ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ರಾಷ್ಟ್ರ ದೃಷ್ಟಿಯ ದೇವಾಲಯ ಉತ್ಸವ : ಎಲ್ಲೂರು ವಿಶ್ವೇಶ್ವರ ದೇವರಿಗೆ "ಭೌವನೋತ್ಸವ"

Posted On: 16-04-2023 09:04AM

ರಾಷ್ಟ್ರೀಯ ಏಕತೆ , ರಾಷ್ಟ್ರದ ಸಮೃದ್ಧಿ , ಪ್ರಜಾಶಾಂತಿ , ಜನಪದರ ನೆಮ್ಮದಿಯೆ ಮೊದಲಾದ ಲೋಕದೃಷ್ಟಿಯ ಆಶಯವಿರುವ "ದೇವಾಲಯಗಳ ವಾರ್ಷಿಕ ಮಹೋತ್ಸವ"ಗಳು ಸಕಲ ಪಾಪಗಳನ್ನು ಪರಿಹರಿಸುವಂತಹದ್ದು , ಅಮಂಗಲವನ್ನು ನಾಶಪಡಿಸುವಂತಹದ್ದು ,ಸೌಭಾಗ್ಯ - ಸಂತತಿ - ಸಂಪತ್ತು ಕೊಡುವಂತಹದ್ದು , ಧರ್ಮ - ಅರ್ಥ - ಕಾಮ - ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಈಡೇರಿಸುವಂತಹದ್ದು ಎಂಬುದು ಶಾಸ್ತ್ರ ಪ್ರಮಾಣ. ಈ ಸಂಕಲ್ಪದೊಂದಿಗೆ ನಡೆಸುವ ಉತ್ಸವದ ಅಂತ್ಯದಲ್ಲಿ ಮಹೋತ್ಸವದಿಂದ ಸಂತುಷ್ಟರಾದ ದೇವರು ರಾಜನಿಗೆ - ರಾಷ್ಟ್ರಕ್ಕೆ = "ರಾಜಾರಾಷ್ಟ್ರಕ್ಕೆ" ಹಾಗೂ ನಡೆಸಿದಂತಹಾ ಕರ್ತೃಗಳಿಗೆ, ನೋಡಿದಂತಹ ಮಹಾಜನರಿಗೆ ಬರುವಂತಹ ಸಕಲಾರಿಷ್ಟಗಳನ್ನು ಪರಿಹರಿಸಿ ಸದಾ ಭಾಗ್ಯ- ಭೋಗ - ನಿತ್ಯಸೌಮಂಗಲ್ಯೋತ್ಸವವನ್ನು ಅನುಗ್ರಹಿಸಬೇಕೆಂದು ಪ್ರಾರ್ಥಿಸಿಕೊಳ್ಳವುದು ಅಥವಾ ಧ್ಯಾನಿಸುವ ಸಂಪ್ರದಾಯವಿದೆ . ಇಂತಹ ಉತ್ಸವಗಳು ಅಂಕುರಾರೋಪಣ ಮೂಲಕ ನೆರವೇರಿದರೆ ಉತ್ತಮ , ಧ್ವಜಾರೋಹಣ ಪುರಸ್ಸರ ಸಂಪನ್ನಗೊಂಡರೆ ಮಧ್ಯಮ , ಭೇರಿತಾಡನ ಪೂರ್ವಕ ನಡೆದರೆ ಅಧಮ ಎಂದು ಉತ್ಸವಗಳನ್ನು ತಂತ್ರ - ಆಗಮ ಶಾಸ್ತ್ರಗಳು ವಿವರಿಸುತ್ತವೆ . ಒಂದು ದಿನದಲ್ಲಿ ಪೂರೈಸುವ ಉತ್ಸವವು ಶೈವೋತ್ಸವ , ಮೂರುದಿನಗಳ ಉತ್ಸವ ಗೌಣೋತ್ಸವ , ಐದು ದಿನಗಳ ಉತ್ಸವ ಭೌತಿಕೋತ್ಸವ, ಏಳು ದಿನಗಳ ಉತ್ಸವ ಭೌವನೋತ್ಸವ, ಒಂಬತ್ತು ದಿನಗಳ ಉತ್ಸವ ದೈವಿಕೋತ್ಸವ, ಹನ್ನೆರಡು ದಿನಗಳ ಉತ್ಸವ ಶ್ರೀಕರೋತ್ಸವ, ಇಪ್ಪತ್ತೊಂದು ದಿನಗಳ ಉತ್ಸವ ರೌದ್ರೋತ್ಸವ. ಇಂತಹ ಮಹೋತ್ಸವವನ್ನು ವರ್ಷದ ಯಾವ ತಿಂಗಳುಗಳಲ್ಲಿ ಮಾಡಬಹುದು ಅಥವಾ ಪ್ರಾರಂಭಿಸಬಹುದು ಎಂದರೆ : ಕಾರ್ತಿಕ ಮಾಸದಲ್ಲಿ , ಮಾರ್ಗಶಿರ ಮಾಸದಲ್ಲಿ ,ಮಾಘ - ಪಾಲ್ಗುಣ ಮಾಸಗಳಲ್ಲಿ , ಚೈತ್ರ - ವೈಶಾಖ ಮಧ್ಯದಲ್ಲಾಗಲಿ ನರವೇರಿಸ ಬಹುದೆಂಬುದು ಶಾಸ್ತ್ರ ಸೂಚನೆ . ಸಂಕ್ರಮಣದಲ್ಲಾಗಲಿ ,‌ಪೌರ್ಣಮಿ - ಅಮಾವಸ್ಯೆಯಲ್ಲಾಗಲಿ , ದೇವರ ಜನ್ಮನಕ್ಷತ್ರದಲ್ಲಾಗಲಿ ಮಹೋತ್ಸವ ಆರಂಭಿಸಬೇಕು ಎಂದು ನಿರ್ದೇಶಿಸುತ್ತದೆ ಶಾಸ್ತ್ರ . ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಯಲ್ಲಿ ಮೇಷ ಸಂಕ್ರಮಣದಂದು ಧ್ವಜಾರೋಹಣ ಪರಸ್ಸರ ಉತ್ಸವ ಆರಂಭವಾಗುತ್ತದೆ . ಈ ಸಂದರ್ಭವು ಚೈತ್ರ - ವೈಶಾಖ ಮಾಸಗಳ ನಡುವೆ ಒದಗಿಬರುತ್ತದೆ. ಎ.13 ರಂದು ಅಂಕುರಾರೋಪಣ,ಎಪ್ರಿಲ್ 14 ರಂದು ಧ್ಜಜಾರೋಹಣದೊಂದಿಗೆ ಉತ್ಸವ ಆರಂಭಗೊಂಡು ಎಪ್ರಿಲ್ 20 ರ ಪರ್ಯಂತ ಏಳು ದಿನಗಳ ಕಾಲ ನೆರವೇರುವುದು .ಏಳು ದಿನಗಳ ಉತ್ಸವವಾಗಿರುವುದರಿಂದ ಇದು "ಭೌವನೋತ್ಸವ".

ನಡೆದೇಗುಲದಲ್ಲಿ ದೇವರು : ಉತ್ಸವ ಎಂದರೆ ಒಂದಷ್ಟು ಅಲಂಕಾರ , ಧಾರ್ಮಿಕ ವಿಧಿ ವಿಧಾನಗಳು ,ತಂತ್ರಿಯವರ ನಿರ್ವಹಣೆಯ ಪೂಜೆ - ಬಲಿಗಳು , ವಿವಿಧ ವಾದ್ಯ - ವಾದನಗಳ ಸಡಗರದ ಬಲಿ , ಪಾಲಕಿ ಸುತ್ತು , ಕಟ್ಟೆಪೂಜೆ , ಸಿಡಿಮದ್ದು ಸಿಡಿಸುವುದು ಹಾಗೂ ಊರಿಗೆ ಊರೆ ಸಂಭ್ರಮಿಸುವ ಸಂದರ್ಭ . ಮಹಾಕ್ರೀಡೆಗಳು ನಡೆದು ಅದು ಮಹೋತ್ಸವವಾಗುತ್ತದೆ . ಈ ವಿಜೃಂಭಣೆಯ ಆಚರಣೆಗೆ ಮಹತ್ತು ಪ್ರಾಪ್ತಿಯಾಗುವುದು ರಥದಿಂದ . ರಥಾರೋಹಣ - ರಥೋತ್ಸವ - ರಥ ಎಳೆಯುವುದು ಮುಂತಾದ ಸಮಷ್ಟಿಗೆ ಪಾಲ್ಗೋಳ್ಳವಿಕೆಯ ಅವಕಾಶದಿಂದ ಇದನ್ನು "ಶ್ರೀಮನ್ಮಮಹಾರಥೋತ್ಸವ" ಎಂದಿರಬೇಕು. ರಥೋತ್ಸವ : ಸರ್ವಾಲಂಕೃತ ರಥವು ಸಾಗಿಬರುವುದನ್ನು ಕಂಡಾಗ ನಮಗನ್ನಿಸುವುದು ದೇವಾಲಯವೊಂದು ನಡೆದು ಬರುತ್ತಿರುವಂತೆ . ಆದುದರಿಂದ ರಥಗಳನ್ನು " ನಡೆದೇಗುಲ"ಗಳೆಂದು ಕರೆದಿರಬೇಕು . ಜನಪದರು ಸೇರಿ ಕಟ್ಟಿದ ರಥದಲ್ಲಿ ದೇವರ ರಥಾರೋಹಣದ ಪೂರ್ವಭಾವಿಯಾಗಿ ರಥದ ಚಕ್ರದಿಂದ ಆರಂಭಿಸಿ ಶಿಖರ ಪರ್ಯಂತ ದೇವಾನುದೇವತೆಗಳ ಸನ್ನಿಧಾನವನ್ನು‌ ಆವಾಹಿಸಲಾಗುವುದು , ಇಂತಹ ದೇವಲೋಕವೇ ಆಗುವ ಅಲಂಕೃತ ರಥಕ್ಕೆ ದೇವರ ಆರೋಹಣ , ರಥೋತ್ಸವ ಇವೆಲ್ಲ ಆಗಮ ಶಾಸ್ತ್ರದ ಕಲ್ಪನೆ - ಅನುಸಂಧಾನ. ದೇವರ ರಥಾರೋಹಣದ ಬಳಿಕ ಪೂಜೆ . ರಥ ಎಳೆಯುವ ಮೊದಲು ಸ್ಥಳವಂದಿಗರು , ಅಜಕಾಯಿ ಒಡೆಯುವ ಪಾರಂಪರಿಕ ಕ್ರಮವು ಎಲ್ಲೂರಿನಲ್ಲಿದೆ . ಇಂದಿಗೂ ನಡೆಯುತ್ತದೆ . ಇದಕ್ಕೆ ಪ್ರಾಶಸ್ತ್ಯವಿದೆ . ಇದೊಂದು ರಥೋತ್ಸವ ಎಂಬ ಆಚರಣೆಯ ಪದ್ಧತಿಯಾಗಿ ನೆರವೇರುತ್ತದೆ . ಇಂತಹ ಭವ್ಯ - ದಿವ್ಯ ರಥದಲ್ಲಿ ಸನ್ನಿಹಿತರಾಗುವ ದೇವರ ದರ್ಶನ ಮಾತ್ರದಿಂದ ಪುನರ್ಜನ್ಮವಿಲ್ಲ ಎಂಬ ಮಾತು , ಹಾಗೂ ಅಶ್ವಮೇಧ ಫಲಪ್ರಾಪ್ತಿ ಎಂಬ ಹೇಳಿಕೆಗಳು ರಥೋತ್ಸವಕ್ಕೆ ಪ್ರಾಧಾನ್ಯ ಕೊಡುತ್ತವೆ , ಬಹುಸಂಖ್ಯೆಯ ಮಂದಿ ಭಾಗವಹಿಸುತ್ತಿರುವ ಸಾರ್ವತ್ರಿಕ ವ್ಯಾಪ್ತಿಯನ್ನು ಸಮರ್ಥಿಸುತ್ತದೆ . ಗರ್ಭಗುಡಿಯಲ್ಲಿರುವ ದೇವರು ಅಂಗಣಕ್ಕೆ ಬರುವ ಪದ್ಧತಿ ಸಾಮಾನ್ಯ .ಆದರೆ ಉತ್ಸವ ಕಾಲದಲ್ಲಿ ದೇವರು ಊರಿನ ಎಲ್ಲೆಡೆ ಕಟ್ಟೆಪೂಜೆಗೆ ಹೋಗುವುದು , ರಥದಲ್ಲಿ ಸಂಚರಿಸುವುದು , ಅವಭೃತ , ಸೂಟೆದಾರ ಮುಂತಾದ ಉತ್ಸವ ವಿಧಿಗಳು ಸೂಕ್ಷ್ಮ ದಿಂದ ಸ್ಥೂಲಕ್ಕೆ ತೆರೆದುಕೊಳ್ಳುವ ದೇವಾಲಯ ಪರಿಕಲ್ಪನೆಯನ್ನು ಮತ್ತೆ ದೃಢಗೊಳಿಸುತ್ತದೆ . ಈ ಎಲ್ಲಾ ಸಮಾಜಮುಖಿ ಚಿಂತನೆ ಇರುವ ಕಾರಣಕ್ಕೆ ದೇವಾಲಯ ಉತ್ಸವ ಸರ್ವರ - ಸಮಾಜದ - ಭಕ್ತ ಸಂದಣಿಯ ಉತ್ಸಾಹಕ್ಕೆ ಕಾರಣವಾಗುತ್ತದೆ .ಇದು ಖಂಡಿತಾ ಸಂಕುಚಿತವಲ್ಲ ,ವೈಚಾರಿಕ ವೈಶಾಲ್ಯತೆ ಇರುವಂತಹದ್ದು ಎಂದನಿಸುವುದಿಲ್ಲವೆ . ಶಯನೋತ್ಸವ : ಇದು ಕಾಲಕ್ಕೆ ಸರಿಯಾದ ಮಳೆ - ಬೆಳೆ - ಸಮೃದ್ಧಿ ಆಶಯದ ಉತ್ಸವಾಂಗ . ರಥೋತ್ಸವದ ಬಳಿಕ ಅಂದು ರಾತ್ರಿ ದೇವರ ಗರ್ಭಗುಡಿಯಲ್ಲಿ ಈ ಶಯನೋತ್ಸವ ನಡೆಯುತ್ತದೆ . ನಿದ್ರಾಕಲಶವಿರಿಸಿ ,ಪಾರ್ವತಿ ಪರಮೇಶ್ವರರನ್ನು ಸುಖನಿದ್ದೆಗಾಗಿ ಪ್ರಾರ್ಥಿಸಿ ಗರ್ಭಗುಡಿಯ ದ್ವಾರವನ್ನು ಬಂಧಿಸಬೇಕು. ಮರುದಿನ ಸುಪ್ರಭಾತದಲ್ಲಿ ಕವಾಟೋದ್ಘಾಟನೆ.ಮಧ್ಯಾಹ್ನ ಸಂಭ್ರಮದ ಉತ್ಸವ. ಸಂಜೆ ಓಕುಳಿ - ಮಾಣಿಯೂರು ಮಠದಲ್ಲಿ ಅವಭೃತ. ಹಿಂದಿರುಗುವಾಗ ತೂಟೆದಾರ.ಅವಭೃತ - ಆರಟ. 'ಆರಟ'ವನ್ನು "ಜಳಕ"ವೆಂದೂ ಹೇಳುತ್ತಾರೆ . ದೇವಳಕ್ಕೆ ಹಿಂದಿರುಗಿದ ಮೇಲೆ ಮೂಲಸ್ಥಾನ ವಿಶ್ವೇಶ್ವರ ದೇವರಿಗೆ "ಗಂಧಪೂಜೆ". ಉತ್ಸವದಲ್ಲಿ ಸಂಭವಿಸಿರಬಹುದಾದ ನ್ಯೂನಾತಿರಿಕ್ತ ದೋಷ ಪರಿಹಾರ ಹಾಗೂ ಸಕಾಲದ ಮಳೆ - ಬೆಳೆ - ಸರ್ವಸಮೃದ್ಧಿಯನ್ನು ಯಾಚಿಸಿ ಈ ಪೂಜೆ ಮೂಲಲಿಂಗಕ್ಕೆ ತೇದ ಗಂಧವನ್ನು ಲೇಪಿಸಿ ಸೀಮೆಯ ಪ್ರಾರ್ಥನೆಯೊಂದಿಗೆ ಸಂಪನ್ನಗೊಳ್ಳುವುದು. ಮುಂದೆ ಧ್ವಜಾವರೋಹಣ , ಮಹಾಮಂತ್ರಾಕ್ಷತೆ. ದೀಪಾರಾಧನೆಯಂತೆ , ದೀಪೋತ್ಸವದಂತೆ , ದೀವಟಿಗೆಗಳಂತೆ , ಹಿಲಾಲುಗಳ ವೈಭವದಂತೆ , ಪಚ್ವೆಡಿಯ (ಬಟ್ಟೆಯನ್ನು ಎಣ್ಣೆಯಲ್ಲಿ ಅದ್ದಿ ಹಿಲಾಲಿನ ತುದಿಗೆ ಕಟ್ಟಿ ದೇವರ ಮುಂಭಾಗ ಉರಿಸುವುದು) ಸೇವೆಯಂತೆ , ಸಿಡಿಮದ್ದು ಸಿಡಿಸುವ ಗದ್ದಲದಂತೆ 'ತೂಟೆದಾರ' ನಡೆಯುತ್ತದೆ .

ಸುಮಾರು 900 - 1000 ವರ್ಷ ಪುರಾತನವಾದ ಎಲ್ಲೂರಿನ ವಿಶ್ವೇಶ್ವರ ದೇವರು "ಕುಂದ ಅರಸರ" ತಪಸ್ಸಿಗೆ ಒಲಿದು ಕಾಶಿಯಿಂದ ಬಂದರೆಂಬುದು ಕ್ಷೇತ್ರ ಸಂಬಂಧಿಯಾದ ಪುರಾಣ ಕಥೆ.ಮೂಲಸ್ಥಾನ ವಿಶ್ವೇಶ್ವರ ದೇವರಿಗೆ ಅನ್ನಪೂರ್ಣೇಶ್ವರೀ ಹಾಗೂ ಗಣಪತಿ ಉಪಸ್ಥಾನ ಸನ್ನಿಧಿಗಳು.ಉಳಿದಂತೆ ಮೂಲ ಸ್ಥಾನದಲ್ಲಿರುವ ಬ್ರಹ್ಮ,ನಾಗ,ಚಾವುಂಡಿ, ಗುಳಿಗ ಸನ್ನಿಧಾನಗಳು ಮತ್ತು ವೀರಭದ್ರ ,ನಂದಿಕೇಶ್ವರ ಹಾಗೂ ಆಂಜನೇಯ ಸಂಕಲ್ಪಗಳು ಪರಿವಾರ ಶಕ್ತಿಗಳು ಕ್ಷೇತ್ರದಲ್ಲಿ ಸನ್ನಿಹಿತವಾಗಿವೆ.ಪುರಾತನ ಸಂಪ್ರದಾಯ,ಆಚರಣೆಯ ಪದ್ಧತಿಗಳನ್ನು ಉಳಿಸಿಕೊಂಡು ಬಂದಿರುವ ಜಿಲ್ಲೆಯ ಕೆಲವೇ ದೇವಳಗಳಲ್ಲಿ‌ ಎಲ್ಲೂರಿನ ಮಹತೋಭಾರ ಶ್ರೀವಿಶ್ವೇಶ್ವರ ದೇವಸ್ಥಾನ‌ ಒಂದು. ಇದೊಂದು ಮಾಗಣೆಗಳ ಕೂಡುಕಟ್ಟು ಹಾಗೂ ನೂರ ಐದು ಸ್ಥಳವಂದಿಗರಿರುವ ಸೀಮೆಯ ದೇವಳ. ಭಾರತೀಯ ದೇವಾಲಯಗಳಿಗೆ ಜಾನಪದ ಮೂಲವಿದೆ ಎಂಬ ವಿದ್ವಾಂಸರ - ಸಂಶೋಧಕರ ಅಭಿಪ್ರಾಯಗಳು ದೇವಳಗಳಲ್ಲಿ ನೆರವೇರುವ ವಾರ್ಷಿಕ ಉತ್ಸವ ವಿಧಾನಗಳಿಂದ , ಆ ವೇಳೆಯ ಸಮಷ್ಟಿಯ ಸಹಭಾಗಿತ್ವದ ಶೈಲಿಯಿಂದ ದೃಢಗೊಳ್ಳುತ್ತದೆ . ಲೇಖನ : ಕೆ.ಎಲ್.ಕುಂಡಂತಾಯ { "ಮಹತೋಭಾರ ಎಲ್ಲೂರು ವಿಶ್ವನಾಥ" - 'ಕ್ಷೇತ್ರ ಪರಿಚಯ' ಪುಸ್ತಕದಿಂದ.}

ಕಾರ್ಯಕ್ರಮದ ವಿವರ : 14- 04- 2023.......ಧ್ವಜಾರೋಹಣ ‌‌‌‌‌‌‌ 18 - 04 - 2023 ....ಮೃತ್ಯುಂಜಯ ಯಾಗ 19 - 04 - 2023... ಶ್ರೀ ಮನ್ಮಹಾರಥೋತ್ಸವ 20 - 4 -2023.. ಕವಾಟೋದ್ಘಾಟನೆ, ಅವಭೃತ,ಗಂಧಪೂಜೆ, ಧ್ವಜಾವರೋಹಣ, ಮಹಾಮಂತ್ರಾಕ್ಷತೆ.