ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉದ್ಭವ ಶ್ರೀಮಹಾಗಣಪತಿ ಮತ್ತು ಶ್ರೀಮಹಾಲಿಂಗೇಶ್ವರನ ದಿವ್ಯ ಸನ್ನಿದಿ ಶ್ರೀ ಕ್ಷೇತ್ರ, ಪೆರ್ಣಂಕಿಲ.

Posted On: 02-07-2020 08:28PM

ಐತಿಹಾಸಿಕ ಹಿನ್ನೆಲೆಯ ಚಾರಿತ್ರಿಕ ಕ್ಷೇತ್ರ: - ಹಿರಿಯಡ್ಕದ ಸಮೀಪವಿರುವ ಪೆರ್ಣಂಕಿಲದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು 2 ಸಾವಿರ ವರ್ಷಗಳ ಹಿನ್ನೆಲೆ, ಹಾಗೂ ಇಲ್ಲಿನ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಸುಮಾರು 1600 ವರ್ಷಗಳ ಭವ್ಯ ಇತಿಹಾಸ ಇದೆ. ಖರಾಸುರನ ಈಶ್ವರ: ಧಾಮಿ೯ಕ ಹಿನ್ನಲೆಯ ಪ್ರಕಾರ ಕಥೆ ಪೆರ್ಣಂಕಿಲ ಹಾಗೂ ಇದರ ಸುತ್ತಮುತ್ತಲಿನ ಪ್ರದೇಶವು ಹಿಂದೆ ಕಾರ್ಕಳದ ಜೈನ ಅರಸರ ಹಾಗೂ ಆಳುಪ ವಂಶದ ಆಡಳಿತಕ್ಕೆ ಒಳಪಟ್ಟಿತ್ತು. ಖರಾಸುರ ಎಂಬ ರಾಕ್ಷಸ ಶಾಪ ವಿಮೋಚನೆಗೆ ಆತ ತ್ರಿಕಾಲ ಶಿವನ ಪೂಜೆ ಮಾಡಬೇಕಾಗಿತ್ತು. ಊರಿಡೀ ಸಂಚಾರ ಮಾಡುತ್ತಿದ್ದ ಆತನಿಗೆ ತ್ರಿಕಾಲ ಶಿವನ ಪೂಜೆ ಮಾಡುವುದು ಕಷ್ಟಕರವಾಯಿತು. ಆದ್ದರಿಂದ ಆತ ತಾನು ಸಂಚರಿಸುವ ಸ್ಥಳಗಳಲ್ಲಿ ಒಂದೊಂದು ಶಿವಾಲಯವನ್ನೇ ಸ್ಥಾಪಿಸಿದನು! ಇಲ್ಲಿನ ಶಿವಾಲಯವನ್ನು ಖರಾಸುರನು ಪ್ರತಿಷ್ಠೆ ಮಾಡಿದ್ದು, ಕಟ್ಟಿಂಗೇರಿ, ಕಣಜಾರು, ಕೊಂಡಾಡಿ ಹಾಗೂ ಪರೀಕದಲ್ಲಿರುವ ಶಿವಾಲಯಗಳೂ ಈತನಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಈ ಎಲ್ಲಾ ದೇವಾಲಯಗಳು ಒಂದೇ ಶೈಲಿಯಲ್ಲಿ ನಿರ್ಮಾಣಗೊಂಡಿರುವುನ್ನು ನಾವು ಗಮನಿಸಬಹುದು. ಮುಂದೆ ಇಲ್ಲಿನ ಶಿವಾಲಯಕ್ಕೆ ಆಳುಪ ವಂಶದ ರಾಣಿಯು ಶಿವ ದೇವಾಲಯವನ್ನು ನಿರ್ಮಿಸಿದಳು ಎನ್ನುತ್ತದೆ ಇಲ್ಲಿರುವ ಶಾಸನ. ಶಿವಾಲಯದ ಪಕ್ಕ ಇರುವ ಈ ಶಾಸನವು ಸವೆದು ಹೋದ ಕಾರಣ ಅದನ್ನು ಪೂರ್ತಿಯಾಗಿ ಓದಲು ಸಾಧ್ಯವಾಗಿಲ್ಲ, ಓದಿದ್ದೇ ಆದ್ದಲ್ಲಿ ಶಿವಾಲಯದ ಬಗ್ಗೆ ಇನ್ನಷ್ಟು ಸ್ವಾರಸ್ಯಕರ ಹಾಗೂ ಐತಿಹಾಸಿಕ ಮಾಹಿತಿಗಳು ಒದಗುವ ಸಾಧ್ಯತೆ ಇದೆ. ದಲಿತನಿಗೆ ಒಲಿದ ದೇವರು : ಇಲ್ಲಿನ ಗಣಪತಿಯು ಭೂಗರ್ಭದಿಂದ ಉದ್ಬವವಾಗಿದೆ. ಹಿಂದೆ ದಲಿತನೊಬ್ಬನ ಮಗನಾದ ಪೆರ್ಣನು ಅಕಾಲದಲ್ಲಿ ಮರಣ ಹೊಂದುತ್ತಾನೆ. ಆತನ ತಂದೆಯು ಹಿಂದಿನ ಸಂಪ್ರದಾಯದಂತೆ ಪೆರ್ಣನನ್ನು ಗದ್ದೆಯಲ್ಲಿ ಹೂಳುತ್ತಾನೆ. ಕೆಲ ವರುಷಗಳ ನಂತರ ದಲಿತನು(ಪೆರ್ಣನ ತಂದೆ) ಆ ಗದ್ದೆಯನ್ನು ಉಳುವಾಗ ನೇಗಿಲಿನ ತುದಿಗೆ ಕಲ್ಲಿನಂತಹ ವಸ್ತು ತಾಗಿ ರಕ್ತಮಯವಾಗುತ್ತದೆ. ಭಯಗೊಂಡ ದಲಿತನು "ಪೆರ್ಣಾ ಈ ನನಲಾ ಉಲ್ಲನಾ?" (ಪೆರ್ಣಾ ನೀನಿನ್ನೂ ಬದುಕಿದ್ದೀಯಾ?) ಎಂದು ಉದ್ಗಾರ ತೆಗೆಯುತ್ತಾನೆ. ಸರಿಯಾಗಿ ಗಮನಿಸಿದಾಗ, ನೇಗಿಲು ತಾಗಿದ್ದು ಗಣಪತಿಯ ಕಲ್ಲಿನ ವಿಗ್ರಹಕ್ಕೆ. (ಓದುಗರ ಗಮನಕ್ಕೆ: ಹಲವಾರು ಕಡೆ ಗಣಪತಿಯ ವಿಗ್ರಹವು ದೊರೆತಿದ್ದು ಪೆರ್ಣನಿಗೆ ಎಂದೇ ನಂಬಲಾಗಿದೆ, ಆದರೆ ಆ ವಿಗ್ರಹವು ದೊರೆತಿದ್ದು ಪೆರ್ಣನಿಗೆ ಅಲ್ಲ, ಆತನ ತಂದೆಗೆ ಎಂದು ಇಲ್ಲಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ) ಆ ದಿನ ರಾತ್ರಿ ದಲಿತನ ಕನಸಿನಲ್ಲಿ ಗಣಪತಿ ವಿಗ್ರಹವನ್ನು ಶಿವಾಲಯದ ಪಕ್ಕ ಸ್ಥಾಪಿಸುವಂತೆ ತಿಳಿಸಿತು. ಅದರಂತೆ ದಲಿತನು ಗಣಪತಿಯ ವಿಗ್ರಹವನ್ನು ಶಿವಾಲಯದ ಪಕ್ಕ ಸ್ಥಾಪಿಸುತ್ತಾನೆ. ಅಂದಿನಿಂದ ಈ ಊರಿಗೆ ಪೆರ್ಣ+ಅಂಕಿಲ(ನೇಗಿಲು) ಎಂಬ ಹೆಸರು ಬಂದಿದೆ. ಜಾತಿ ಪದ್ದತಿಗಳು ಬಲಿಷ್ಠವಾಗಿದ್ದ ಆ ಕಾಲದಲ್ಲಿ ಒಬ್ಬ ದಲಿತನ(ಪೆರ್ಣನ) ಹೆಸರು ಊರಿಗೇ ಬರುವಂತೆ ಮಾಡಿ, ದಲಿತ ವಂಶವನ್ನು ಅಜರಾಮರ ಮಾಡಿದ್ದು ನಿಜಕ್ಕೂ ಈಗಣೇಶನ ಮಹಿಮೆ. ರಥೋತ್ಸವದಂದು ರಥವು ವಿಗ್ರಹ ದೊರೆತ ಸ್ಥಳದವರೆಗೆ ಸಾಗಿ ಹಿಂತಿರುಗಿ ಬರುತ್ತದೆ. ಈ ಕ್ಷೇತ್ರದ ವಿಶೇಷ: ಇಲ್ಲಿನ ಶಿವಾಲಯವನ್ನು ಪ್ರತಿಷ್ಠೆ ಮಾಡಿದ್ದು ಖರಾಸುರ ಎಂಬ ಒಬ್ಬ ರಾಕ್ಷಸ. ಈಗ ಮೇಲ್ವರ್ಗದಿಂದ ಪೂಜಿಸಲ್ಪಡುವ ಗಣಪತಿಯ ಉದ್ಭವ ಮೂರ್ತಿ ದೊರೆತಿದ್ದು ಒಬ್ಬ ದಲಿತನಿಗೆ. ಎರಡೂ ದೇವಸ್ಥಾನಗಳು ಅಕ್ಕಪಕ್ಕದಲ್ಲಿಯೇ ಇವೆ, ಆದರೆ ಈಶ್ವರ ಪೂರ್ವಕ್ಕೆ ಮುಖ ಮಾಡಿಕೊಂಡಿದ್ದರೆ, ಮಗನು ಅಪ್ಪನಿಗೆ ತದ್ವಿರುದ್ಧವಾಗಿ, ಪಶ್ಚಿಮಕ್ಕೆ ಮುಖ ಮಾಡಿಕೊಂಡಿದ್ದಾನೆ.. ದೇವರ ದರ್ಶನದ ಮಾಡುವಾಗ ನಮಗೆ ಗಣಪತಿಯ ವಿಗ್ರಹದ ತಲೆಯ ತುದಿಭಾಗವು ಮಾತ್ರ ಕಾಣುತ್ತದೆ. ಆದರೆ,,, ಈ ವಿಗ್ರಹದ ಕೆಳಗೆ ಆಳವಾದ ಬಾವಿಯಿದ್ದು ಅದರಲ್ಲಿ ಗಣಪತಿಯ ಪೂರ್ತಿ ವಿಗ್ರಹವೇ ಹುದುಗಿದೆ.. ಪೆರ್ಣಂಕಿಲ ಗಣಪತಿಯು ಅಪ್ಪ ಪ್ರಿಯ. ಅಕ್ಕಿ, ಎಳ್ಳು, ಬೆಲ್ಲ, ತೆಂಗಿನಕಾಯಿ, ತುಪ್ಪದಿಂದ ತಯಾರಿಸುವ ಅಪ್ಪ ಪ್ರಸಾದ ಸೇವೆಯು 'ಕೊಪ್ಪರಿ ಅಪ್ಪ' ಎಂದೇ ಪ್ರಸಿದ್ಧಿ. ಈ ದೇವಸ್ಥಾನವು ಉಡುಪಿ ಪರ್ಯಾಯ ಶ್ರೀಪೇಜಾವರ ಅಧೊಕ್ಷಜ ಮಠದ ಆಡಳಿತಕ್ಕೆ ಒಳಪಟ್ಟಿದೆ. ದೇವಸ್ಥಾನವು ಸಂಪೂರ್ಣ ಹಳ್ಳಿ ಪ್ರದೇಶದಲ್ಲಿದ್ದರೂ ಆಗಮಿಸುವ ಭಕ್ತರಿಗೆ ಉಡುಪಿ ಪೇಜಾವರ ಮಠದ ವತಿಯಿಂದ ನಿತ್ಯ ಅನ್ನಸಂತರ್ಪಣೆಯ ವ್ಯವಸ್ಥೆ ಇದೆ. ಗಣೇಶ ಚತುರ್ಥಿ ಹಾಗೂ ಪ್ರತಿ ವರ್ಷದ ಮೀನ ಮಾಸದ ಬಿದಿಗೆಯಂದು ನಡೆಯುವ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಪಾಲ್ಗೊಂಡು ಸೇವೆ ಸಲ್ಲಿಸುತ್ತಾರೆ. ಈ ಕ್ಷೇತ್ರ ಅತ್ಯಂತ ಅಪೂವ೯ ವಾದ ಕ್ಷೇತ್ರವಾಗಿದೆ ಇನ್ನೂ ಸ್ವಲ್ಪ ಅಭಿವೃಧಿಯಾಗಬೇಕಾಗಿದೆ. ಬನ್ನಿ ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ. ಬರಹ : ರಾಘವೇಂದ್ರ ಪ್ರಭು, ಕವಾ೯ಲು