿನ. ಹಾಲಾಹಲ ವಿಷಪಾನ ಮಾಡಿದ ಸಂದರ್ಭ, ತಾಂಡವವಾಡಿದ ಸುದಿನವೇ ಶಿವರಾತ್ರಿ ಪರ್ವಕಾಲವೆಂದು ವಿವಿಧ ವ್ಯಾಖ್ಯಾನಗಳಿವೆ. ಈ ಶುಭದಿನ ಮಾಘಮಾಸದ ಬಹುಳ ಚತುರ್ದಶಿಯಂದು ಸನ್ನಿಹಿತವಾಗುತ್ತದೆ. ಶಿವರಾತ್ರಿಯ ಪರ್ವಕಾಲದಲ್ಲಿ ಶಿವಧ್ಯಾನಸಕ್ತರಾಗುತ್ತಾ ’ಕಾಯಕವೇ ಕೈಲಾಸ’, ’ಶರಣು ಶರಣಾರ್ಥಿ’ ಎನ್ನೋಣ. ’ಓಂ ನಮಃ ಶಿವಾಯ’ ಪಠಿಸೋಣ.

ರುದ್ರ-ಪರ್ಜನ್ಯ : ಅನ್ನಾದ್ಭವಂತಿಭೂತಾನಿ ಪರ್ಜನ್ಯಾದನ್ನ ಸಂಭವಃ | ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮ ಸಮುದ್ಬವಃ || ಅನ್ನ-ಜೀವರಾಶಿ, ಅನ್ನ-ಮಳೆ, ಮಳೆ-ಯಜ್ಞ ಈ ಸಂಬಂಧವನ್ನು ನಿರೂಪಿಸುವ ಈ ಶ್ಲೋಕವು ಯಜ್ಞದ ಪರಮಲಕ್ಷ್ಮವನ್ನು ವಿವರಿಸುತ್ತದೆ. ಸಕಾಲಿಕ ಮಳೆಗೆ ಯಜ್ಞಕರ್ಮವೇ ಪೂರಕ ವೈದಿಕ ಪ್ರಕ್ರಿಯೆ ಎಂದು ದೃಢೀಕರಿಸುತ್ತದೆ. ಶಿವ, ಸದಾಶಿವ, ಪರಶಿವ ಇವು ಪರಮಾತ್ಮನ ಮನೋಜ್ಞ ಹೆಸರುಗಳು. ಇವನು ’ರುದ್ರ’ನೂ ಹೌದು. ಮಳೆ ಸುರಿಸಿ ನೀರು ಕೊಡುವವನು, ಅಧಿಕ ಶಬ್ಧ ಮಾಡುತ್ತಾ ನೀರನ್ನು ಕೊಡುವವನು ಎಂಬುದು ’ರುದ್ರ’ ಶಬ್ದಕ್ಕೆ ಯಾಸ್ಕಾಚಾರ್ಯರು ನೀಡುವ ಅರ್ಥ. ಮಳೆ ಸುರಿಸುವ ಶಿವ, ಮಳೆಗೆ ಪೂರಕವಾದ ಯಜ್ಞಕರ್ಮ. ಈ ಎರಡು ಸಿದ್ಧಾಂತಗಳಿಂದ ರುದ್ರದೇವರನ್ನು ಅಗ್ನಿ ಮುಖದಿಂದ ಆರಾಧಿಸಿದರೆ ಮಳೆಯಾಗುತ್ತದೆ. ಮಳೆಯಿಂದ ಬೆಳೆ, ಬೆಳೆಯಿಂದ ಸಮೃದ್ಧಿ ತಾನೇ? ಲೋಕ ಸುಭಿಕ್ಷೆಗೆ ಲೋಕದ ತಂದೆಯನ್ನು ಆರಾಧಿಸುವುದು, ಆ ಮೂಲಕ ಕ್ಷೋಭೆಗಳಿಲ್ಲದ, ನಿರ್ಭಯದಿಂದ ಬದುಕುವ ಪರಿಸರ ನಿರ್ಮಾಣದ ನಿರೀಕ್ಷೆ ಋಜುಮಾರ್ಗದ ಸಂಕಲ್ಪವಲ್ಲವೇ.... ಮಂಗಳಕರ ಮಹಾದೇವನನ್ನು ಶಿವರಾತ್ರಿ ಪರ್ವದಿನದಂದು ಸ್ಮರಿಸುತ್ತಾ ಲೋಕಶಾಂತಿಯನ್ನು ಹಾರೈಸೋಣ.... ಲೇಖನ‌ : ಕೆ.ಎಲ್.ಕುಂಡಂತಾಯ