ಇವರು ಜೀವನೋತ್ಸಹದ ಗಣಿ ಪ್ರತಿಭೆಯ ಧಣಿ
ವಿಕಲಾಂಗತೆಯನ್ನು ಮೆಟ್ಟಿನಿಂತು ಚಿತ್ರಕಲೆಯಲ್ಲಿ ಸಾಧನೆಗೈದ ಸಾಧಕ : ಗಣೇಶ್ ಪಂಜಿಮಾರು
-ಮಂಜುನಾಥ ಹಿಲಿಯಾಣ.
ಇವರು ಮೂಳೆಯ ತೀವ್ರ ದುರ್ಬಲತೆಯಿಂದ ಬರುವ ಅನುವಂಶೀಯ ಖಾಯಿಲೆ Osteogenesis imperfecta ಎಂಬ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ. ಎತ್ತರ ಕೇವಲ ಮೂರಡಿ ಮಾತ್ರ. ತೂಕ ಇಪ್ಪತ್ಮೂರು ಕಿಲೋ ಗ್ರಾಂ. ಇವರ ಒಡಹುಟ್ಟಿದವರಲ್ಲಿ ನಾಲ್ಕುಮಂದಿಗೆ ಇದೇ ಖಾಯಲೆ. ಇವರ ಸ್ಥಿತಿಯಲ್ಲಿ ಯಾರಿದ್ದರೂ ಹುಟ್ಟಿಸಿದ ಆ ವಿಧಿಯನ್ನು ಹಳಿಯುತ್ತಾ ಜೀವನವನ್ನು ನರಕವನ್ನಾಗಿಸಿಕೊಂಡು ವ್ಯಥೆ ಪಡುತ್ತಾ ಬದುಕನ್ನು ಸವೆಸುತ್ತಿದ್ದರೇನೋ..
ಆದರೆ ನಮ್ಮ ಗಣೇಶ್ ಪಂಜಿಮಾರು ಅವರ ಬದುಕೇ ಒಂದು ಅದ್ಬುತ ಸ್ಪೂರ್ಥಿಯ ಗಾಥೆ..! ಬದುಕಲ್ಲಿ ಸೋತೆ ಎಂದು ವ್ಯಥೆ ಪಟ್ಟುಕೊಳ್ಳುವವರಿಗೆ, ಆತ್ಮಹತ್ಯೆ ಯೋಚನೆ ಮಾಡುವವರಿಗೆ ಜೀವನೋತ್ಸಾಹ ತುಂಬುವ ಸತ್ಯ ಕಥೆ..
ಗಣೇಶ್ ಪಂಜಿಮಾರು ಉಡುಪಿ ಜಿಲ್ಲೆ ಶಿರ್ವ ಬಂಟಕಲ್ಲು ಸಮೀಪದವರು. ದಿವ್ಯಾಂಗರಾಗಿ ಹುಟ್ಟಿದರೂ ಉನ್ನತ ಶಿಕ್ಷಣ ಪಡೆಯಲೇ ಬೇಕು ಎಂಬ ಛಲ ಇವರೊಳಗೆ ಮೂಡಿತು. ಆ ಛಲದ ಫಲಶ್ರುತಿಯಾಗಿಯೇ ಬದುಕಿನ ನೂರು ಸವಾಲು ಸಮಸ್ಯೆಗಳನ್ನು ಮೆಟ್ಟಿನಿಂತು ಶಿರ್ವ ಕಾಲೇಜಿನಲ್ಲಿ ಬಿ.ಕಾಂ ಪದವಿ ಗಿಟ್ಟಿಸಿಕೊಂಡಿದ್ದು ಖಂಡಿತಾ ಸಣ್ಣ ಸಾಧನೆಯೇನಲ್ಲ. ಧಾನಿಯೊಬ್ಬರು ಕೊಡುಗೆಯಾಗಿ ನೀಡಿದ ವಿದ್ಯುತ್ ಚಾಲಿತ ತ್ರಿಚಕ್ರ ಸ್ಕೂಟರಿನಲ್ಲಿ ನಿತ್ಯ ಹತ್ತು ಕಿ,ಮೀ ಕ್ರಮಿಸಿ ಪದವಿ ಗಿಟ್ಟಿಸಿಕೊಂಡ ಛಲಗಾರ. ಓದಿನ ಜೊತೆ ಜೊತೆಯಲ್ಲೆ ಇವರು ಹವ್ಯಾಸವನ್ನಾಗಿ ಬೆಳೆಸಿಕೊಂಡ ಚಿತ್ರಬಿಡಿಸುವ ಕಲೆ ಇವರನ್ನಿಂದು ಪ್ರಸಿದ್ದ ಚಿತ್ರಕಲಾವಿದನನ್ನಾಗಿ ಕರಾವಳಿಯಾದ್ಯಂತ ಪರಿಚಯಿಸಿದೆ.
ಧರ್ಮಸ್ಥಳದ ಧರ್ಮದಿಕಾರಿ ವಿರೇಂದ್ರ ಹೆಗ್ಗಡೆ, ಮಾಣಿಲ ಶ್ರೀ, ಉಡುಪಿ ಡಿ.ಸಿ ಜಿ. ಜಗದೀಶ್, ಉದ್ಯಮಿ ಪ್ರಕಾಶ್ ಶೆಟ್ಟಿ ಸೇರಿದಂತೆ ಈ ಸಮಾಜದ ಗಣ್ಯರು, ಸಿನಿಮಾ ನಟ-ನಟಿಯರು ರಾಜಕೀಯ ನಾಯಕರು, ಪ್ರಕೃತಿ, ಪ್ರಾಣಿ ಪಕ್ಷಿ ಎಲ್ಲವೂ ಇವರ ಕಲಾಕುಂಚದಲ್ಲಿ ಚಿತ್ರಿತಗೊಂಡು ನೋಡುಗರ ಹೃನ್ಮನ ಸೂರೆಗೊಳ್ಳುತ್ತದೆ. ಈಗಾಗಲೇ ಇನ್ನೂರಕ್ಕೂ ಮಿಕ್ಕಿ ಅದ್ಬುತ ಎನಿಸುವ ಚಿತ್ರಗಳನ್ನು ರೂಪಿಸಿರುವ ಗಣೇಶ್ ಪಂಜಿಮಾರನ್ನು ಚಿತ್ರಕಲೆಯ ಕೋಲ್ಮಿಂಚು ಎಂದರೆ ಅದು ಅತಿಶಯದ ಮಾತಾಗದು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ, ಉದ್ಯಮಿ ಪ್ರಕಾಶ್ ಶೆಟ್ಟರು ಸೇರಿದಂತೆ ಸಮಾಜದ ಅನೇಕ ಗಣ್ಯರು ಇವರ ಪ್ರತಿಭೆಯನ್ನು ಕೊಂಡಾಡಿ ಹರಸಿದ್ದಾರೆ. ಅಸಂಖ್ಯ ಸನ್ಮಾನಗಳು ಇವರನ್ನರಸಿ ಬಂದಿವೆ.. ಹಲವಾರು ಪತ್ರಿಕೆ ಟಿವಿ ಮಾದ್ಯಮದಲ್ಲಿ ಇವರ ವಿಶೇಷ ಸಾಧನೆಯ ಗಾಥೆ ಬಿತ್ತರವಾಗಿದೆ. ಹಲವು ನಾಟ್ಯಗಳ ಸಂಗ್ರಹ, ಸ್ಟ್ಯಾಂಪ್ ಸಂಗ್ರಹವೂ ಇವರ ಹವ್ಯಾಸದ ಇನ್ನಿತರ ಆಸಕ್ತಿಗಳಾಗಿದೆ. ವಿಕಲಚೇತನಳಾಗಿ ಮಲಗಿದ್ದಲ್ಲೆ ಬದುಕು ಸವೆಸುವ ಇವರ ಸಹೋದರಿ ಕೂಡ ಕಾಗದಗಳ ಪಟ್ಟಿಯಿಂದ ಗೊಂಬೆ ತಯಾರಿಸುವಲ್ಲಿ ನಿಷ್ಣಾತರು.
ಗಣೇಶ್ ಪಂಜಿಮಾರು ತನನ್ನು ವಿಕಲಾಂಗಚೇತನನ್ನಾಗಿ ಮಾಡಿದ ಎಂದು ದೇವರನ್ನು ಎಂದೂ ಹಳಿಯುದಿಲ್ಲ. ನನ್ನ ಹಣೆಬರಹ ಎಂದು ವ್ಯಥಿಸುತ್ತಾ ಕೂರುವುದಿಲ್ಲ. ಆ ದೇವರು ಕೊಟ್ಟ ಆಯುಷ್ಯವನ್ನು ಸದ್ವಿನಿಯೋಗ ಮಾಡ್ತೇನೆ.. ಇತರರಿಗೆ ಮಾದರಿಯಾಗಿ ಬದುಕ್ತೇನೆ ಎಂದು ಛಲದಿಂದ ನುಡಿಯುತ್ತಾರೆ.. ಹಾಗೇ ನುಡಿಯುವಾಗ ಅವರ ಕಂಗಳಲ್ಲಿ ಜೀವನೋತ್ಸಾಹದ ಜಲ ಅವರಿಗರಿವಿಲ್ಲದಂತೆ ಜಿನುಗುತ್ತದೆ.
ನನಗೊಂದು ಉದ್ಯೋಗ ಕೊಡಿ: ಪ್ರಾಮಾಣಿಕವಾಗಿ ಕೆಲಸ ಮಾಡ್ತೇನೆ
ಗಣೇಶ್ ಪಂಜಿಮಾರು ಅವರಿಗೆ ಇದೀಗ ಮೂವತ್ತೊಂದರ ಹರೆಯ. ಅವರು ಪದವಿ ಗಿಟ್ಟಿಸಿಕೊಂಡಿದ್ದೇ ಬ್ಯಾಂಕ್ ಎಕ್ಸಾಮ್ ಅಲ್ಲಿ ಪಾಸಾಗಿ ಬ್ಯಾಂಕ್ ಉದ್ಯೋಗಿ ಆಗಬೇಕು ಎಂಬ ಆಸೆಯಿಂದ. ಕಠಿಣ ಪರಿಶ್ರಮದಿಂದ ಓದಿ ಬ್ಯಾಂಕ್ ಪರೀಕ್ಷೆ ಹಲವು ಬಾರಿ ಕಟ್ಟಿದರೂ ಇದುವರಗೆ ಪಾಸಾಗಿಲ್ಲ. ನನಗಿಂತಲೂ ತ್ರಾಸದಾಯಕವಾಗಿ ಬದುಕುತ್ತಿರುವ ತಂಗಿ, ಮಲ್ಲಿಗೆ ಹೂವುಗಳನ್ನು ಮಾರಿ ತಮ್ಮನ್ನು ಪೋಷಿಸುತ್ತಿರುವ ತಾಯಿ ಇವರಿಗೆ ನಾನು ಆಸರೆಯಾಗಬೇಕು ಅಂದರೆ ನನಗೊಂದು ಉದ್ಯೋಗ ಬೇಕು. ಪದವಿ ಪಡೆದಿರುವ ನನ್ನ ಅರ್ಹತೆಯನ್ನು ಪರಿಗಣಿಸಿ ನನಗೆ ಮಾಡಲು ಸಾದ್ಯವಿರುವ ಕೆಲಸವನ್ನು ಯಾರದರೂ ಕೊಟ್ಟರೆ ಪ್ರಾಮಾಣಿಕನಾಗಿ ಅವರು ಮೆಚ್ಚುವಂತೆ ಕೆಲಸ ಮಾಡುವೆ ಎನ್ನುವಾಗ ಗಣೇಶ್ ಬಾವುಕರಾಗುತ್ತಾರೆ.. ಯಾರದರೂ ಧಾನಿಗಳು ಸಂಘ ಸಂಸ್ಥೆಗಳು ಉದ್ಯೋಗ ಕೊಡಿಸಿಯಾರೇ ಎಂಬ ಆಸೆ ಅವರದ್ದು
ಗಣೇಶ್ ಪಂಜಿಮಾರ್ ಆಟ್ಸ್ ಎಂಬ ಯೂ ಟ್ಯೂಬ್ ಚಾನೆಲ್ ಅಲ್ಲಿ ಅವರ ಕಲಾ ವೈಖರಿಯನ್ನು ನೀವು ಗಮನಿಸಬಹುದು.
ಗಣೇಶರ ಎಂದೂ ಬತ್ತದ ಉತ್ಸಾಹಕ್ಕೆ, ಗೆರೆ-ಬರೆಗಳ ಚಿತ್ತಾಕರ್ಷದ ಚಿತ್ರಕಲೆಗೆ ಪರಿಶ್ರಮದ ಬದುಕಿಗೆ ತಪ್ಪದೆ ಒಂದು ಹ್ಯಾಟ್ಸಾಪ್ ಹೇಳಿ.. ಸಂಪರ್ಕ ಸಂಖ್ಯೆ- 9880053740
ಗಣೇಶ್ ಪಂಜಿಮಾರು ಎನೆನ್ನುತ್ತಾರೆ??
" ನನಗೆ ಈ ಸಮಾಜದ ಯಾರ ಕರುಣೆ ಬೇಡ..ಅವಕಾಶ ಬೇಕು.. ನಮ್ಮಲ್ಲಿರುವ ನ್ಯೂನತೆಯನ್ನು ಮೆಟ್ಟಿನಿಂತು ಆ ದೇವರು ಕೊಟ್ಟ ಬದುಕನ್ನು ಸಂತೋಷದಿಂದ ಕಳೆಯುವ. ನಾಲ್ಕು ಜನ ಮೆಚ್ಚುವಂತೆ ಆದರ್ಶರಾಗಿ ಬದುಕುವ. ಬದುಕಲ್ಲಿ ಸೋತೆ ಎಂದು ಆತ್ಮಹತ್ಯೆ ಯೋಚನೆ ಮಾಡುವವರು, ಕೆಲಸವಿಲ್ಲವೆಂದು ಮನೆಯಲ್ಲೆ ಕುಳಿತು ಕೊರಗುವವರು ನನ್ನನ್ನೊಮ್ಮೆ ನೋಡಿ.. ನಾನು ಸ್ಪೂರ್ತಿ ತುಂಬುವೆ"