ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಿರ್ವ : ತಮ್ಮ ಭಾಷೆ, ಆರೋಗ್ಯದ ಬಗ್ಗೆ ಕೊರಗ ಸಮುದಾಯ ಮಹತ್ವ ನೀಡಬೇಕಾಗಿದೆ - ಪಾಂಗಾಳ ಬಾಬು ಕೊರಗ

Posted On: 06-03-2023 08:32PM

ಶಿರ್ವ : ನೆಲಮೂಲದ ಸಂಸ್ಕೃತಿಯ ಪ್ರತಿನಿಧಿಗಳಾದ ಕೊರಗರು ಇಂದು ಹೊರಗಿನವರಾಗಿ ಬಿಟ್ಟಿರುವುದು ಬೇಸರದ ಸಂಗತಿ. ಇಂದು ಎಲ್ಲಾ ರೀತಿಯ ಹಕ್ಕುಗಳಿದ್ದರೂ ಕೊರಗ ಸಮುದಾಯ ಹಿಂಜರಿಯುತ್ತಿದೆ. ಶಿಕ್ಷಣವೊಂದೇ ಬದಲಾವಣೆಗೆ ಸಹಕಾರಿ. ತಮ್ಮ ಭಾಷೆ ಮತ್ತು ಆರೋಗ್ಯದ ಬಗೆಯೂ ಮಹತ್ವ ನೀಡಬೇಕಾಗಿದೆ ಎಂದು ಕೊರಗ ಸಮುದಾಯದ ಹಿರಿಯ ಸಂಘಟಕ, ಸಾಹಿತಿ ಪಾಂಗಾಳ ಬಾಬು ಕೊರಗ ಹೇಳಿದರು.

ಅವರು ಮಾಚ್೯ 5 ರಂದು ಮುಂಚಿಕಾಡು (ಪಾಂಬೂರು)ಕೊರಗರ ಬಲೆಪುವಿನಲ್ಲಿ ಬೆಳ್ಳೆ ಗ್ರಾಮ ಪಂಚಾಯತ್, ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕ ಮತ್ತು ಉಡುಪಿ ಜಿಲ್ಲಾ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕೊರ್ರೆನ ಕೊರಲ್ - ಕೊರಗರ ನೆಲಮೂಲ ಪರಂಪರೆ, ಭಾಷೆಯ ಹೊಳಹು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು. ಕೊರಗರ ಬಲೆಪುವಿನ ಗುರಿಕಾರ ವಸಂತ ಅವರು ಕೊಳಲು ವಾದನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊರಗರ ಬಲೆಪುವಿನ ಕಮಲ ಮತ್ತು ಸುಂದರ ಟಿ. ತೀಪೆ ಪಟ್ನದು ಜೇನು ನೀಡಿ ಜೇನ ಹಬ್ಬ ನೆರವೇರಿಸಿದರು.

ಮುಖ್ಯ ಅತಿಥಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು. ಈ ಸಂದರ್ಭ ಹಿರಿಯ ಸಂಘಟಕ, ಸಾಹಿತಿ ಪಾಂಗಾಳ ಬಾಬು ಕೊರಗ ಅವರನ್ನು ಸಮ್ಮಾನಿಸಲಾಯಿತು. ಬೆಳ್ಳೆ ಗ್ರಾ.ಪಂ. ಅಧ್ಯಕ್ಷರಾದ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಜಿಲ್ಲಾ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ದೇವದಾಸ ಹೆಬ್ಬಾರ್, ಬೆಳ್ಳೆ ಗ್ರಾ.ಪಂ. ಸದಸ್ಯೆ ಅಮಿತಾ ವೇದಿಕೆಯಲ್ಲಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಕಾಪು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊರಗ ಸಮುದಾಯದ ಪ್ರಮುಖರು, ಬೆಳ್ಳೆ ಗ್ರಾಮ ಪಂಚಾಯತ್ ಅಧಿಕಾರಿ ವರ್ಗ, ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಬೆಳ್ಳೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ನೀಲಾನಂದ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.

ತಟ್ಟಿ ಕುಡುಪು, ಬುಟ್ಟಿ, ಡೋಲು, ಕೊಳಲು, ಹುರಿ ಹಗ್ಗದ ಮಾಹಿತಿಯನ್ನು ನೀಡಲಾಯಿತು. ಸಭಾಕಾರ್ಯಕ್ರಮದ ಬಳಿಕ ಡೋಲು-ಕೊಳಲು ವಾದನ, ಕೊರಗರ ಹಾಡು, ಕೊರಗರ ನೃತ್ಯ, ಅರಕಜಬ್ಬೆಯ ಕಥಾವಾಚನ, ಕೊರಗರ ದೊರೆ ಉಭಾಷಿಕನ ಇತಿಹಾಸದ ಪ್ರಾತ್ಯಕ್ಷಿಕೆ ನೀಡಲಾಯಿತು.