ಇಂದು ಮತ್ತು ನಾಳೆ : ಕಾಪುವಿನ ಮೂರು ಮಾರಿಗುಡಿಗಳಲ್ಲಿ ಮಾರಿಪೂಜೆಯ ಸಂಭ್ರಮ
Posted On:
21-03-2023 03:15PM
ಕಾಪು : ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾಪು ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದಲ್ಲಿ ಜರಗುವ ಕಾಲಾವಧಿ ಸುಗ್ಗಿ ಮಾರಿಪೂಜೆಯು ಈ ಬಾರಿ ಮಾಚ್೯ 21 ಮತ್ತು 22ರಂದು ನಡೆಯಲಿದೆ.
ಈ ನಿಮಿತ್ತ ಮಂಗಳವಾರ ಸಂಜೆ ಪ್ರಾರಂಭಗೊಂಡು ಬುಧವಾರ ಸಂಜೆಯವರೆಗೆ ಎರಡು ದಿನಗಳ ಕಾಲ ಜರಗುವ ಮಾರಿಪೂಜೆಯ ಸಂದರ್ಭದಲ್ಲಿ ವಿವಿಧೆಡೆಗಳಿಂದ ಲಕ್ಷಾಂತರ
ಭಕ್ತರು ಆಗಮಿಸುತ್ತಾರೆ.
ಕಾಲಾವಧಿ ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಮಂಗಳವಾರ ರಾತ್ರಿ ಶ್ರೀ ಹಳೇ ಮಾರಿಯಮ್ಮನ ಸನ್ನಿಧಿಗೆ ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಹೊಸ ಮಾರಿಗುಡಿ ಮತ್ತು ಶ್ರೀ ಮೂರನೇಮಾರಿಗುಡಿಯ ಮಾರಿಯಮ್ಮನ ಸನ್ನಿಧಿಗೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ಮಾರಿಯಮ್ಮ ದೇವಿಯ ಸ್ವರ್ಣಾಭರಣಗಳನ್ನು ತಂದು, ಗದ್ದುಗೆಯಲ್ಲಿ ಮಾರಿಯಮ್ಮ ದೇವಿಯ ಬಿಂಬವನ್ನು ಪ್ರತಿಷ್ಠಾಪಿಸಿ ಅಲಂಕರಿಸಿ ಮಾರಿಪೂಜೆ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಅಲಂಕಾರದ ಬಳಿಕ ರಾತ್ರಿ ದರ್ಶನ ಸೇವೆ ನಡೆದು, ಸಂಪ್ರದಾಯದಂತೆ ಭಕ್ತರಿಂದ ವಿವಿಧ ಹರಕೆಗಳು ಸಮರ್ಪಣೆಗೊಳ್ಳುತ್ತದೆ.
ಭಕ್ತರು ದೇವಿಯ ಗಣಗಳಿಗೆ ರಕ್ತಾಹಾರದ ಸೇವೆಯನ್ನು ಸಮರ್ಪಿಸುವ ಮೂಲಕ ತಮ್ಮ ನಂಬಿಕೆಯನ್ನು ಅನಾವರಣಗೊಳಿಸುತ್ತಾರೆ.
ಬುಧವಾರ ಸಂಜೆ ಮೂರೂ ಮಾರಿಗುಡಿಗಳಲ್ಲಿಯೂ ಮಾರಿಯಮ್ಮ ದೇವಿಯ ದರ್ಶನ ಸೇವೆ ನಡೆದು ದರ್ಶನಾವೇಶದೊಂದಿಗೆ ಮಾರಿಯಮ್ಮ ದೇವಿಯನ್ನು ಗದ್ದುಗೆಯಿಂದ ಕೆಳಗಿಳಿಸಲಾಗುತ್ತದೆ. ಗದ್ದುಗೆಯಿಂದ ಕೆಳಗಿಳಿಸಿದ ಬಿಂಬವನ್ನು ಮಲ್ಲಾರಿನ ನಿರ್ದಿಷ್ಟ ಪ್ರದೇಶಕ್ಕೆ ಕೊಂಡೊಯ್ದು ವಿಸರ್ಜಿಸುವ ಮೂಲಕ ಮಾರಿಪೂಜಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.