ಕಾಪು : ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರಕ್ಕೆ ಬ್ರೇಕ್ ; ಗೆಲುವು ಕಂಡ ಬಿಜೆಪಿ ; ಕಾರ್ಯಕರ್ತರಲ್ಲಿ ಸಂಭ್ರಮ
Posted On:
13-05-2023 07:10PM
ಕಾಪು : ಯಾವುದೇ ಶುಭ ಸಮಾರಂಭಗಳಲ್ಲೂ ಚರ್ಚಿತವಾದ ವಿಷಯ ಅವರು ಗೆಲ್ಲುತ್ತಾರೆ ಇವರು ಗೆಲ್ಲುತ್ತಾರೆ ಎಂದು, ಜಾತಿ ಲೆಕ್ಕಾಚಾರ, ಚುನಾವಣಾ ಪೂರ್ವ, ಚುನಾವಣೋತ್ತರ ಸಮೀಕ್ಷೆಗಳು, ಪಕ್ಷಗಳ ಕಾರ್ಯಕರ್ತರು ನಮ್ಮದೇ ಪಕ್ಷದ ಗೆಲುವು ಎಂಬ ಅಭಿಲಾಷೆಯಲ್ಲಿ ಬಿರುಬೇಸಿಗೆಯನ್ನು ಲೆಕ್ಕಿಸದೆ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕೆಂಬ ತವಕ, ತುಡಿತದಲ್ಲಿದ್ದರು. ಅಂತೂ ಮೇ 13ರಂದು ಫಲಿತಾಂಶ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ 5 ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಬಿದ್ದಿವೆ. ಇದರಲ್ಲಿ ಮತ ಎಣಿಕೆಯ ಕೆಲವು ಸುತ್ತುಗಳವರೆಗೆ ಬೈಂದೂರು ಮತ್ತು ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಕೆಲವೇ ಅಂತರದ ಮತಗಳ ಸ್ಪರ್ಧೆಯನ್ನು ಬಿಜೆಪಿಗೆ ನೀಡುತ್ತಾ ಬಂದರೂ ಕೊನೆಯ ಗೆಲುವು ಬಿಜೆಪಿಯದ್ದಾಗಿತ್ತು. ಉಳಿದಂತೆ ಮೊದಲಿಂದ ಕೊನೆಯವರೆಗೂ ಬಹುಮತದ ಅಂತರವನ್ನೇ ಕಾಯ್ದ ಬಿಜೆಪಿ ಅಭ್ಯರ್ಥಿಗಳು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಭದ್ರಗೊಳಿಸಿದ್ದಾರೆ.
ಕಾಪು ಕ್ಷೇತ್ರದಲ್ಲಿ 5 ಅಭ್ಯರ್ಥಿಗಳು ವಿವಿಧ ಪಕ್ಷದಿಂದ ಕಣದಲ್ಲಿದ್ದರು. ಅವರು ಪಡೆದುಕೊಂಡ ಇವಿಎಮ್ ಮತ್ತು ಪೋಸ್ಟಲ್ ಮತಗಳ ಒಟ್ಟು ಅಂಕಿಅಂಶ ಇಂತಿವೆ :
ಗುರ್ಮೆ ಸುರೇಶ್ ಶೆಟ್ಟಿ (ಬಿಜೆಪಿ) 80,559
ವಿನಯ ಕುಮಾರ್ ಸೊರಕೆ (ಕಾಂಗ್ರೆಸ್) 67555
ಸಬಿನಾ ಸಮದ್ ( ಜೆಡಿಎಸ್) 568
ಎಸ್.ಆರ್. ಲೋಬೊ (ಆಪ್) 252
ಮಹಮದ್ ಹನೀಫ್ (ಎಸ್‌ಡಿಪಿಐ) 1616
ನೋಟಾ: 805
ಒಟ್ಟು ಚಲಾವಣೆಯಾದ ಮತ: 1,51,355
ಗೆಲುವಿನ ಅಂತರ : 13,004
ಎಲ್ಲಾ ಲೆಕ್ಕಾಚಾರಗಳನ್ನು ಜನರು ಮಾಡಿದರೂ ಅಂತಿಮವಾಗಿ ಕಾಪು ಕ್ಷೇತ್ರದಲ್ಲಿ ಹಲವಾರು ಸಮಾಜಸೇವೆಯ ಮೂಲಕ ಗುರುತಿಸಿಕೊಂಡಿದ್ದ
ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಗೆಲುವಿನ ನಗೆ ಬೀರಿದ್ದಾರೆ. ರಾಜಕಾರಣದಲ್ಲಿ ಅನುಭವಿಯಾಗಿದ್ದು ಕ್ಷೇತ್ರದ ಜನರೊಂದಿಗೆ ಬೆರೆತಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಸೋಲನ್ನು ಕಂಡಿದ್ದಾರೆ.
ಒಟ್ಟಿನಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಕ್ಷೇತ್ರದ ಜನರಿಗೆ ಒಂದಷ್ಟು ಭರವಸೆಯಿದೆ, ಅಭಿವೃದ್ಧಿಯ ಪಥದಲ್ಲಿ ಸಾಗಿ ಸರ್ವಾಂಗೀಣ ಬೆಳವಣಿಗೆಯಾಗಿ ರಾಜ್ಯ, ದೇಶದಲ್ಲೇ ಕಾಪು ಕ್ಷೇತ್ರ ಮಾದರಿಯಾಗಲಿ....