ಕಾಪು : ಭಾರತೀಯ ಜನತಾ ಪಕ್ಷದ ಕಾಪು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಣಾಳಿಕೆಯನ್ನು ದೆಹಲಿ ಶಾಸಕರಾದ ವಿಜೇಂದ್ರ ಗುಪ್ತ ಬುಧವಾರ ಕಾಪು ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಕಾಲದಲ್ಲಿ ಹಲವಾರು ಯೋಜನೆಗಳು ಚಾಲ್ತಿಗೆ ಬಂದಿದೆ. ಮುಂದೆಯೂ ಕಾಪು ಕ್ಷೇತ್ರದ ಅಭಿವೃದ್ಧಿ ನಮ್ಮ ಗುರಿ ಎಂದರು.
ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಚುನಾವಣಾ ಪ್ರಣಾಳಿಕೆಯ ಪ್ರಮುಖಾಂಶಗಳು :
ಪ್ರಣಾಳಿಕೆಯಲ್ಲಿ ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆಗೆ ಒತ್ತು, ಕಾಪು ಲೈಟ್‌ಹೌಸ್ ಬೀಚ್‌ನ ಸಮಗ್ರ ಅಭಿವೃದ್ಧಿ ಮೂಲಕ ಪ್ರವಾಸಿಗರ ಆಕರ್ಷಣೆ, ಸ್ಥಳೀಯರಿಗೆ ಉದ್ಯೋಗದ ಅವಕಾಶ,
ಕಾಪು ತಾಲೂಕಿಗೆ ಸುಸಜ್ಜಿತವಾದ ಅಗ್ನಿ ಶಾಮಕ ಠಾಣೆಯ ಮಂಜೂರಾತಿ, ಕಾಪು ಪುರಸಭಾ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದು, ಕಾಪು ದೀಪಸ್ತಂಭದ ಬಳಿ (ಉತ್ತರ ದಿಕ್ಕು) ಸರ್ವಋತುವಿನಲ್ಲಿಯೂ ಮೀನುಗಾರರಿಗೆ ಅನುಕೂಲವಾಗುವಂತೆ ಮೀನುಗಾರಿಕಾ ಜಟ್ಟಿ ನಿರ್ಮಾಣ, ಕಾಪು ತಾಲೂಕಿನಲ್ಲಿ ಪ್ರಮುಖ ಸರಕಾರಿ ಕಟ್ಟಡಗಳ ನಿರ್ಮಾಣ, ಪ್ರವಾಸಿ ಮಂದಿರ ಕಟ್ಟಡ ಹಾಗೂ ತಾಲೂಕು ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಯೋಜನೆ, ಹೆಜಮಾಡಿಯಲ್ಲಿ ತಾಲೂಕು ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಪರಿವರ್ತನೆ, ಕಾಪು ತಾಲೂಕು ಕೇಂದ್ರದಲ್ಲಿ ವಿವಿಧೋದ್ದೇಶಕ್ಕಾಗಿ ಸುಸಜ್ಜಿತವಾದ ಮಾರುಕಟ್ಟೆ ಪ್ರಾಂಗಣ ನಿರ್ಮಾಣ, ಕಾಪು ತಾಲೂಕಿನಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣ.
ಕಾಪು ವಿಧಾನಸಭಾ ಕ್ಷೇತ್ರದ ನಗರ ಭಾಗದ ವಸತಿ ರಹಿತರಿಗೆ ವಸತಿ ಸೌಲಭ್ಯ ಹಾಗೂ ಗ್ರಾಮೀಣ ಭಾಗದ ನಿವೇಶನ ರಹಿತರಿಗೆ ನಿವೇಶನ ಸಹಿತ ವಸತಿ ಸೌಲಭ್ಯ ಒದಗಿಸುವ ಗುರಿ, ಸಮುದ್ರ ಕೊರೆತಕ್ಕೆ ಶಾಶ್ವತ ತಡೆಗೋಡೆ ಯೋಜನೆ,
ವಿಧಾನಸಭಾ ಕ್ಷೇತ್ರದಾದ್ಯಂತ ವಿವಿಧ ಕೆರೆಗಳ ಅಭಿವೃದ್ಧಿ/ಅಂತರ್ಜಲ ವೃದ್ಧಿಗೆ ಕ್ರಮ, ಹಿರಿಯಡ್ಕ ಭಾಗಗಳಲ್ಲಿ ಸರಕಾರಿ ಜಾಗದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಕೈಗಾರಿಕಾ ಪ್ರದೇಶದ ಗುರುತಿಸುವಿಕೆ ಮತ್ತು ಅಭಿವೃದ್ಧಿ, ನಾಡದೋಣಿ ಮೀನುಗಾರರಿಗೆ ಪ್ರತೀ ತಿಂಗಳು ಪ್ರತೀ ದೋಣಿಗೆ 300 ಲೀಟರ್ ಸೀಮೆಎಣ್ಣೆ ವರ್ಷದಲ್ಲಿ 10 ತಿಂಗಳು ನಿರಂತರವಾಗಿ ನೀಡುವುದು, ಹಿಂದುಳಿದ ವರ್ಗಕ್ಕೆ ಸೇರಿದ ಸಣ್ಣ ಸಣ್ಣ ಸಮುದಾಯಗಳಿಗೆ ನಿವೇಶನ ಒದಗಿಸಿ, ಸಮುದಾಯ ಭವನ ನಿರ್ಮಾಣ. ಶಿಕ್ಷಣ, ಸ್ವಂತ ಉದ್ಯೋಗ ಹಾಗೂ ಇನ್ನಿತರ ಅಭಿವೃದ್ಧಿಗೆ ಯೋಜನೆ ರೂಪಿಸುವುದು, ಕಾಪುವಿನ ಹೃದಯ ಭಾಗದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಸಹಿತ ಸಂಕೀರ್ಣ ನಿರ್ಮಾಣಕ್ಕೆ ಆದ್ಯತೆ, ಕಾಪು ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳ ರಸ್ತೆ, ಚರಂಡಿ, ಮಳೆ ನೀರಿನ ತೋಡು, ಬೀದಿ ದೀಪ ಸಹಿತವಾಗಿ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಲು ವ್ಯವಸ್ಥಿತ ಯೋಜನೆ, ಭೂ ಪರಿವರ್ತಿತ ನಿವೇಶನದಲ್ಲಿ ಏಕ ವಿನ್ಯಾಸಗೊಳ್ಳದ ವಸತಿ ನಿವೇಶನಕ್ಕೆ ಕಾನೂನು ಸರಳೀಕರಣಗೊಳಿಸಲು ಕ್ರಮ ಕೈಗೊಳ್ಳುವುದು, 60 ವರ್ಷ ದಾಟಿದ ಮೀನುಗಾರರಿಗೆ ಪಿಂಚಣಿ ಯೋಜನೆಗೆ ಸರಕಾರದಿಂದ ಮಂಜೂರಾತಿ, 80 ಬಡಗುಬೆಟ್ಟು ಗ್ರಾಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಸ್ಟರ್ ಪ್ಲಾನ್‌ನಲ್ಲಿ ಗುರುತಿಸಿರುವ ಕೈಗಾರಿಕಾ ವಲಯವನ್ನು ವಸತಿ ವಲಯವಾಗಿ ಬದಲಾಯಿಸುವುದು,
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ನಿರ್ಮಾಣ,
ಕಾಪು ತಾಲೂಕಿಗೆ ನ್ಯಾಯಾಲಯಗಳ ಸ್ಥಾಪನೆ,
ಕರಾವಳಿ ಭಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ
ನಿರ್ಮಾಣ, ಅರ್ಹ ಫಲಾನುಭವಿಗಳಿಗೆ ಮನೆ ನಿವೇಶನ ನೀಡುವುದು, ಪುರಸಭೆ ವ್ಯಾಪ್ತಿಯೊಳಗೆ ಬಫಾರ್ ಝೇನ್ ಕೈಬಿಡಲು ಸರಕಾರದ ಮಟ್ಟದಿಂದ ಆದೇಶಿಸಿ ಸರಳೀಕರಣಗೊಳಿಸುವುದು, ಅಕ್ರಮ-ಸಕ್ರಮ ಯೋಜನೆ ಪರಿಣಾಮಕಾರಿಯಾಗಿ ಜಾರಿ, ಕಾಪು ಕ್ಷೇತ್ರದ ಅತ್ಯಂತ ಹುಸಿ ಒಕ್ಕಲು ಸಾಗುವಾಳಿದಾರರಿಗೆ ಅವರ ಹೆಸರಿಗೆ ಪಹಣಿ ದಾಖಲಿಸಲು ಕ್ರಮವಹಿಸುವುದು. ಈಗಿರುವ ಪಾಲಿಟೆಕ್ನಿಕ್ ಕಾಲೇಜನ್ನು ಮೇಲ್ದರ್ಜೆಗೊಳಿಸುವುದು, ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ,
ಹೆಜಮಾಡಿ/ಪಡುಬಿದ್ರಿಯಲ್ಲಿ ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಮತ್ಸ್ಯಗ್ರಾಮ ಸ್ಥಾಪನೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಮೇಲ್ದರ್ಜೆಗೆ, ಐ.ಟಿ. ಪಾರ್ಕ್ ಸ್ಥಾಪನೆ, ಜವಳಿ ಪಾರ್ಕ್ ಸ್ಥಾಪನೆ,
ವಿಧಾನಸಭಾ ಕ್ಷೇತ್ರಾದ್ಯಂತ ಪ್ರವಾಸೋದ್ಯಮಕ್ಕೆ ಆದ್ಯತೆ, ಧಾರ್ಮಿಕ ಕೇಂದ್ರಗಳ ನವೀಕರಣ/ ಹೊಸತನ/ಕಾರಿಡಾರ್ ನಿರ್ಮಾಣ.
ಈ ಸಂದರ್ಭ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಮಂಡಲದ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಚುನಾವಣಾ ಉಸ್ತುವಾರಿ ಸುಲೋಚನ ಭಟ್, ಪಕ್ಷದ ಪ್ರಮುಖರಾದ ಪ್ರಕಾಶ್ ಶೆಟ್ಟಿ, ಕೇಸರಿ ಯುವರಾಜ್, ಉಪೇಂದ್ರ ನಾಯಕ್, ಶಿಲ್ಪಾ ಸುವರ್ಣ, ಶ್ಯಾಮಲಾ ಕುಂದರ್, ಕಿರಣ್ ಆಳ್ವ ಉಪಸ್ಥಿತರಿದ್ದರು.