ಕಾಪು : ಇಲ್ಲಿನ ಬಿರುವೆರ್ ಕಾಪು ಸೇವಾ ಸಮಿತಿಯ ನೇತೃತ್ವದಲ್ಲಿ ಪುನರ್ ನಿರ್ಮಿಸಲಾದ ಮಲ್ಲಾರು ಗರಡಿ ಬಳಿಯ ಕೃಷ್ಣಪ್ಪ ಪೂಜಾರಿ ಮತ್ತು ಇಂದಿರಾ ಪೂಜಾರ್ತಿ ದಂಪತಿಯ ಬ್ರಹ್ಮಶ್ರೀ ಮನೆಯನ್ನು ಬುಧವಾರ ಉದ್ಘಾಟಿಸಿ, ಹಸ್ತಾಂತರಿಸಲಾಯಿತು.
ಉಡುಪಿಯ ವಕೀಲ ಸಂಕಪ್ಪ ಅಮೀನ್ ಅವರು ಮನೆಯನ್ನು ಉದ್ಘಾಟಿಸಿ ಮಾತನಾಡಿ, ಕೇವಲ ಐದು ವರ್ಷಗಳ ಹಿಂದೆ ಆರಂಭಗೊಂಡಿರುವ ಬಿರುವೆರ್ ಕಾಪು ಸೇವಾ ಸಮಿತಿಯು ಈಗಾಗಲೇ 21 ಸೇವಾ ಕಾರ್ಯಕ್ರಮಗಳನ್ನು ನಡೆಸಿದ್ದು ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಮೂಲಕ ಮಾದರಿಯಾಗುವ ಕೆಲಸವನ್ನು ಮಾಡಿದೆ. ಎಲ್ಲಾ ಪ್ರದೇಶಗಳಿಗೂ ತನ್ನ ಸೇವೆಯನ್ನು ವಿಸ್ತರಿಸುತ್ತಿರುವ ಸಮಿತಿಯ ಸೇವಾ ಕಾರ್ಯಗಳು ಇತರೆಲ್ಲಾ ಸಂಘ-ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದರು.
ಬಿರುವೆರ್ ಕಾಪು ಸೇವಾ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ರಾಕೇಶ್ ಕುಂಜೂರು ಮಾತನಾಡಿ, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ, ಗುಡಿಸಲಿನಲ್ಲಿ ವಾಸಿಸುತ್ತಿದ್ದ ಮಲ್ಲಾರು ಗರಡಿ ಬಳಿಯ ಕೃಷ್ಣಪ್ಪ ಪುಜಾರಿ ಮತ್ತು ಇಂದಿರಾ ಪೂಜಾರ್ತಿ ದಂಪತಿಯು ತಮಗಾರೂ ಆಸರೆಯಿಲ್ಲದೇ ಹರುಕು ಮುರುಕು ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಮನೆಯನ್ನು ಬಿರುವೆರ್ ಕಾಪು ಸೇವಾ ಸಮಿತಿಯ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಸುಮಾರು 1.50 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದೆ ಎಂದರು.
ಕಟಪಾಡಿ ಅರವಿಪುರಂ ಮಠ ಚರಣ್ ಶಾಂತಿ, ಶಿರ್ವ ಬಿಲ್ಲವರ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ, ಮಲ್ಲಾರು ಬಿಲ್ಲವರ ಸಂಘದ ಅಧ್ಯಕ್ಷ ಉಮೇಶ್ ಪೂಜಾರಿ, ಪುರಸಭೆ ಸದಸ್ಯರಾದ ಶೈಲೇಶ್ ಅಮೀನ್, ಉಮೇಶ್ ಕರ್ಕೇರ, ಉದ್ಯಮಿಗಳಾದ ದೀಪಕ್ ಕುಮಾರ್ ಎರ್ಮಾಳು, ರವಿ ಪೂಜಾರಿ ಇನ್ನಂಜೆ, ಹರಿಪ್ರಸಾದ್ ಶಿರ್ವ, ಬಿರುವೆರ್ ಕಾಪು ಸೇವಾ ಸಮಿತಿಯ ಉಪಾಧ್ಯಕ್ಷ ಗಣೇಶ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ವಿಕ್ಕಿ ಪೂಜಾರಿ ಮಡುಂಬು, ಅತಿಥ್ ಸುವರ್ಣ, ಸಂಧ್ಯಾ ಬಿ. ಕೋಟ್ಯಾನ್, ಅಶ್ವಿನಿ ನವೀನ್, ಅನಿಲ್ ಅಮೀನ್, ಪ್ರಮುಖರಾದ ಶರತ್ ಪೂಜಾರಿ, ಗೀತಾ ಗೋಪಾಲ್, ಬಾಬು ಪೂಜಾರಿ, ಸುಮಿತ್ರಾ ಬಾಬು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.