ಉಡುಪಿ : ಪೇಜಾವರ ಮಠದ ಆಡಳಿತಕ್ಕೊಳಪಟ್ಟಿರುವ, ಸುಮಾರು 10ನೇ ಶತಮಾನದಲ್ಲಿ ಆಳುಪ ವಂಶದ ರಾಣಿ ಬಲ್ಲಾ ಮಹಾದೇವಿ ನಿರ್ಮಿಸಿದ ಇಲ್ಲಿನ ಪೆರ್ಣಂಕಿಲ ಗ್ರಾಮದ ಮಹಾಲಿಂಗೇಶ್ವರ - ಮಹಾಗಣಪತಿ ದೇವಳದ ಸಮಗ್ರ ಜೀರ್ಣೋದ್ಧಾರ ಕಾರ್ಯಕ್ಕೆ ಗುರುವಾರ ಶಂಕುಸ್ಥಾಪನೆ ನಡೆಯಿತು.
ಊರಿನ ಭಕ್ತಾಭಿಮಾನಿಗಳ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಜೀರ್ಣೋದ್ಧಾರ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಹರಿದಾಸ ಭಟ್, ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್ ಪೆರ್ಣಂಕಿಲ, ಪೇಜಾವರ ಮಠದ ದಿವಾನರಾದ ಸುಬ್ರಹ್ಮಣ್ಯ ಭಟ್ ಸಗ್ರಿ, ದೇವಳದ ಸಾರ್ವಜನಿಕ ಸಂಪರ್ಕಾಧಿಕಾರಿ ಹರೀಶ ಸರಳಾಯ, ದೇವಸ್ಥಾನದ ತಂತ್ರಿ ಮಧುಸೂದನ ತಂತ್ರಿ, ವ್ಯವಸ್ಥಾಪಕರಾದ ಸುರೇಶ ತಂತ್ರಿ, ಸಮಿತಿಯ ಪದಾಧಿಕಾರಿಗಳಾದ ಸುವರ್ಧನ ನಾಯಕ್, ಸದಾನಂದ ಪ್ರಭು, ವಸಂತ ಶೆಟ್ಟಿ ಕುದಿ, ಉಮೇಶ್ ನಾಯಕ್, ಮಹೇಶ್ ಕುಲಕರ್ಣಿ, ಸಂದೀಪ್ ನಾಯಕ್ ಹೆಬ್ಬಾಗಿಲು ಮುಂತಾದವರು ಉಪಸ್ಥಿತರಿದ್ದರು.
ಸುಮಾರು 10 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿರುವ ಈ ಜೀರ್ಣೋದ್ದಾರ ಕಾರ್ಯವು ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ. ಒಂದೇ ಪ್ರಾಕರದೊಳಗೆ ಪೂರ್ವಾಭಿಮುಖವಾಗಿ ಮಹಾಲಿಂಗೇಶ್ವರ ಮತ್ತು ಪಶ್ಚಿಮಾಭಿಮುಖವಾಗಿ ಉದ್ಭವ ಮಹಾಗಣಪತಿ ದೇವಾಲಯಗಳಿರುವುದು ಇಲ್ಲಿನ ವಿಶೇಷತೆಯಾಗಿದೆ.