ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನಾಳೆ : ಉಚ್ಚಿಲದಲ್ಲಿ ಮೀನುಗಾರರ ಜೊತೆ ರಾಹುಲ್ ಗಾಂಧಿ ಸಂವಾದ

Posted On: 26-04-2023 12:52PM

ಕಾಪು : ಕರಾವಳಿ ಕರ್ನಾಟಕದಲ್ಲಿ ಮೀನುಗಾರಿಕೆ ವೃತ್ತಿಯು ಪ್ರಮುಖವಾಗಿದ್ದು ಈ ವೃತ್ತಿಯಲ್ಲಿ ಮೊಗವೀರರು ಸೇರಿದಂತೆ ವಿವಿಧ ಜಾತಿಗಳು, ಧರ್ಮಗಳ ಜನರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಜ್ಯದ ಮೀನುಗಾರರ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ ಆ ಮೂಲಕ ಅವರೆಲ್ಲರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿಯವರು ಎಪ್ರಿಲ್ 27 ರಂದು ಉಚ್ಚಿಲ ಮಹಾಲಕ್ಷ್ಮಿ ದೇವಳದ ಸಭಾಂಗಣದಲ್ಲಿ ನಡೆಯಲಿರುವ ಮೀನುಗಾರರ ಪ್ರತಿನಿಧಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಪು ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ತಿಳಿಸಿದರು.

ಅವರು ಬುಧವಾರ ಕಾಪು ರಾಜೀವ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಹುಲ್ ಗಾಂಧಿಯವರು ಹೆಲಿಕಾಪ್ಟರ್ ಮೂಲಕ 3:40 ಕ್ಕೆ ಆದಿ ಉಡುಪಿಗೆ ಆಗಮಿಸಲಿದ್ದಾರೆ. ಕಟಪಾಡಿಯಲ್ಲಿ ಅದ್ದೂರಿ ಸ್ವಾಗತವನ್ನು ಕೋರಲಿದ್ದು, ಮೂಳೂರು ಉಚ್ಚಿಲದಲ್ಲಿಯೂ ಕಾರ್ಯಕರ್ತರು, ಪಕ್ಷದ ಮುಖಂಡರು, ಹಿತೈಷಿಗಳು ಸೇರಿ ಅವರನ್ನು ಸ್ವಾಗತಿಸಲಿದ್ದಾರೆ. ಅಲ್ಲಿಂದ ನೇರವಾಗಿ ಉಚ್ಚಿಲ ಮಹಾಲಕ್ಷ್ಮಿ ದೇವಳಲದ ಸಭಾಂಗಣದಲ್ಲಿ ಜರಗುವ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎರಡು ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಕೇರಳದ ಸಂಸದರಾದ ಪ್ರತಾಪನ್, ಕೇರಳ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ನೌಷಾದ್, ರಾಜ್ಯ ಮೀನುಗಾರ ಸಂಘಟನೆ ಅಧ್ಯಕ್ಷ ಮಂಜುನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಂತಲತಾ, ಸ್ಥಳೀಯ ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಫುಟಾರ್ಡೊ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಹರೀಶ್ ಕಿಣಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಗಫೂರ್, ನವೀನ್ ಚಂದ್ರ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ, ರಾಜಶೇಖರ ಕೋಟ್ಯಾನ್, ಹರೀಶ್ ನಾಯಕ್, ದಿನೇಶ್ ಫಲಿಮಾರು, ವಿಶ್ವಾಸ್ ಅಮೀನ್, ರಮೀಝ್ ಹುಸೇನ್, ಶರ್ಫುದ್ದೀನ್, ವಿಲ್ಸನ್ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.