ಏಪ್ರಿಲ್ 29 ರಂದು ಅದಮಾರು ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶ ; ಮಾರ್ಚ್ 30 - ಕಾಲೇಜಿನಲ್ಲಿ ಪೂರ್ವಭಾವಿ ಸಭೆ
Posted On:
28-03-2023 09:32PM
ಕಾಪು : 1950ರಲ್ಲಿ ಅದಮಾರಿನ ಸುತ್ತಲಿನ ಎಲ್ಲಾ ಜನರಿಗೆ ಉನ್ನತ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಸದುದ್ದೇಶದಿಂದ ಅಂದಿನ ಅದಮಾರು ಮಠಾಧೀಶರಾಗಿದ್ದ ಶ್ರೀ ವಿಬುಧೇಶ ತೀರ್ಥ ಶ್ರೀಪಾದರು ಅದಮಾರಿನಲ್ಲಿ ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದರು. ನಂತರ ಈ ಶಾಲೆ 1972 ರಲ್ಲಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿಗೆ ಮೇಲ್ದರ್ಜೆ ಗೇರಿತು. ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಈ ಸಂಸ್ಥೆ ದೇಶವಿದೇಶಗಳಲ್ಲಿ ಲಕ್ಷಾಂತರ ಹಳೆ ವಿದ್ಯಾರ್ಥಿಗಳನ್ನು ಹೊಂದಿದೆ. ಶ್ರೀ ವಿಬುಧೇಶ ತೀರ್ಥ ಶ್ರೀಪಾದರು ಕಟ್ಟಿದ ಈ ಸಂಸ್ಥೆಯನ್ನು ಅವರ ಕರಕಮಲ ಸಂಜಾತರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಇಲ್ಲಿ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯದೊಂದಿಗೆ ಈ ಸಂಸ್ಥೆಯನ್ನು ಬಹಳಷ್ಟು ಎತ್ತರಕ್ಕೆ ಏರಿಸಿದರು. ಇಂದು 1700ಕ್ಕು ಅಧಿಕ ವಿದ್ಯಾರ್ಥಿಗಳು ಕೆಜಿಯಿಂದ ಪಿಯುಸಿಯ ತನಕ ವಿದ್ಯಾಭ್ಯಾಸವನ್ನು ಈ ಕ್ಯಾಂಪಸ್ ನಲ್ಲಿ ಪಡೆಯುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಬಂದ 220 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ವಾಸವಾಗಿದ್ದುಕೊಂಡು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಪ್ರಸ್ತುತ ಸಂಸ್ಥೆಯ ಅಧ್ಯಕ್ಷರಾಗಿರುವ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಈ ಸಂಸ್ಥೆಯನ್ನು ಒಂದು ಮಾದರಿ ಸಂಸ್ಥೆಯನ್ನಾಗಿ ಮಾಡುವ ನೆಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ.
ಬೇರೆ ಬೇರೆ ಊರಿನಲ್ಲಿ ಉದ್ಯೋಗದಲ್ಲಿರುವ ಈ ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ತಾವು ಸಂಸ್ಥೆಯ ಬಗೆಗೆ ಬಹಳಷ್ಟು ಪ್ರೀತಿಯನ್ನು ಹೊಂದಿರುತ್ತೀರಿ ಎಂಬುದು ನಮಗೆ ತಿಳಿದಿದೆ. ಬಹಳ ಕಾಲದ ನಂತರ ನಿಮ್ಮ ಆಗಿನ ಸಹಪಾಠಿಗಳ ಜೊತೆ ಅದಮಾರು ಕಾಲೇಜಿನಲ್ಲಿ ನಿಮ್ಮ ಶಾಲಾ ಜೀವನದ ರಸಗವಳ ಸನ್ನಿವೇಶಗಳನ್ನು ಮೆಲುಕು ಹಾಕುವ ಒಂದು ಅಪೂರ್ವ ಕ್ಷಣಕ್ಕೆ ನಾವು ಒಂದು ಒಳ್ಳೆಯ ಅವಕಾಶ ಕಲ್ಪಿಸುತ್ತಿದೆ. ಇದಕ್ಕಾಗಿ ಬರುವ 2023ರ ಏಪ್ರಿಲ್ 29, ಶನಿವಾರದಂದು ಸಾಯಂಕಾಲ 5ಗಂಟೆಗೆ ಸಂಸ್ಥೆಯಲ್ಲಿ ಒಂದು ಬೃಹತ್ ಹಳೆ ವಿದ್ಯಾರ್ಥಿಗಳ ಸಮಾವೇಶ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ನಿಟ್ಟಿನಲ್ಲಿ ಮಾಚ್೯ 30ರಂದು ಹಳೆವಿದ್ಯಾರ್ಥಿಗಳ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಹಳೆ ವಿದ್ಯಾರ್ಥಿಗಳ ಸಮಾವೇಶದಲ್ಲಿ ಖ್ಯಾತ ಶಿಕ್ಷಣ ತಜ್ಞರಿಂದ ಭಾಷಣ ಮತ್ತು ಅದಮಾರು ಶಿಕ್ಷಣ ಸಂಸ್ಥೆಯ ಹಿಂದಿನ ಹಾಗೂ ಇಂದಿನ ಸ್ಥಿತಿಗತಿಯ ಸಾಕ್ಷ್ಯ ಚಿತ್ರ, ಹೊಸ ಶಿಕ್ಷಣ ನೀತಿಗೆ ಅದಮಾರು ಶಿಕ್ಷಣ ಸಂಸ್ಥೆ ಸಿದ್ಧಗೊಂಡ ಬಗೆ, ಮತ್ತಿತರ ಕಾರ್ಯಕ್ರಮವಿದೆ. ಪರಮಪೂಜ್ಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾಗೂ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಆದಷ್ಟು ಹೆಚ್ಚು ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಸದಾಶಯವನ್ನು ಹೊಂದಲಾಗಿದೆ.
ಕಾರ್ಯಕ್ರಮಕ್ಕೆ ಎಲ್ಲಾ ಹಿಂದಿನ ಉಪನ್ಯಾಸಕರನ್ನು, ಶಿಕ್ಷಕರನ್ನು ಪ್ರಾಂಶುಪಾಲರನ್ನು ಆಹ್ವಾನಿಸಲಾಗಿದೆ. ಅಲ್ಲದೆ ಸಭಾ ಕಾರ್ಯಕ್ರಮದ ನಂತರ ಔತಣಕೂಟವನ್ನೂ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಪೇಕ್ಷಿಸುವವರು ತಮ್ಮ ಆಗಮನವನ್ನು (9964141361) ಶ್ರೀಕಾಂತ ರಾವ್ ಇರವರಲ್ಲಿ ಖಾತ್ರಿಪಡಿಸಿಕೊಳ್ಳಬೇಕೆಂದು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು,ಶಿಕ್ಷಕರು, ಶಿಕ್ಷಕೇತರ ಬಂಧುಗಳು, ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳು, ಅದಮಾರು ಪ್ರಕಟಣೆಯಲ್ಲಿ ತಿಳಿಸಿರುವರು.