ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆ : ನೂರು ಶೇಕಡಾ ಫಲಿತಾಂಶ - ವಿದ್ಯಾರ್ಥಿಗಳಿಗೆ ಅಭಿನಂದನೆ, ಬೀಳ್ಕೊಡುಗೆ ಸಮಾರಂಭ
Posted On:
19-05-2023 06:51PM
ಕಾಪು : ಆತ್ಮವಿಶ್ವಾಸವೇ ಜೀವನಕ್ಕೆ ಮಾರ್ಗದರ್ಶನ. ಇದೊಂದು ಕೌಶಲ್ಯ. ಆಭರಣದಂತೆ ಆತ್ಮವಿಶ್ವಾಸ ನಮ್ಮನ್ನು ಅಲಂಕರಿಸುವಂತಿರಬೇಕು. ವಿದ್ಯಾರ್ಥಿ ದಿಸೆಯಲ್ಲಿಯೇ ಕಠಿಣ ಪರಿಶ್ರಮದ ಮೂಲಕ ಸಾಧನೆಯ ದಾರಿಯನ್ನು ಕಂಡುಕೊಳ್ಳಬೇಕು ಎಂದು ಜೀವನ ಕೌಶಲ್ಯ ತರಬೇತುದಾರರಾದ ಸುಪರ್ಣ ಶೆಟ್ಟಿ ಹೇಳಿದರು.
ಅವರು ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಯು ಐ ಸಿ ಎಸ್ ಇ ಬೋಡ್೯ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶ ಪಡೆಯಲು ಕಾರಣೀಭೂತರಾದ ವಿದ್ಯಾರ್ಥಿಗಳನ್ನು ಮತ್ತು ಉತ್ತಮ ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನೆ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸೂಕ್ತ ಅವಕಾಶವನ್ನು ಬಳಸಿ ಮುಂದುವರಿಯಬೇಕು. ಹೆತ್ತವರು ಮತ್ತು ಮಕ್ಕಳ ಅನ್ಯೋನ್ಯತೆಯ ಸಂಬಂಧಗಳ ಜೊತೆಗೆ ಪಿತೃ ಋಣ, ಲೋಕ ಋಣದ ಅರಿವಿರಬೇಕು ಎಂದರು.
ಅಭಿನಂದನೆ : ಉತ್ತಮ ಅಂಕ ಗಳಿಸಿ ಸಾಧನೆಗೈದ ರಿಧ, ಚಿರಾಗ್, ಆಶೀಶ್ ರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಯ ಸಂಚಾಲಕರಾದ ಕೆ ಪಿ ಆಚಾರ್ಯ ವಹಿಸಿದ್ದರು. ಸಂಸ್ಥೆಯ ಮುಖ್ಯಸ್ಥೆ ಶ್ವೇತ ಐತಾಳ್, ಶಿಕ್ಷಕ ವರ್ಗ, ಪೋಷಕರು ಉಪಸ್ಥಿತರಿದ್ದರು.
ಪತ್ರಕರ್ತರಾದ ರಾಕೇಶ್ ಕುಂಜೂರು ಶುಭಾಶಂಸನೆಗೈದರು. ಸಂಸ್ಥೆಯ ಮುಖ್ಯ ಶಿಕ್ಷಕಿ ಸ್ಮಿತಾ ಪಾಟೀಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.