ಬಂಟಕಲ್ಲು : ಇಂಜಿನಿಯರಿಂಗ್ ಕಾಲೇಜಿನಲ್ಲಿ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
Posted On:
25-03-2023 06:36PM
ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಮಾರ್ಚ್ 24ರಂದು ಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯಿಂದ ಜರಗಿತು.
ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು, ಸೋಸಲೆ ಶ್ರೀ ವ್ಯಾಸರಾಜ ಮಠ, ಇವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಕೋವಿಡ್ ಕಾಲದಲ್ಲಿ ಮಾನವೀಯತೆಯ ಸೈರ್ಯ ಎದ್ದು ಕಾಣುತಿತ್ತು. ಇದು ನಮ್ಮ ಜನರಲ್ಲಿ ನಾಯಕತ್ವದ ಗುಣವನ್ನು ಮೂಡಿಸಿದೆ. ಅಲ್ಲದೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಆಶಾವಾದ ಬೆಳೆಸಿಕೊಳ್ಳಬೇಕು ಮತ್ತು ಯಾವುದೇ ಕಷ್ಟದ ಸಂದರ್ಭದಲ್ಲಿ ಭರವಸೆಯನ್ನು ಕಳೆದುಕೊಳ್ಳಬಾರದೆಂದು ಸಲಹೆ ನೀಡಿದರು.
ಉಡುಪಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇವರು ತಮ್ಮ ಆಶೀರ್ವಚನದಲ್ಲಿ ಶಿಸ್ತು ಎನ್ನುವುದು ಗುರಿ ಮತ್ತು ಸಾಧನೆಗಳ ನಡುವಿನ ಸೇತುವೆಯಾಗಿದೆ. ಇದು ಪ್ರತಿಯೊಬ್ಬರೊಳಗೆ ಅಡಗಿರುವ ಅಮೂಲ್ಯ ರತ್ನವನ್ನು ಹೊರತಂದು ಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲರೂ ಶಿಸ್ತಿನ ಜೀವನ ನಡೆಸಬೇಕೆಂದು ತಿಳಿಸಿದರು.
ಗೌರವ ಅತಿಥಿಯಾಗಿದ್ದ ಕರ್ನಾಟಕ ರಾಜ್ಯದ ಉಪ ಲೋಕಾಯುಕ್ತ, ನ್ಯಾಯಮೂರ್ತಿಗಳಾದ ಕೆ ಎನ್ ಫಣೀಂದ್ರ ಮಾತನಾಡಿ, ಇಂತಹ ಸಂಸ್ಥೆಯನ್ನು ಕಟ್ಟಿ ಜನ ಸೇವೆಗಾಗಿ ಮುಡಿಪಾಗಿಟ್ಟಿರುವುದಕ್ಕಾಗಿ ಸೋದೆ ಶ್ರೀಪಾದರ ಕುರಿತು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮೌಲ್ಯಾಧಾರಿತ ಶಿಕ್ಷಣ ಎಂದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಮೌಲ್ಯವನ್ನು ಬಿತ್ತುವುದು. ಶಿಕ್ಷಕರು ತಾಯಿ ಮತ್ತು ತಂದೆಯ ಪಾತ್ರವನ್ನು ಈಗ ನಿರ್ವಹಿಸಬೇಕಾಗಿದೆ ಮತ್ತು ಇಂದಿನ ಯುವಕರು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕೆಂದು ಹೇಳಿದರು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಕಾರ್ಯದರ್ಶಿಗಳಾದ ರತ್ನಕುಮಾರ್ ಅತಿಥಿ ಗಳನ್ನು ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ 2022-23ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಹಾಗೂ ಗೌತಮ ಫೌಂಡೇಶನ್‌ನಿಂದ ನೀಡಲ್ಪಟ್ಟ ವಿದ್ಯಾರ್ಥಿವೇತನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಅಂತಿಮ ವರ್ಷದ ಉತ್ತಮ ಸಾಧಕ ವಿದ್ಯಾರ್ಥಿಗಳಿಗೆ ಕೊಡುವ “ಶ್ರೀ ಮಧ್ವ ವಾದಿರಾಜ ಪ್ರಶಸ್ತಿ'ಯನ್ನು ಗಣಕಯಂತ್ರ ವಿಭಾಗದ ರಂಜನಿ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಶೇಷಗಿರಿ ವೈಕುಂಠ ಪೈ ಇವರಿಗೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ಉತ್ತಮ ವಿದ್ಯಾರ್ಥಿಗಳಿಗೆ ಹಯವದನ ಪ್ರಶಸ್ತಿಯನ್ನು ನೀಡಲಾಯಿತು. ಡಾಕ್ಟರೇಟ್ ಪದವಿ ಪಡೆದುಕೊಂಡ ಅಧ್ಯಾಪಕರನ್ನು ಗೌರವಿಸಲಾಯಿತು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಉಪಾಧ್ಯಕ್ಷರಾದ ಶ್ರೀನಿವಾಸ ತಂತ್ರಿ, ಆಡಳಿತ ಮಂಡಳಿ ಸದಸ್ಯರಾದ ಶ್ಯಾಮ ಸುಂದರ್, ಸುಂದರ ಮಡಕ್ಷಿರ, ಜಗದೀಶ್ ಆಚಾರ್ಯ, ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ಮತ್ತು ವಿದ್ಯಾರ್ಥಿ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಶ್ರೇಯ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಮಂಜುನಾಥ ಎಸ್ ಮತ್ತು ಸಂಧ್ಯಾ ಅತಿಥಿಗಳನ್ನು ಪರಿಚಯಿಸಿದರು. ಡೀನ್ ಡಾ. ಸುದರ್ಶನ್ ರಾವ್ ಮತ್ತು ಡಾ.ರವಿಪ್ರಭಾ ವಿದ್ಯಾರ್ಥಿ ವೇತನ ಪಡೆದವರ ವಿವರವನ್ನು ನೀಡಿದರು. ಶ್ರೇಯ ಉಡುಪ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಅಂಕಿತ ಭಟ್ ಮತ್ತು ಶ್ರೀವತ್ಸ ನಿರೂಪಿಸಿದರು. ಪ್ರಾಧ್ಯಾಪಕರಾದ ಸಚಿನ್ ಪ್ರಭು ವಂದಿಸಿದರು.