ಕಾಪು : ರಾಜ್ಯಮಟ್ಟದ ಗೀತಗಾಯನ ಸಂಗೀತ ಸ್ಪರ್ಧೆ - ಶಂಕರಪುರದ ಆಯುಷ್ ರೇಗನ್ ಮಿನೇಜಸ್ ಪ್ರಥಮ ಬಹುಮಾನ
Posted On:
18-02-2023 03:40PM
ಕಾಪು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಇವರು ಆಯೋಜಿಸಿದ ರಾಜ್ಯಮಟ್ಟದ ಗೀತಗಾಯನ ಸಂಗೀತ ಸ್ಪರ್ಧೆಯಲ್ಲಿ ಕಾಪು ಶಂಕರಪುರದ ಆಯುಷ್ ರೇಗನ್ ಮಿನೇಜಸ್ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸ್ಪರ್ಧೆ ಯಲ್ಲಿ 20 ಜಿಲ್ಲೆಯ ಅಭ್ಯರ್ಥಿಗಳು ಸ್ಪರ್ದಿಸಿದ್ದರು. ಈ ಸ್ಪರ್ಧೆಯಲ್ಲಿ ಕಬ್ಸ್ ವಿಭಾಗದಲ್ಲಿ ಆಯುಷ್ ರೇಗನ್ ಮಿನೇಜಸ್ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವೇಳೆ ಪಿ ಜಿ ಆರ್ ಸಿಂದ್ಯಾರವರು ಬಹುಮಾನ ವಿತರಿಸಿ ಶುಭ ಹಾರೈಸಿದ್ದಾರೆ.
ಇವರು ರಾಜ್ಯ ಮಟ್ಟದ ಈ ಸ್ಪರ್ಧೆಯ ಸಲುವಾಗಿ ಕಾಪು ತಾಲೂಕು ಹಾಗೂ ಉಡುಪಿ ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು.
ಕಾಪುವಿನ ಶಂಕರಪುರದ ಅಲ್ವೀನ್ ಮಿನೇಜಸ್ ಹಾಗೂ ಸುನೀತಾ ಮಿನೇಜಸ್ ದಂಪತಿಗಳ ಪುತ್ರನಾದ 9 ವರ್ಷದ ಆಯುಷ್ ರೇಗನ್ ಅವರು ಶಂಕರಪುರದ ಸೈಂಟ್ ಜಾನ್ಸ್ ಅಕಾಡೆಮಿಯ 4 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.
ಇವರು ಗಾಯನಕ್ಕೆ ಒಲಿವರ್ ರೆಬೆಲ್ಲೋರವರಿಂದ ತರಬೇತಿ ಪಡೆದುಕೊಂಡಿದ್ದು, ಈ ಹಿಂದೆ ಉಡುಪಿ ಧರ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಸಂಗೀತ ಸ್ಪರ್ಧೆಯ ಮಕ್ಕಳ ವಿಭಾಗದಲ್ಲಿ ಪ್ರಥಮ ಹಾಗೂ ಕೊಂಕಣಿ ನಾಟಕ ಸಭಾ ಮಂಗಳೂರು ಆಯೋಜಿಸಿದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ಅನೇಕ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಗಾಯನ ಪ್ರತಿಭೆಯಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.