ಉಡುಪಿ : ಮಾಂಗ್ರೋವ್ ವನದ ಮಧ್ಯೆ ಕಯಾಕ್ ಮೂಲಕ ವಿನೂತನ ರೀತಿಯಲ್ಲಿ ಮತದಾನ ಜಾಗೃತಿ
Posted On:
28-04-2023 03:04PM
ಉಡುಪಿ : ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂದಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಕುರಿತಂತೆ ಸ್ವೀಪ್ ವತಿಯಿಂದ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಅತ್ಯಂತ ವಿಶಿಷ್ಟ ರೀತಿಯಲ್ಲಿ ಹೊಳೆಯಲ್ಲಿ ಕಯಾಕಿಂಗ್ ಮೂಲಕ ತೆರಳಿ ಮಾಂಗ್ರೋವ್ ಕಾಡುಗಳ ಮಧ್ಯೆ ಕಯಾಕ್ ಗಳಲ್ಲಿ ವಿನೂತನ ರೀತಿಯಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಲಾಗಿದೆ.
ಜಿಲ್ಲಾಡಳಿತ ಉಡುಪಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಬುಧವಾರ, ಸಾಲಿಗ್ರಾಮದ ಸೀತಾ ನದಿಯ ಹಿನ್ನೀರಿನಲ್ಲಿ ನಡುವಿನ ದಟ್ಟ ಕಾಂಡ್ಲಾವನದ ನಡುವೆ ಕಯಾಕಿಂಗ್ ಮಾಡಲು ಬಳಸುವ ದೋಣಿಗಳ ಮೂಲಕ ಮತದಾನ ಜಾಗೃತಿಯ ಸಂದೇಶವನ್ನು ಸಾರಲಾಯಿತು.
ಈ ಕಾರ್ಯಕ್ರಮದ ಅಂಗವಾಗಿ ಸಾಲಿಗ್ರಾಮ ಬಳಿಯ ಕಯಾಕಿಂಗ್ ಪಾಯಿಂಟ್ ಬಳಿಗೆ ತೆರಳಿದ ,ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಕೂರ್ಮರಾವ್ ಎಂ , ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ , ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಯತೀಶ್, ಅವರು ಕಯಾಕಿಂಗ್ ಪ್ರಾರಂಭದ ಸ್ಥಳದಲ್ಲಿ ತುಳುನಾಡಿನ ಸಾಂಪ್ರದಾಯಿಕ ಅಡಿಕೆ ಮುಟ್ಟಾಳೆ ಧರಿಸಿ, ಸ್ಥಳದಲ್ಲಿ ಅಳವಡಿಸಲಾಗಿದ್ದ ನೈತಿಕ ಮತದಾನ ಪ್ರತಿಜ್ಞೆ ಕುರಿತ ಫಲಕದಲ್ಲಿ ಸಹಿ ಮಾಡಿ, ಸಂಪೂರ್ಣ ಸುರಕ್ಷತಾ ಉಪಕರಣಗಳನ್ನು ಧರಿಸಿ ಕಯಾಕಿಂಗ್ ಆರಂಭಿಸಿದರು.
ಸುಮಾರು 30 ನಿಮಿಷಗಳ ಕಯಾಕಿಂಗ್ ನಂತರ ಮಾಂಗ್ರೋವ್ ಕಾಡುಗಳ ಮಧ್ಯೆ ಇರುವ ಪ್ರದೇಶದಲ್ಲಿ ಸುಮಾರು 40 ಕ್ಕೂ ಹೆಚ್ಚು ಕಯಾಕ್ ದೋಣಿಗಳ ಮೂಲಕ ಮತದಾನ ದಿನವಾದ, ಮೇ 10 ದಿನಾಂಕದ ಚಿತ್ರಣ ರೂಪಿಸಿ ಮತ್ತು ಮತದಾನ ಜಾಗೃತಿಯ ಫಲಕವನ್ನು ನೀರಿನ ಮೇಲೆ ಪ್ರದರ್ಶಿಸಿ ಅತ್ಯಂತ ಆಕರ್ಷಕ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.
ಕಯಾಕಿಂಗ್ ನ ಆರಂಭದ ಸ್ಥಳದಿಂದ ನದಿ ಮಧ್ಯದ ಕಾರ್ಯಕ್ರಮ ನಡೆಯವ ಸ್ಥಳದವರೆಗೂ ನದಿಯಲ್ಲಿ ಮತದಾನ ಜಾಗೃತಿ ಸಾರುವ ಯಕ್ಷಗಾನ ಮುಖುಟ ಮಾದರಿಯ ಆಕೃತಿಗಳು ಗಮನ ಸೆಳೆದವು.
ಇದೇ ಸಂದರ್ಭದಲ್ಲಿ, ಕಯಾಕಿಂಗ್ ಮೂಲಕ ಆ ಪ್ರದೇಶಕ್ಕೆ ಆಗಮಿಸಿದ್ದ ಮಣೂರು ಪಡುಕೆರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಭೋಧಿಸಿ,ಮತದಾನ ದಿನಾಂಕವನ್ನು ಒಳಗೊಂಡ ಬಲೂನ್ಗಳನ್ನು ಹಾರಿಬಿಡುವ ಮೂಲಕ ಕೂಡಾ ಜಾಗೃತಿ ಮೂಡಿಸಲಾಯಿತು.
ಈ ವಿಶಿಷ್ಠ ಕಾರ್ಯಕ್ರಮಕ್ಕೆ ಸಾಲಿಗ್ರಾಮ ಕಯಕಿಂಗ್ ಪಾಯಿಂಟ್ ನಲ್ಲಿ ಕಾರ್ಯನಿರ್ವಹಿಸುವ ವಿವಿಧ ಸಂಸ್ಥೆಗಳು ಮತ್ತು ಸಿಬ್ಬಂದಿ ಅಗತ್ಯ ಸಹಕಾರ ನೀಡುವುದರ ಮೂಲಕ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು.