ಕಾಪು : ಈ ಬಾರಿಯು ಬಿಜೆಪಿ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ - ಕೋಟ ಶ್ರೀನಿವಾಸ ಪೂಜಾರಿ
Posted On:
25-04-2023 07:51PM
ಕಾಪು : ಮಹಾಪ್ರಚಾರ ಅಭಿಯಾನದ ಅಂಗವಾಗಿ ಕಾಪು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಲಿದೆ. ಶಾಸಕ ಲಾಲಾಜಿ ಆರ್ ಮೆಂಡನ್ ರ ಅಭಿವೃದ್ಧಿ ಕಾರ್ಯ, ನಮ್ಮ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ರವರ ಸಮಾಜಸೇವೆ ನಮ್ಮ ಪಕ್ಷಕ್ಕೆ ಶಕ್ತಿ ನೀಡಿದೆ. ಜಾತಿ ಧರ್ಮ ನೋಡದೆ ಅಭಿವೃದ್ಧಿ ಮಾಡುವ, ಬಡವರ ಪರವಾಗಿ ಕೆಲಸ ಮಾಡುವ ಸುರೇಶ್ ಶೆಟ್ಟಿ ಗುರ್ಮೆಯವರು ಈ ಬಾರಿ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಮಹಾಪ್ರಚಾರ ಅಭಿಯಾನದ ಅಂಗವಾಗಿ ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಲಾಲಾಜಿ ಮೆಂಡನ್ ಶಾಸಕರಾಗಿದ್ದ ಸಂದರ್ಭ ಹೆಜಮಾಡಿ ಬಂದರಿನ ಯೋಜನೆಗೆ ಮುಕ್ತಿ ನೀಡಿ ಇಂದು ಕಾಮಗಾರಿ ನಡೆಯುತ್ತಿದೆ. 23 ಸಾವಿರ ಮಹಿಳಾ ಮೀನುಗಾರರಿಗೆ ಸಾಲ ಮನ್ನಾ ಮಾಡಿದ ಕೀರ್ತಿ ನಮ್ಮ ಪಕ್ಷಕ್ಕಿದೆ. ನಾರಾಯಣ ಗುರು ನಿಗಮ ಸ್ಥಾಪನೆ ಮಾಡಿ, ನಾರಾಯಣ ಗುರುಗಳ ಹೆಸರಿನಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ, ಕೋಟಿ ಚೆನ್ನಯರ ಹೆಸರಿನಲ್ಲಿ ಸೇನಾ ಪೂರ್ವ ತರಬೇತಿ ಸಂಸ್ಥೆ, ಎಲ್ಲಾ ವರ್ಗದ ಸಣ್ಣ ಸಣ್ಣ ಜಾತಿಯವರಿಗೆ ನಿಗಮ ಮಂಡಳಿ ಮಾಡುವ ವ್ಯವಸ್ಥೆ ಮಾಡಿದ್ದೇವೆ.
ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ದಿಸೆಯಲ್ಲಿ ಒಳ ಮೀಸಲಾತಿಯ ಮೂಲಕ ಅವಕಾಶ ನೀಡಲಾಗಿದೆ. ಭತ್ತ ಖರೀದಿಯ ಸಮಯದಲ್ಲಿ ಭತ್ತ ಮಾರಾಟವಾಗಿರುವ ಕಾರಣದಿಂದಾಗಿ ಕುಚ್ಚಲಕ್ಕಿ ಪೂರೈಕೆ ತಡವಾಗಿದೆ. ಮುಂದಿನ ದಿನಗಳಲ್ಲಿ ಈ ಬೇಡಿಕೆ ಖಂಡಿತವಾಗಿಯೂ ಈಡೇರಿಸುತ್ತೇವೆ ಎಂದರು.
ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ಪ್ರಚಾರದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಗಳ ಬಗ್ಗೆ ತಿಳಿಸಿದರು. ಶಾಸಕ ಲಾಲಾಜಿ ಆರ್ ಮೆಂಡನ್ ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ಹೆಚ್ಚಿನ ಮತಗಳ ಅಂತರದಿಂದ ಗೆಲುವನ್ನು ಪಡೆಯಲಿದ್ದಾರೆ ಎಂದರು.
ಈ ಸಂದರ್ಭ ಕಾಪುವಿನ ರಾಜ್ಯ ಚುನಾವಣಾ ಪ್ರಭಾರಿ ಸುಲೋಚನಾ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ಮಂಡಲದ ಅಧ್ಯಕ್ಷ ಶ್ರೀಕಾಂತ ನಾಯಕ್, ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಮಾಧ್ಯಮ ಸಂಚಾಲಕರಾದ ಕಿರಣ್, ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.