ಕಾಪು : ನನ್ನ ಶಾಸಕತ್ವದ ಅವಧಿಯಲ್ಲಿ ಕಾಪುವಿನಲ್ಲಿ ಅಭಿವೃದ್ಧಿಯ ಮೈಲಿಗಲ್ಲನ್ನೇ ಸ್ಥಾಪಿಸಿದ್ದೇನೆ. ಆದರೂ ನನ್ನನ್ನು ಕಳೆದ ಬಾರಿ ಸೋಲಿಸಿದ್ದೀರಿ. ಈ ಬಾರಿಯಾದರೂ ಕಾಪು ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ಅಭಿವೃದ್ಧಿಗೆ ಬೆಲೆ ಇದೆ ಅಂತಾ ಸಾಬೀತು ಮಾಡೋ ಕೆಲಸವನ್ನು ಮತದಾರರು ಮಾಡಲೇಬೇಕಿದೆ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಉದ್ಯಾವರ ಬಿಲ್ಲವ ಮಹಾಮಂಡಲದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಹಿರಿಯರ ಆಶೀರ್ವಾದ ಪಡೆದು ಮಾತನಾಡಿದರು.
ಈ ಬಾರಿ ಕಾಪು ಕ್ಷೇತ್ರ ಪ್ರಾಮಾಣಿಕತೆ, ಅಭಿವೃದ್ಧಿ ಮತ್ತು ಹಣದ ಹೊಳೆಯ ನಡುವಿನ ಚುನಾವಣೆಯಾಗಿ ಮಾರ್ಪಟ್ಟಿದೆ. ಕಾಪುವಿನ ಮತದಾರರು ಬಹಳಷ್ಟು ಪ್ರಬುದ್ಧರಿದ್ದಾರೆ. ಈ ಬಾರಿ ಪ್ರಾಮಾಣಿಕತೆ ಮತ್ತು ಅಭಿವೃದ್ಧಿಗೆ ಮತ ಹಾಕುತ್ತಾರೆ ಅನ್ನೋ ನಂಬಿಕೆ ನನಗಿದೆ. ಸೋತ ಮೇಲೂ ಐದು ವರ್ಷಗಳ ಜನರ ನಡುವೆ ಇದ್ದು ಜನತೆಯ ಎಲ್ಲಾ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ. ನಾರಾಯಣಗುರುಗಳ ವಿಚಾರದಲ್ಲಿ ಜಿಲ್ಲೆಯಾದ್ಯಂತ ಬಹಳಷ್ಟು ಹೋರಾಟ ಸಂಘಟಿಸಿದ್ದೇನೆ. ನಾರಾಯಣಗುರುಗಳ ಸ್ತಬ್ಧ ಚಿತ್ರದ ವಿಚಾರದಲ್ಲಿ, ಪಠ್ಯ ಪುಸ್ತಕದ ವಿಚಾರದಲ್ಲಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಬಿಲ್ಲವ ಮುಖಂಡರ ಜೊತೆ ಇದ್ದು ಹೋರಾಟವನ್ನು ಸಂಘಟಿಸಿದ್ದೇನೆ. ಈ ಬಾರಿ ನನ್ನ ಕೊನೆಯಚುನಾವಣೆ. ನನ್ನನ್ನು ಗೆಲ್ಲಿಸಿ ಜನತೆಯ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡುತ್ತೀರಿ ಅನ್ನೊ ನಂಬಿಕೆ ಇದೆ ಅಂತ ಸೊರಕೆ ಹೇಳಿದರು.
ಒಂದು ವೇಳೆ ಗೆದ್ದು ಬಂದಲ್ಲಿ ಸಮಾಜದ ಎಲ್ಲಾ ವರ್ಗದವರ ಪರ ನಿಂತು ಸಮಾನತೆಯಿಂದ ಕೆಲಸ ಮಾಡುತ್ತೇನೆ ಎಂಬ ವಾಗ್ದಾನ ಮಾಡುತ್ತೇನೆ ಎಂದು ಸೊರಕೆ ಹೇಳಿದರು.
ಈ ಸಂದರ್ಭ ಉದ್ಯಾವರ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸತೀಶ್ ಕೋಟ್ಯಾನ್, ಕಾರ್ಯದರ್ಶಿ ಆನಂದ ಉದ್ಯಾವರ, ಯುವ ಜನ ಕಲಾಮಂಡಳಿ ಅಧ್ಯಕ್ಷ ಶಿವರಾಮ ಗುರಿಕಾರರರು, ಬಿಲ್ಲವ ಮಖಂಡರು , ಮಹಿಳಾ ಘಟಕದ ಎಲ್ಲಾ ಮುಖಂಡರು , ಕಾಂಗ್ರೆಸ್ ಮುಖಂಡರಾದ ಉದ್ಯಾವರ ನಾಗೇಶ್ ಕುಮಾರ್, ಗಿರೀಶ್ ಕುಮಾರ್, ರಾಯಸ್ ಫೆರ್ನಾಂಡೀಸ್, ಅಬೀದ್ ಅಲಿ, ಶೇಖರ ಕೋಟ್ಯಾನ್, ಸಾಯಿನಾಥ್, ನಿತೀನ್ ಸಾಲ್ಯಾನ್, ಸೊಹೇಲ್ ರಹಮತುಲ್ಲಾ, ಭಾಸ್ಕರ ಕೋಟ್ಯಾನ್, ಸಚಿನ್, ರಿಯಾಝ್ ಪಳ್ಳಿ, ಮೇರಿ ಡಿಸೋಜ, ಪೂರ್ಣಿಮಾ, ಆಶಾ, ಹೆಲೆನ್ ಫೆರ್ನಾಂಡೀಸ್, ದಿವಾಕರ ಬೊಳ್ಜೆ, ಸರೋಜ, ಗಿರೀಶ್ ಗುಡ್ಡೆಯಂಗಡಿ, ಮೀರಾ, ದಯಾನಂದ, ನಯಾಝ್ ಪಳ್ಳಿ, ಅನ್ಸರ್, ಆಶಾ ಸುರೇಶ್, ಸತೀಶ್ ಉಪಸ್ಥಿತರಿದ್ದರು.