ಬೇಸಿಗೆ ಶಿಬಿರಗಳು ಮಕ್ಕಳ ಮನೋ ವಿಕಸನಕ್ಕೆ ಸಹಕಾರಿ : ನ್ಯಾ.ಶರ್ಮಿಳಾ
Posted On:
01-05-2023 05:42PM
ಉಡುಪಿ : ಮಕ್ಕಳು ರಜೆ ಸಮಯದಲ್ಲಿ ಮನೆಯಲ್ಲಿಯೇ ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದು, ಅವರನ್ನು ಬೇಸಿಗೆ ಶಿಬಿರಗಳಿಗೆ ಕಳುಹಿಸುವುದರಿಂದ, ಅವರು ಇತರೇ ಮಕ್ಕಳೊಂದಿಗೆ ಬೆರೆಯುವ ಮೂಲಕ ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕರಿಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಹೇಳಿದರು.
ಅವರು ಉಡುಪಿಯ ಬಾಲ ಭವನದಲ್ಲಿ, ರಾಜ್ಯ ಬಾಲಭವನ ಸೊಸೈಟಿ (ರಿ) ಬೆಂಗಳೂರು, ಜಿಲ್ಲಾ ಪಂಚಾಯತ್ ಉಡುಪಿ, ಕಾನೂನು ಸೇವಾ ಪ್ರಾಧಿಕಾರ ಉಡುಪಿ, ಜಿಲ್ಲಾ ಬಾಲ ಭವನ ಸಮಿತಿ ಉಡುಪಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ನಡೆದ, 2023-24 ನೇ ಸಾಲಿನ ಬೇಸಿಗೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದರು.
ಬುದ್ದಿವಂತರ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಉಡುಪಿಯಲ್ಲಿ ಯುವ ಜನತೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳದ ಸಂಗತಿಯಾಗಿದೆ. ಯುವ ಜನರಲ್ಲಿ ಏಕಾಂಗಿತನ, ಆತ್ಮ ವಿಶ್ವಾಸದ ಕೊರತೆ, ನಕರಾತ್ಮಕ ಚಿಂತನೆಯಿಂದ ಆತ್ಮಹತ್ಯೆಗಳು ಸಂಭವಿಸಲಿದ್ದು, ಇತರೊಂದಿಗೆ ಬೆರೆತು, ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಆತ್ಮ ವಿಶ್ವಾಸ ಮತ್ತು ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದರು.
ಬೇಸಿಗೆ ಶಿಬಿರಗಳ ಮೂಲಕ ಮಕ್ಕಳಲ್ಲಿನ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ದೊರೆಯುವುದರ ಜೊತೆಗೆ ಮಕ್ಕಳು ವಿನೂತನ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಮನೋ ವಿಕಾಸ ಹೊಂದಿ, ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗಲಿದೆ. ಬೇಸಿಗೆ ರಜೆಯ ಸದುಪಯೋಗವಾಗಲಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ, ಸಂಪನ್ಮೂಲ ವ್ಯಕ್ತಿಗಳಾದ ನಿರಂಜನ ಭಟ್, ಹೇಮಲತಾ ರಾವ್, ಸ್ಪೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಬಾಲಭವನದ ಮೇಲ್ವಿಚಾರಕಿ ಶೈಲಾ ಸ್ವಾಗತಿಸಿದರು. ಶ್ವೇತಾ ನಿರೂಪಿಸಿ ವಂದಿಸಿದರು.