ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ವಿಶ್ವ ಮಹಿಳಾ ದಿನಾಚರಣೆ - ಮಹಿಳೆಯರ ಗರ್ಭಕೋಶ ಸಂಬಂಧಿ ತೊಂದರೆಗಳ ಮಾಹಿತಿ, ಉಚಿತ ತಪಾಸಣೆ, ಚಿಕಿತ್ಸಾ ಶಿಬಿರ

Posted On: 09-03-2023 08:37PM

ಪಡುಬಿದ್ರಿ : ಇಂದಿನ ಆಹಾರ ಪದ್ಧತಿಗಳಿಂದ ಸಣ್ಣ ವಯಸ್ಸಿನಲ್ಲಿಯೇ ಮಕ್ಕಳ ದೇಹದಲ್ಲಿ ಬದಲಾವಣೆಗಳು ಕಾಣುತ್ತಿದೆ. ಜಿಮ್ ಮೊರೆಹೋಗಿ ದೇಹದಾಢ್ಯತೆಗಾಗಿ ಶ್ರಮ ವಹಿಸುವ ಯುವ ಜನಾಂಗ ಇಂದು ಒಂದೆಡೆಯಾದರೆ, ತಮ್ಮ ಜೀವನೋಪಾಯಕ್ಕಾಗಿ ಶ್ರಮದ ಮೂಲಕ ಆರೋಗ್ಯವಂತ ಜೀವನ ನಡೆಸುತ್ತಿದ್ದವರನ್ನು ಅಂದು ಕಾಣುತ್ತಿದ್ದೆವು ಎಂದು ಎಸ್.ಡಿ.ಎಂ.ಸಿ.ಎ ಉಡುಪಿಯ ಪ್ರಾಂಶುಪಾಲರು ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಮಮತಾ ನವೀನ್ ಹೇಳಿದರು.

ಅವರು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.), ಶ್ರೀ ನಾರಾಯಣಗುರು ಬಿಲ್ಲವ ಮಹಿಳಾ ಮಂಡಳಿ ಪಡುಬಿದ್ರಿ, ಯುವವಾಹಿನಿ (ರಿ.) ಪಡುಬಿದ್ರಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ ಪ್ರಸೂತಿ ತಂತ್ರ ಹಾಗೂ ಸ್ತ್ರೀರೋಗ ವಿಭಾಗ ಕುತ್ಪಾಡಿ, ಉಡುಪಿ ಇದರ ತಜ್ಞ ವೈದ್ಯರಿಂದ ಮಾಚ್೯ 9ರಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಸಭಾಂಗಣದಲ್ಲಿ ಮಹಿಳೆಯರ ಗರ್ಭಕೋಶ ಸಂಬಂಧಿ ತೊಂದರೆಗಳ ಬಗ್ಗೆ ಮಾಹಿತಿ, ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮಗಳನ್ನು ಮಾಡುವ ಹವ್ಯಾಸ ರೂಢಿಸಿಕೊಳ್ಳಿ ಎಂದರು. ಕಾರ್ಯಕ್ರಮವನ್ನು ನಿವೃತ್ತ ಪ್ರಸೂತಿ ತಜ್ಞೆ ನಳಿನಿ ಸದಾಶಿವ ಉದ್ಘಾಟಿಸಿದರು.

ಸನ್ಮಾನ : ಎಸ್.ಡಿ.ಎಂ.ಸಿ.ಎ ಉಡುಪಿಯ ಪ್ರಾಂಶುಪಾಲರು ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಮಮತಾ ನವೀನ್ ಮತ್ತು ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ‌ಮಂಗಳೂರು ಇವರಿಂದ ರಾಜ್ಯಮಟ್ಟದ ಕವಿ ಕಾವ್ಯ ಸನ್ಮಾನ ಪುರಸ್ಕೃತರಾದ ಸುಗಂಧಿ ಶ್ಯಾಮ್ ರನ್ನು ಸನ್ಮಾನಿಸಲಾಯಿತು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎರ್ಮಾಳು ಗ್ರಾಮ ಪಂಚಾಯತ್ ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ನಿರ್ದೇಶಕರು, ಪಡುಬಿದ್ರಿ ನಾರಾಯಣಗುರು ಬಿಲ್ಲವ ಮಹಿಳಾ ಮಂಡಳಿ ಅಧ್ಯಕ್ಷೆ ಸುಚರಿತಾ ಎಲ್ ಅಮೀನ್, ಕಾರ್ಯದರ್ಶಿ ರೋಹಿಣಿ ಆನಂದ್, ಯುವವಾಹಿನಿ ಪಡುಬಿದ್ರಿ ಘಟಕದ ಉಪಾಧ್ಯಕ್ಷರುಗಳಾದ ಶಶಿಕಲಾ ಯಶೋಧರ ಪೂಜಾರಿ ಮತ್ತು ಅಶ್ವಥ್ ಎಸ್.,ಯುವವಾಹಿನಿ ಪಡುಬಿದ್ರಿ ಘಟಕದ ಮಹಿಳಾ ಸಂಘಟನಾ ನಿರ್ದೇಶಕಿ ತುಳಸಿ ಕರುಣಾಕರ್, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ಯುವವಾಹಿನಿ ಪಡುಬಿದ್ರಿ ಘಟಕದ ಕಾರ್ಯದರ್ಶಿ ಡಾ| ಐಶ್ವರ್ಯ ಸಿ. ಅಂಚನ್ ನಿರೂಪಿಸಿದರು. ಘಟಕದ ಉಪಾಧ್ಯಕ್ಷೆ ಶಶಿಕಲಾ ಯಶೋಧರ ಪೂಜಾರಿ ವಂದಿಸಿದರು.