ಮಂಗಳೂರು : ಕುಂಬಾರರ ಬೇಡಿಕೆಯನ್ನು ಸರಕಾರ ನಿರ್ಲಕ್ಷಿಸಿರುವುದು ತುಂಬಾ ಬೇಸರ ತಂದಿದೆ. ಒಂದು ರಾಜಕೀಯ ಪಕ್ಷವನ್ನು ಗೆಲ್ಲಿಸುವಲ್ಲಿ ಹಾಗೂ ಸೋಲಿಸುವುದರಲ್ಲಿ ಕುಲಾಲ-ಕುಂಬಾರರ ಮತಗಳು ನಿರ್ಣಾಯಕವೆನ್ನುವುದನ್ನು ರಾಜಕೀಯ ನಾಯಕರು ಮನಗಂಡಿಲ್ಲ ಎಂದು ಕರ್ನಾಟಕ ರಾಜ್ಯ ಕುಲಾಲ-ಕುಂಬಾರ ಯುವ ವೇದಿಕೆಯ ಮಂಗಳೂರು ವಿಭಾಗದ ಉಪಾಧ್ಯಕ್ಷ ಅನಿಲ್‌ದಾಸ್ ಹೇಳಿದ್ದಾರೆ.
ರಾಜ್ಯ ಸರಕಾರ ರಾಜ್ಯದಲ್ಲಿ ಇರುವ ಕುಂಬಾರರ ಶ್ರೇಯೋಭಿವೃದ್ಧಿಗೆ ಕುಂಭ ನಿಗಮವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಆಶ್ವಾಸನೆಗಳನ್ನು ನೀಡುತ್ತಾ ಬಂದಿರುತ್ತದೆ. ಅನೇಕ ಹೋರಾಟ ಹಕ್ಕೊತ್ತಾಯ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷದ ನಾಯಕರುಗಳು ಭರವಸೆಗಳನ್ನು ನೀಡುತ್ತಾ ಬಂದಿದ್ದು, ಇದು ರಾಜಕೀಯ ನಾಯಕರ ಕಾಲಹರಣ ಎಂಬುದು ಕುಂಬಾರರಿಗೆ ಈಗ ಮನದಟ್ಟಾಗಿದೆ. ಈ ಬಾರಿಯ ಬಜೆಟ್‌ನಲ್ಲಿಯೂ ಮುಖ್ಯಮಂತ್ರಿಗಳು ಕುಂಬಾರರ ಬೇಡಿಕೆಯನ್ನು ನಿರ್ಲಕ್ಷಿಸಿರುವುದು ತುಂಬಾ ಬೇಸರ ತಂದಿದೆ. ಕುಂಬಾರರ ಯುವಶಕ್ತಿ, ಮಹಿಳಾ ಶಕ್ತಿ ರಾಜ್ಯದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ, ಸಮುದಾಯದ ನಿರ್ಲಕ್ಷ್ಯ ಸಲ್ಲದು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.