ಕಾಪು : ಬಿಜೆಪಿ ಹೈನುಗಾರರಿಗೆ ದ್ರೋಹವೆಸಗುತ್ತಿದೆ ; ಹೈನುಗಾರರ ರಕ್ಷಣೆಗೆ ಕಾಂಗ್ರೆಸ್ ಬದ್ಧ - ದೇವಿಪ್ರಸಾದ್ ಶೆಟ್ಟಿ
Posted On:
30-04-2023 11:51AM
ಕಾಪು : ಕೇಂದ್ರ ಸರಕಾರದಿಂದ ರಾಷ್ಟ್ರೀಕೃತ ಬ್ಯಾಂಕುಗಳ ಸಹಿತ ಎಲ್ಲಾ ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಇದೀಗ
ಕೆಎಂಎಫ್ ನ್ನು ಖಾಸಗೀಕರಣ ಮಾಡಲು ಯತ್ನಿಸಲಾಗುತ್ತಿದೆ. ಗುಜರಾತ್ ಮೂಲದ ಅಮೂಲ್ ಸಂಸ್ಥೆಯವರಿಗೆ ಕೆಎಂಎಫ್ ನ್ನು ಗುತ್ತಿಗೆ ನೀಡುವ ಮಾತುಕತೆಯಾಗಿದೆ ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಅವರು ಆದಿತ್ಯವಾರ ಕಾಪುವಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಕಳೆದ 2 ದಿನಗಳಿಂದ ಹಾಲು ಒಕ್ಕೂಟದ ಪ್ರಾಥಮಿಕ ಸಂಘಗಳಿಂದ ನಮಗೆ ದೂರು ಬಂದಿದ್ದು ಅದರ ಪ್ರಕಾರ ಹೈನುಗಾರರ ಹಾಲಿಗೆ ಡಿಗ್ರಿ, ಫ್ಯಾಟ್ ಇಲ್ಲ ಎಂಬ ಸಬೂಬು ನೀಡಿ ಹಾಲನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಇದರಿಂದ ಹೈನುಗಾರಿಕೆಯನ್ನು ನಂಬಿದ ಕುಟುಂಬಗಳಿಗೆ ತೊಂದರೆಯಾಗಿದೆ.
ಅಮೂಲ್ ನ್ನು ಮಾರುಕಟ್ಟೆಗೆ ಪರಿಚಯಿಸಬೇಕೆನ್ನುವ ಹುನ್ನಾರದ ಹಿಂದೆ ಅಮಿತ್ ಶಾ ಮತ್ತು ಬಿಜೆಪಿ ಪಕ್ಷದ ಕುತಂತ್ರವಿದೆ. ರೈತರ ಜೀವನಾಡಿಯಾಗಿರುವ ಹೈನುಗಾರಿಕೆಗೆ ದ್ರೋಹವೆಸಗುತ್ತಿದ್ದಾರೆ. ಇದನ್ನು ಮುಂದುವರಿಸಿದರೆ ಚುನಾವಣಾ ಪೂರ್ವದಲ್ಲಿಯೇ ಕೆಎಂಎಫ್ ಗೆ ದೊಡ್ಡಮಟ್ಟದಲ್ಲಿ ಮುತ್ತಿಗೆ ಹಾಕಿ ರೈತರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ.
ಇಂದಿನಿಂದ ರೈತರ ಹಾಲನ್ನು ಹಿಂದಕ್ಕೆ ಕಳುಹಿಸಬಾರದು. ರೈತರ ಜೀವನಕ್ಕೆ ತೊಂದರೆ ಮಾಡಿದರೆ ಕಾಂಗ್ರೆಸ್ ರೈತರ ಪರವಾಗಿದ್ದೇವೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಅಮೂಲನ್ನು ಈ ರಾಜ್ಯದಿಂದ ಒದ್ದೋಡಿಸುತ್ತೇವೆ. ಹಾಲಿಗೆ ಬೆಂಬಲ ಬೆಲೆಯನ್ನು ನೀಡುತ್ತೇವೆ ಎಂದು ಹೇಳಿದರು.
ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.