ಮತ ಮಾರಿಕೊಳ್ಳಬೇಡಿ : ನ್ಯಾ.ಶಾಂತವೀರ ಶಿವಪ್ಪ
Posted On:
28-04-2023 04:53PM
ಉಡುಪಿ :ಮೇ 10 ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ, ತಮ್ಮ ಮತವನ್ನು ಮಾರಿಕೊಳ್ಳದೇ, ಉತ್ತಮ ಅಭ್ಯರ್ಥಿಗೆ ಮತಚಲಾಯಿಸುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.
ಅವರು ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮದರ್ಜೆಕಾಲೇಜು ಮತ್ತು ಸ್ನಾತಕೋತ್ತರಅಧ್ಯಯನ ಕೇಂದ್ರದಲ್ಲಿ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ, ಮತದಾನ ಜಾಗೃತಿ ಸಾರುವ ಟ್ಯಾಬ್ಲೋ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಚುನಾವಣೆಯಲ್ಲಿ ಬಹುತೇಕ ಯುವಜನತೆ ಮೊದಲ ಬಾರಿಗೆ ಮತ ಚಲಾಯಿಸುವ ಸಂಭ್ರಮದಲ್ಲಿದ್ದು, ಯಾವುದೇ ಆಮಿಷಗಳಿಗೆ ಬಲಿಯಾಗದೇ, ತಮ್ಮ ಮುಂದಿನ ಭವಿಷ್ಯಕ್ಕೆಉತ್ತಮ ಯೋಜನೆ ರೂಪಿಸುವ, ಉದ್ಯೋಗ ಸೃಷ್ಠಿಸುವ ಆಲೋಚನೆಯಿರುವ, ಪ್ರಾಮಾಣಿಕ ಮತ್ತು ನೈತಿಕತೆಯಿರುವ ಅಭ್ಯರ್ಥಿಗೆ ಮತ ನೀಡುವುದರ ಮೂಲಕ ತಮ್ಮ ಹಕ್ಕು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ವಿದ್ಯಾರ್ಥಿನಿಯರಿಗೆ ಮತದಾನದ ಪ್ರತಿಜ್ಞಾ ವಿಧಿ ಭೋದಿಸಿದ ಜಿಲ್ಲಾಧಿಕಾರಿಕೂರ್ಮಾರಾವ್ ಎಂ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವಜನತೆ ಮತದಾರರ ಪಟ್ಟಿಗೆ ತಮ್ಮ ಹೆಸರು ನೊಂದಣಿ ಮಾಡಿದ್ದು, ಇದರಿಂದ ಜಿಲ್ಲೆಗೆ ಚುನಾವಣಾ
ಆಯೋಗದಿಂದ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಸಹ ಬಂದಿದೆ. ಮತದಾನ ದಿನದಂದು ಜಿಲ್ಲೆಯ ಎಲ್ಲಾ ಯುವಜನತೆ ತಪ್ಪದೇ ತಮ್ಮ ಮತದಾನದ ಹಕ್ಕು ಚಲಾಯಿಸುವ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾಎಸ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಉಡುಪಿ ನಗರಸಭೆಯ ಪೌರಾಯುಕ್ತ ರಮೇಶ್ ನಾಯಕ್ ಹಾಗೂ ಕಾಲೇಜಿನ ಉಪನ್ಯಾಸಕರು ಹಾಗೂ ಮತ್ತಿತರರು ಭಾಗವಹಿಸಿದ್ದರು.