ಇನ್ನಂಜೆ : ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಕುಮಾರಿ ಅನುಶ್ರೀ ಮತ್ತು ಸಾಧಕರಿಗೆ ಸನ್ಮಾನ
Posted On:
25-04-2023 09:27AM
ಇನ್ನಂಜೆ : ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 593 ಅಂಕಗಳನ್ನು ಪಡೆದು, ರಾಜ್ಯದಲ್ಲಿ 5ನೇ ಸ್ಥಾನಗಳಿಸಿದ ಎಸ್.ವಿ.ಎಚ್. ಪದವಿಪೂರ್ವ ಕಾಲೇಜು ಇನ್ನಂಜೆ ಇಲ್ಲಿನ ವಿದ್ಯಾರ್ಥಿನಿ ಕುಮಾರಿ ಅನುಶ್ರೀ ಇವರನ್ನು ಸಂಸ್ಥೆಯ ಪೋಷಕರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸನ್ಮಾನಿಸಿದರು.
ಈ ಸಂದರ್ಭ ಮಾತನಾಡಿದ ಅವರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪಡೆದ ಶಿಕ್ಷಣ ಮತ್ತು ಮೌಲ್ಯಗಳನ್ನು ಜೀವನ ಪರ್ಯಂತ ಅನುಸರಿಸಿ ಶ್ರೇಷ್ಠ ಸಾಧಕಳಾಗಬೇಕು ಎಂದು ಹಾರೈಸಿದರು.
ಕಟಪಾಡಿ ಚೊಕ್ಕಾಡಿ ಸಮೀಪದ ಕೃಷ್ಣ ಮತ್ತು ಗೀತಾ ದಂಪತಿಗಳ ಪುತ್ರಿಯಾದ ಅನುಶ್ರೀಯವರು ತನ್ನ ನಿರೀಕ್ಷೆಗೂ ಮೀರಿದ ತರಬೇತಿಯನ್ನು ನೀಡಿದ ಶಿಕ್ಷಕ ವರ್ಗದ ನಂಬಿಕೆಯನ್ನು ಸಾಕಾರಗೊಳಿಸುವ ನಂಬಿಕೆಯನ್ನು ನೀಡಿದರು.
ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ನಿಶಾನ್ ಕೋಟ್ಯಾನ್, ತೃತೀಯ ಸ್ಥಾನಗಳಿಸಿದ ಕುಮಾರಿ ಖುಷಿ, ವಿಜ್ಞಾನ ವಿಭಾಗದಲ್ಲಿ ಸಂಸ್ಥೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಕುಮಾರಿ ಸಾಕ್ಷಿ ಕುಲಾಲ್, ಕುಮಾರಿ ಯತಿಕ ಅಮೀನ್ ಹಾಗೂ ದ್ವಿತೀಯ ಸ್ಥಾನವನ್ನು ಪಡೆದ ಕುಮಾರಿ ಶ್ರೀಲೇಖಾ ಇವರೆಲ್ಲರನ್ನೂ ಶ್ರೀಗಳು ಸನ್ಮಾಸಿ ಶುಭ ಹಾರೈಸಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್ ಮಾತನಾಡಿ ರಾಜ್ಯದಲ್ಲಿ 5ನೇ ಸ್ಥಾನಗಳಿಸಿದ ಕುಮಾರಿ ಅನುಶ್ರೀಯ ಸಾಧನೆಗೆ ಪೂರಕವಾಗಿ ಶ್ರಮಿಸಿದ ನಮ್ಮ ಎಸ್.ವಿ.ಎಚ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ತಂಡ ಮತ್ತು ವಿದ್ಯಾರ್ಥಿನಿಯ ಪೋಷಕರನ್ನು ವಿಶೇಷವಾಗಿ ಅಭಿನಂದಿಸಿದರು. 47 ವಿಶಿಷ್ಟ ಶ್ರೇಣಿ ಹಾಗೂ 66 ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಸಾಧನೆಯೂ ನಮ್ಮ ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಕನ್ನಡಿಯಂತಿದೆ ಎಂದು ಎಲ್ಲಾ ಸಾಧಕರನ್ನು ಅಭಿನಂದಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪುಂಡರಿಕಾಕ್ಷ ಕೊಡಂಚ, ಉಪನ್ಯಾಸಕರಾದ ಪ್ರಶಾಂತ್ ಮತ್ತು ವಿದ್ಯಾರ್ಥಿಗಳ ಪೋಷಕರು ಈ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.