ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಯುವಸೇನೆ ಮಡುಂಬು - 16ನೇ ವರ್ಷದ ವಾರ್ಷಿಕೋತ್ಸವ ಸಂಪನ್ನ

Posted On: 03-04-2023 08:25PM

ಕಾಪು : ಯುವಸೇನೆ ಮಡುಂಬು ಇದರ 16ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಎಪ್ರಿಲ್ 1 ರಂದು ಮಡುಂಬು ಬೆರ್ಮೋಟ್ಟು ದೇವಸ್ಥಾನದ ಬಳಿ ನಡೆದ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮವನ್ನು ವಿದ್ವಾನ್ ಕೆ.ಪಿ.ಶ್ರೀನಿವಾಸ ತಂತ್ರಿ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಹಿಂದೂ ಸಮಾಜದ ವ್ಯವಸ್ಥೆಯೊಳಗೆ ಯಾವುದಕ್ಕೂ ಧಕ್ಕೆ ಬರಬಾರದು. ಪರಶುರಾಮ ಸೃಷ್ಟಿಯಲ್ಲಿ ಹಲವಾರು ವಿವಿಧತೆಗಳಿವೆ. ಹಿಂದುತ್ವದ ಭದ್ರ ಬುನಾದಿಗೆ ನಾಂದಿ ಹಾಡಿದೆ ಯುವಸೇನೆ ಮಡುಂಬು. ನಮ್ಮ ಸಂಸ್ಕೃತಿ ನಮಗೆ ಬೇಕು ಅದರ ಬಲಿಷ್ಠತೆ ನಮಗೆ ತಿಳಿದಿರಬೇಕು. ಪ್ರತಿ ಮನೆಗೂ ಭಗವದ್ಗೀತೆ ನೀಡಬೇಕೆನ್ನುವ ಯುವಸೇನೆ ಮಡುಂಬುವಿನ ಸಾಫಲ್ಯತೆಗೆ ಯಶಸ್ವಿಯಾಗಲಿ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಮುಖಂಡೆ ಚೈತ್ರ ಕುಂದಾಪುರ ಮಾತನಾಡಿ ಊರಿನ ಸಂಘ ಸಂಸ್ಥೆಗಳಲ್ಲಿ ಊರಿಗಾಗಿ ದುಡಿಯುವ, ಒಂದಾಗುವ ಮನಸ್ಥಿತಿ ಇರುತ್ತದೆ. ಜೊತೆಗೆ ದೇಶ ಭಕ್ತಿ ಧರ್ಮ ಭಕ್ತಿಯಿರುತ್ತದೆ .ಸಾಂಸ್ಕೃತಿಕತೆಯ ಆಚೆಗೆ ನಿಂತು ಧರ್ಮದ ಬಗೆಗೆ ಚಿಂತಿಸುವ ಯುವಸೇನೆಯ ಕಾರ್ಯ ಶ್ಲಾಘನೀಯ. ಧಾರ್ಮಿಕತೆಗೆ ಒಲವಿರುವ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಜ್ಞಾನದ ಕೊರತೆಯಾಗುತ್ತಿದೆ. ಅವಶ್ಯಕತೆಯಿಲ್ಲದ ಆಚರಣೆಗಳ ಬಗ್ಗೆ ಹಿಂದೂ ಸಮಾಜ ಯೋಚಿಸಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನಿಲ್ ಸಾಲ್ಯಾನ್ ವಹಿಸಿದ್ದರು. ವಕೀಲರಾದ ಸಂಕಪ್ಪ ಅಮೀನ್, ಧರಣಿ ಸಂಸ್ಥೆ ಅಧ್ಯಕ್ಷರಾದ ಲೀಲಾಧರ ಶೆಟ್ಟಿ, ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಲ್ಯಾಲು, ಉದ್ಯಮಿ ಯೋಗೀಶ್ ವಿ ಶೆಟ್ಟಿ, ಪತ್ರಕರ್ತ ರಾಕೇಶ್ ಕುಂಜೂರು, ನವೀನ್ ಅಮೀನ್ ಶಂಕರಪುರ, ಸಂದೀಪ್ ಬಂಗೇರ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ತುಳು ನಾಟಕ ಜರಗಿತು. ಪದ್ಮಶ್ರೀ ಪ್ರಾರ್ಥಿಸಿದರು. ಯುವಸೇನೆ ಮಡುಂಬುವಿನ ಅಧ್ಯಕ್ಷರಾದ ಸುನಿಲ್ ಸಾಲ್ಯಾನ್ ಸ್ವಾಗತಿಸಿದರು. ಕಾರ್ತಿಕ್ ಶೆಟ್ಟಿ ವರದಿ ವಾಚಿಸಿದರು. ಡಾ.ಪ್ರಿಯ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ವಿಕ್ಕಿ ಪೂಜಾರಿ ಮಡುಂಬು ವಂದಿಸಿದರು.